ಆರ್‌ಪಿಎಫ್ ಸಿಬ್ಬಂದಿ ಗುಂಡಿಗೆ ಬೀದರ್ ವ್ಯಕ್ತಿ ಬಲಿ; ಪರಿಹಾರ ಘೋಷಣೆ
ಬೀದರ್, ಆಗಸ್ಟ್ 02; ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ಸಿಬ್ಬಂದಿ ಸೋಮವಾರ ನಡೆಸಿದ ಗುಂಡಿನ ದಾಳಿಯಲ್ಲಿ ಬೀದರ್ ಮೂಲದ ವ್ಯಕ್ತಿ ಸಾವನ್ನಪ್ಪಿದ್ದರು. ಕರ್ನಾಟಕ ಸರ್ಕಾರ ಮೃತ ವ್ಯಕ್ತಿಯ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರವನ್ನು ಘೋಷಣೆ ಮಾಡಿದೆ.
ಈ ಕುರಿತು ಅರಣ್ಯ ಸಚಿವ, ಬಾಲ್ಕಿ ಶಾಸಕ ಈಶ್ವರ ಖಂಡ್ರೆ ಮಾಹಿತಿ ನೀಡಿದ್ದಾರೆ. ಫೇಸ್‌ಬುಕ್ ಪೋಸ್ಟ್ ಹಾಕಿರುವ ಸಚಿವರು, ಚಲಿಸುತ್ತಿದ್ದ ಜೈಪುರ- ಮುಂಬೈ ಎಕ್ಸ್‌ಪ್ರೆಸ್ ರೈಲುಗಾಡಿಯಲ್ಲಿ ಆರ್‌ಪಿಎಫ್ ಪೇದೆ ಚೇತನ್ ಸಿಂಗ್ ಕ್ಷುಲ್ಲಕ ಕಾರಣಕ್ಕೆ ನಡೆಸಿದ ಗುಂಡಿನ ದಾಳಿಗೆ ಬೀದರ್ ಜಿಲ್ಲೆಯ ಗಾದಗಿ ಬಳಿಯ ಹಮಿಲಾಪುರದ ಮುಗ್ದ ಪ್ರಯಾಣಿಕ ಸೈಯದ್ ಸೈಫುದ್ದೀನ್ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಮೃತ ವ್ಯಕ್ತಿಯ ಕುಟುಂಬದವರಿಗೆ 10 ಲಕ್ಷ ರೂ. ಪರಿಹಾರವನ್ನು ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ನೀಡಲು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಸಮ್ಮತಿಸಿದ್ದಾರೆ. ಮೃತರ ಕುಟುಂಬದವರಿಗೆ ನೋವು ಭರಿಸುವ ಶಕ್ತಿ ನೀಡಲಿ. ಈ ನೋವಿನ ಸಂದರ್ಭದಲ್ಲಿ ನಾವು ಅವರ ಜೊತೆಗೆ ಇರುತ್ತೇವೆ ಎಂದು ಸಂತಾಪ ಸೂಚಿಸಿದ್ದಾರೆ.
ನಾಲ್ವರ ಸಾವು; ಸೋಮವಾರ ಮುಂಜಾನೆ ಮಹಾರಾಷ್ಟ್ರದ ಪಾಲ್ಫರ್ ರೈಲು ನಿಲ್ದಾಣದ ಬಳಿ ಆರ್‌ಪಿಎಫ್ ಕಾನ್ಸ್‌ಟೇಬಲ್ ಚೇತನ್ ಸಿಂಗ್ ಗುಂಡಿನ ದಾಳಿ ನಡೆಸಿದ್ದ. ಈ ಸಂದರ್ಭದಲ್ಲಿ ಆರ್‌ಪಿಎಫ್‌ನ ಮತ್ತೊಬ್ಬ ಸಿಬ್ಬಂದಿ, ಅವರ ಎಸ್ಕಾರ್ಟ್ ಡ್ಯುಟಿ ಇನ್‌ಚಾರ್ಜ್ ಎಎಸ್‌ಐ ಟಿಕಾ ರಾಮ್ ಮೀನಾ ಹಾಗೂ ರೈಲಿನಲ್ಲಿ ತೆರಳುತ್ತಿದ್ದ ಪ್ರಯಾಣಿಕರು ಸೇರಿ ನಾಲ್ವರು ಮೃತಪಟ್ಟಿದ್ದರು.
ಈ ಘಟನೆಯ ಬಳಿಕ ಬಂದೂಕು ಸಮೇತವಾಗಿ ಆರ್‌ಪಿಎಫ್ ಕಾನ್ಸ್‌ಟೇಬಲ್ ಚೇತನ್ ಸಿಂಗ್ ಬಂಧಿಸಲಾಗಿತ್ತು. ಈ ಘಟನೆಯಲ್ಲಿ ಮೃತಪಟ್ಟ ಪ್ರಯಾಣಿಕರಲ್ಲಿ ಸೈಯದ್ ಸೈಫುದ್ದೀನ್ ಸಹ ಒಬ್ಬರು. ಈಗ ಕರ್ನಾಟಕ ಸರ್ಕಾರ ಸೈಯದ್ ಸೈಫುದ್ದೀನ್ ಕುಟುಂಬಕ್ಕೆ ಪರಿಹಾರವನ್ನು ಘೋಷಣೆ ಮಾಡಿದೆ.
ಜೈಪುರ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 12956 ಪಾಲ್ಫರ್ ರೈಲು ನಿಲ್ದಾಣವನ್ನು ದಾಟಿದ ಬಳಿಕ ಚಲಿಸುತ್ತಿದ್ದ ರೈಲಿನಲ್ಲಿಯೇ ಕಾನ್ಸ್‌ಟೇಬಲ್ ಚೇತನ್ ಸಿಂಗ್ ಸ್ವಯಂ ಚಾಲಿತ ಬಂದೂಕಿನಿಂದ ಗುಂಡಿನ ದಾಳಿ ನಡೆಸಿದ್ದ.
ತನ್ನ ಹಿರಿಯ ಅಧಿಕಾರಿ ಮೇಲೆ ಗುಂಡು ಹಾರಿಸಿದ ಬಳಿಕ ಮತ್ತೊಂದು ಬೋಗಿಗೆ ಹೋಗಿ ಪ್ರಯಾಣಿಕರ ಮೇಲೆ ಗುಂಡು ಹಾರಿಸಿದ್ದ. ಬಳಿಕ ರೈಲಿನ ಚೈನ್ ಎಳೆದು ದಹಿಸರ್ ನಿಲ್ದಾಣದ ಬಳಿ ರೈಲಿನಿಂದ ಹೊರಗೆ ಜಿಗಿದಿದ್ದ. ಪಶ್ಚಿಮ ರೈಲ್ವೆ ಈ ಕುರಿತು ಪ್ರಕಟಣೆ ಸಹ ಬಿಡುಗಡೆ ಮಾಡಿತ್ತು.
ರೈಲ್ವೆ ಪೊಲೀಸರು ಮತ್ತು ಸ್ಥಳೀಯ ಪೊಲೀಸರ ನೆರವಿನಿಂದ ಕಾನ್ಸ್‌ಟೇಬಲ್ ಚೇತನ್ ಸಿಂಗ್‌ರನ್ನು ಮೀರಾ ರೋಡ್‌ನಲ್ಲಿ ಪೊಲೀಸರು ಬಂಧಿಸಿದ್ದರು. ಚೇತನ್ ಸಿಂಗ್ ಉತ್ತರ ಪ್ರದೇಶದ ಹತ್ರಸ್ ಮೂಲದ ನಿವಾಸಿ.
ಘಟನೆ ಬಗ್ಗೆ ಮಾತನಾಡಿದ್ದ ಆರ್‌ಪಿಎಫ್‌ನ ಇನ್ಸ್‌ಪೆಕ್ಟರ್ ಜನರಲ್ ಪ್ರವೀಣ್ ಸಿನ್ಹಾ, "ಚೇತನ್ ಸಿಂಗ್ ಸ್ಪಲ್ಪ ಕೋಪದ ಸ್ವಭಾವದವನು. ಬೇಗ ಕೋಪ ಮಾಡಿಕೊಳ್ಳುತ್ತಿದ್ದ. ಘಟನೆ ನಡೆದ ಸಮಯದಲ್ಲಿ ದೊಡ್ಡ ಜಗಳವೇನು ಆಗಿರಲಿಲ್ಲ. ಕೋಪದಿಂದ ಗುಂಡಿನ ದಾಳಿ ನಡೆಸಿ ಹಿರಿಯ ಅಧಿಕಾರಿಯನ್ನು ಕೊಂದಿದ್ದಾನೆ. ನಂತರ ಕಂಡ ಕಂಡವರಿಗೆ ಗುಂಡು ಹಾರಿಸಿದ್ದಾನೆ" ಎಂದು ಹೇಳಿದ್ದರು.
ಘಟನೆಯಲ್ಲಿ ಸಾವನ್ನಪ್ಪಿರುವ ಆರ್‌ಪಿಎಫ್‌ನ ಎಎಸ್‌ಐ ರಾಜಸ್ಥಾನದ ಸವಾಯಿ ಮಾಧೋಪುರ ಜಿಲ್ಲೆಯವರು. ಅವರು 2025ರಲ್ಲಿ ನಿವೃತ್ತರಾಗಬೇಕಿತ್ತು. ಅಲ್ಲಿನ ರಾಜ್ಯ ಸರ್ಕಾರ ಎಎಸ್‌ಐ ಕುಟುಂಬಕ್ಕೆ ಪರಿಹಾರವನ್ನು ಘೋಷಣೆ ಮಾಡಿದೆ. ರೈಲ್ವೆ ಇಲಾಖೆ ಸಹ ಘಟನೆಯಲ್ಲಿ ಮೃತಪಟ್ಟ ಮೂವರು ಪ್ರಯಾಣಿಕರಿಗೆ ಪರಿಹಾರ ನೀಡಲಾಗುತ್ತದೆ ಎಂದು ಘೋಷಣೆ ಮಾಡಿದೆ.
ರೈಲಿನ ಭದ್ರತೆಗಾಗಿ ಆರ್‌ಪಿಎಫ್‌ಗೆ ಸಿಬ್ಬಂದಿಗೆ ಎಸ್ಕಾರ್ಟ್ ಡ್ಯೂಟಿ ನೀಡಲಾಗಿತ್ತು. ಎಎಸ್‌ಐ ರೈಲಿನ ಎಸ್ಕಾರ್ಟ್ ಇನ್‌ಚಾರ್ಜ್ ಆಗಿದ್ದರು. ಚೇತನ್ ಸಿಂಗ್ ಬೆಂಗಾವಲು ಕರ್ತವ್ಯದಲ್ಲಿದ್ದರು. ಒಟ್ಟು ನಾಲ್ವರು ಭದ್ರತಾ ಸಿಬ್ಬಂದಿ ಗುಜರಾತ್‌ನಲ್ಲಿ ರೈಲು ಹತ್ತಿದ್ದರು. ಎಎಸ್‌ಐ ಮತ್ತು ಚೇತನ್ ಸಿಂಗ್ ನಡುವೆ ಯಾವುದೋ ವಿಚಾರಕ್ಕೆ ಜಗಳ ನಡೆದಿತ್ತು.












Click it and Unblock the Notifications