ಬೆಳಗಾವಿಗೆ ಬೆಂಗಳೂರಿಂದ ಸಂಕ್ರಾಂತಿ ವಿಶೇಷ ರೈಲು, ವೇಳಾಪಟ್ಟಿ
ಬೆಂಗಳೂರು, ಜನವರಿ 12; ನೈಋತ್ಯ ರೈಲ್ವೆ ಸಂಕ್ರಾಂತಿ ಹಬ್ಬದ ಅಂಗವಾಗಿ ಬೆಂಗಳೂರು-ಬೆಳಗಾವಿ ನಡುವೆ ಒಂದು ಬಾರಿಯ ವಿಶೇಷ ರೈಲನ್ನು ಓಡಿಸುತ್ತಿದೆ. ಜನವರಿ 13ರಂದು ಈ ರೈಲು ಯಶವಂತಪುರದಿಂದ ಹೊರಡಲಿದೆ.
ನೈಋತ್ಯ ರೈಲ್ವೆ ಈ ಕುರಿತು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಹಬ್ಬದ ಸಂದರ್ಭದಲ್ಲಿ ಜನ ಸಂದಣಿ ಹೆಚ್ಚಾಗಿರುವುದರಿಂದ ವಿಶೇಷ ರೈಲನ್ನು ಓಡಿಸಲಾಗುತ್ತಿದೆ. ಯಶವಂತಪುರ- ಬೆಳಗಾವಿ ಮತ್ತು ಬೆಳಗಾವಿ-ಯಶವಂತಪುರ ನಡುವೆ ಈ ರೈಲು ಸಂಚಾರ ನಡೆಸಲಿದೆ.
ಈ ಒಂದು ಬಾರಿಯ ವಿಶೇಷ ರೈಲು ಎರಡು ತ್ರೀ ಟೈರ್ ಬೋಗಿ, ಎಂಟು ಸ್ಲೀಪರ್ ದರ್ಜೆ ಬೋಗಿ, ನಾಲ್ಕು ಸಾಮಾನ್ಯ ದರ್ಜೆ ಬೋಗಿಗಳು ಇರಲಿವೆ ಎಂದು ನೈಋತ್ಯ ರೈಲ್ವೆ ಮಾಹಿತಿ ನೀಡಿದೆ.

ವೇಳಾಪಟ್ಟಿ; ಸಂಕ್ರಾಂತಿ ಒಂದು ಬಾರಿಯ ವಿಶೇಷ ರೈಲು ಜನವರಿ 13ರಂದು ರಾತ್ರಿ 9.30ಕ್ಕೆ ಯಶವಂತಪುರದಿಂದ ಸಂಚಾರ ಆರಂಭಿಸಲಿದೆ. ಮರುದಿನ ಬೆಳಗ್ಗೆ 8.25ಕ್ಕೆ ಬೆಳಗಾವಿ ನಿಲ್ದಾಣಕ್ಕೆ ತಲುಪಲಿದೆ. ಜನವರಿ 16ರಂದು ರಾತ್ರಿ 9.20ಕ್ಕೆ ಬೆಳಗಾವಿ ರೈಲು ನಿಲ್ದಾಣದಿಂದ ಹೊರಡುವ ರೈಲು ಮರುದಿನ ಬೆಳಗ್ಗೆ 8.30ಕ್ಕೆ ಯಶವಂತಪುಕ್ಕೆ ಬಂದು ತಲುಪಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ರೈಲು ಯಶವಂತಪುರದಿಂದ ಹೊರಟು ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣೆಬೆನ್ನೂರು, ಹಾವೇರಿ, ಹುಬ್ಬಳ್ಳಿ, ಧಾರವಾಡ, ಆಳ್ನಾವರ, ಲೋಂಡಾ, ಖಾನಾಪುರ ಮಾರ್ಗವಾಗಿ ಬೆಳಗಾವಿಗೆ ತಲುಪಲಿದೆ.
ಮೈಸೂರು-ತಿರುವನಂತಪುರಂ ಸೆಂಟ್ರಲ್-ಮೈಸೂರು ವಿಶೇಷ ರೈಲು; ನೈಋತ್ಯ ರೈಲ್ವೆ ಸಂಕ್ರಾಂತಿ ಮತ್ತು ಶಬರಿಮಲೆ ಯಾತ್ರಿಕರ ಅನುಕೂಲಕ್ಕಾಗಿ ಮೈಸೂರು- ತಿರುವನಂತಪುರಂ ಸೆಂಟ್ರಲ್- ಮೈಸೂರು (ಒಂದು ಟ್ರಿಪ್ ಮಾತ್ರ) ಹಬ್ಬದ ವಿಶೇಷ ರೈಲು ಓಡಿಸಲಿದೆ.
ಜನವರಿ 12ರಂದು ಮೈಸೂರಿನಿಂದ ಮತ್ತು 13ರಂದು ತಿರುವನಂತಪುರಂ ಸೆಂಟ್ರಲ್ ನಿಲ್ದಾಣದಿಂದ ರೈಲು ಸಂಚಾರ ನಡೆಸಲಿದೆ. ರೈಲು ಒಂದು ಎಸಿ 2 ಟೈರ್, ಎರಡು ಎಸಿ 3 ಟೈರ್, ಏಳು ಸ್ಲೀಪರ್ ಎರಡನೇ ದರ್ಜೆ, ನಾಲ್ಕು ಸಾಮಾನ್ಯ ಎರಡನೇ ದರ್ಜೆ ಬೋಗಿಗಳು ಮತ್ತು ಎರಡು ಸಾಮಾನ್ಯ ಎರಡನೇ ದರ್ಜೆ ಲಗ್ಗೇಜ್ ಕಮ್ ಬ್ರೇಕ್ ವ್ಯಾನ್ ಜೊತೆಗೆ ಜನರೇಟ್ ಸೇರಿದಂತೆ 16 ಬೋಗಿಗಳನ್ನು ಒಳಗೊಂಡಿದೆ.
ಮೈಸೂರು, ಮಂಡ್ಯ, ಕೆಂಗೇರಿ, ಕೆ. ಎಸ್. ಆರ್. ಬೆಂಗಳೂರು, ಬೆಂಗಳೂರು ದಂಡು, ಹೊಸೂರು, ಧರ್ಮಪುರಿ, ಸೇಲಂ, ನಾಮಕ್ಕಲ್, ಕರೂರ್, ದಿಂಡಿಗಲ್, ಮದುರೈ, ವಿರುಡುನಗರ, ಕೊವಿಲಹಟ್ಟಿ, ತಿರುನೆಲ್ವೇಲಿ, ನಾಗರಕೊಯಿಲ್ ಟೌನ್, ತಿರುವನಂತಪುರಂ ಸೆಂಟ್ರಲ್ ಮೂಲಕ ಸಂಚಾರ ನಡೆಸಲಿದೆ.












Click it and Unblock the Notifications