ಮ್ಯಾಗಿ ನಂತರ ಬಾಬಾ ರಾಮ್ ದೇವ್ ನ್ಯೂಡಲ್ಸ್ ಗೆ ಬ್ರೇಕ್
ನವದೆಹಲಿ, ನ.18: ಪತಂಜಲಿ ಆಟ್ಟಾ ನ್ಯೂಡಲ್ಸ್ ಮಾರುಕಟ್ಟೆಗೆ ಬಿಡುಗಡೆ ಮಾಡಿ ವಾರ್ಷಿಕವಾಗಿ 2,000 ಕೋಟಿ ರು ಆದಾಯದ ನಿರೀಕ್ಷೆ ಇರಿಸಿಕೊಂಡಿದ್ದ ಯೋಗ ಗುರು ಬಾಬಾ ರಾಮದೇವ್ ಗೆ ಆರಂಭದಲ್ಲೇ ಆಘಾತ ಉಂಟಾಗಿದೆ. ಪತಂಜಲಿ ನ್ಯೂಡಲ್ಸ್ ಗೆ ಎಫ್ ಸಿಸಿಎ ಐ ನಿಂದ ಮಾನ್ಯತೆ ಸಿಕ್ಕಿಲ್ಲ ಎಂಬ ಸತ್ಯ ಹೊರಬಿದ್ದಿದೆ.
ನೆಸ್ಲೆ ಮ್ಯಾಗಿ ಜೊತೆ ಪೈಪೋಟಿಗೆ ಇಳಿದಿರುವ ಬಾಬಾ ರಾಮದೇವ್ ಅವರ ಸಂಸ್ಥೆ ತನ್ನ ಆಹಾರ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವುದಕ್ಕೂ ಮುನ್ನ ಬೇಕಾದ ಲೈಸನ್ಸ್ ಪಡೆದುಕೊಂಡಿಲ್ಲ ಎಂದು ಆಹಾರ ಸುರಕ್ಷತೆ ಮತ್ತು ನಿಯಂತ್ರಣ ಪ್ರಾಧಿಕಾರ (ಎಫ್ ಎಸ್ ಎಸ್ ಎ ಐ) ನ ಮುಖ್ಯಸ್ಥ ಸಿಇಒ, ಆಶೀಶ್ ಬಹುಗುಣ ಹೇಳಿದ್ದಾರೆ. [ಅಡಿಡಾಸ್ ಜತೆ ರಾಮ್ ದೇವ್ ಪೈಪೋಟಿ?]
ಪತಂಜಲಿ ಆಟ್ಟಾ ನ್ಯೂಡಲ್ಸ್ ಗೆ ಎಫ್ ಎಸ್ಎಸ್ ಎ ಐನ ಲೈಸನ್ಸ್ ಸಿಕ್ಕಿಲ್ಲ. ಈ ಬಗ್ಗೆ ನಮಗೆ ದೂರು ಬಂದಿದ್ದು ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ. ಅದರೆ, ಮಾರುಕಟ್ಟೆ ಪ್ರವೇಶಿರುವ ಆಟ್ಟಾ ನ್ಯೂಡಲ್ಸ್ ಪ್ರತಿ ಪ್ಯಾಕೇಟಿನ ಮೇಲೆ FSSAI Code: 10014012000266 ಮುದ್ರಿತವಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ, ಲೈಸನ್ಸ್ ಸಿಗದೆ ನಂಬರ್ ಹಾಕಲು ಹೇಗೆ ಸಾಧ್ಯ ಎಂದು ಗರಂ ಆದರು.

ಪತಂಜಲಿ ಆಯುರ್ವೇದದ 250 ಗ್ರಾಂನಷ್ಟು ಜೇನುತುಪ್ಪದ ಬೆಲೆ 70 ರು ಮಾತ್ರ ಇದೆ. ನ್ಯೂಡಲ್ಸ್ ಕೂಡಾ 15 ರುನಂತೆ ನೀಡಲಾಗುತ್ತಿದೆ. ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುವುದು ನಮ್ಮ ಉದ್ದೇಶ ಎಂದು ಬಾಬಾ ರಾಮದೇವ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. [ಫ್ಯೂಚುರಾ ಗ್ರೂಪ್ ಜೊತೆ ಬಾಬಾ ರಾಮ್ ದೇವ್ ಡೀಲ್]
ಅಟ್ಟಾ ನ್ಯೂಡಲ್ಸ್ ನಂತರ ಯೋಗ ದಿರಿಸುಗಳ ಬ್ರ್ಯಾಂಡ್ ಆಮೇಲೆ ಕಡಿಮೆ ಬೆಲೆಯಲ್ಲಿ ಆರೋಗ್ಯಕರ ಪೇಯ, ಬೇಬಿ ಕೇರ್ ಅಲ್ಲದೆ ಸೌಂದರ್ಯವರ್ಧಕ ಉತ್ಪನ್ನಗಳನ್ನು ಹೊರ ತರಲು ಪತಂಜಲಿ ಸಂಸ್ಥೆ ಸಿದ್ಧವಾಗಿದೆ.
ಸಂಸ್ಕರಿತ ಹಣ್ಣಿನ ಜ್ಯೂಸ್, ತುಪ್ಪ, ಜೇನುತುಪ್ಪ, ಕೊಬ್ಬರಿ ಎಣ್ಣೆ, ಉಪ್ಪು, ಇಂಗು, ಬಿಸ್ಕತ್ತು, ಓಟ್ಸ್, ಕಾರ್ನ್ ಫ್ಲೇಕ್ಸ್, ಸಿಹಿ ತಿನಿಸು, ಹಪ್ಪಳ, ಗೋಧಿ ಹಿಟ್ಟು ಸೇರಿದಂತೆ ಅನೇಕ ಆಹಾರ ಪದಾರ್ಥಗಳನ್ನು ಪತಂಜಲಿ ಸಂಸ್ಥೆ ಮಾರುಕಟ್ಟೆಗೆ ಬಿಟ್ಟಿದೆ.
ದೆಹಲಿ ಎನ್ ಸಿಆರ್, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರಪ್ರದೇಶ ಹಾಗೂ ಕರ್ನಾಟಕದಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗುವುದು. ಹರ್ಯಾಣದ ವಿಶ್ವಖ್ಯಾತ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ಪತಂಜಲಿ ಉತ್ಪನ್ನಗಳ ರಾಯಭಾರಿಯಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಬಾಬಾ ರಾಮದೇವ್ ಹೇಳಿದ್ದಾರೆ.(ಒನ್ ಇಂಡಿಯಾ ಸುದ್ದಿ)












Click it and Unblock the Notifications