ಆರ್‌ಸಿಬಿ ಕಪ್‌ಗೆ ಮುತ್ತು ಕೊಟ್ಟೆ, ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿ ಅಭಿನಂದಿಸಿದ್ದು ನಿಜ: ಡಿಕೆ ಶಿವಕುಮಾರ್
ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಸಂಭವಿಸಿದ್ದ ಕಾಲ್ತುಳಿತ ಪ್ರಕರಣ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮೇಲೆ ಹಲವು ಟೀಕೆಗಳು ವ್ಯಕ್ತವಾಗಿತ್ತು. ಇನ್ನು ಕಾಲ್ತುಳಿತ ಸಂಭವಿಸಿದ ಮೇಲೂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಪಾಲ್ಗೊಂಡಿದ್ದಕ್ಕೆ ಭಾರೀ ಖಂಡನೆ ವ್ಯಕ್ತವಾಗಿತ್ತು. ಇಂತಹ ದುರ್ಘಟನೆ ಸಂಭವಿಸಿದ ಮೇಲೂ ಸ್ಟೇಡಿಯಂನಲ್ಲಿ ಮತ್ತೊಂದು ಕಾರ್ಯಕ್ರಮಕ್ಕೆ ಅವಕಾಶ ಏಕೆ ಕೊಟ್ಟಿದ್ದು? ಎಂದು ವಿಪಕ್ಷಗಳು ಕೂಡ ಆರೋಪ ಮಾಡಿತ್ತು. ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಅವರೇ ಸ್ಪಷ್ಟನೆ ನೀಡಿದ್ದಾರೆ.
ಪೊಲೀಸ್ ಆಯುಕ್ತರು ನನ್ನ ಬಳಿ ಬಂದು ಆರ್‌ಸಿಬಿ ತಂಡದವರಿಗೆ 10 ನಿಮಿಷಗಳಲ್ಲಿ ಕಾರ್ಯಕ್ರಮ ಮುಗಿಸುವಂತೆ ಸೂಚನೆ ನೀಡಿ ಎಂದು ಮನವಿ ಮಾಡಿಕೊಂಡರು. ಇದೇ ಕಾರಣಕ್ಕೆ ನಾನು ಆ ಕಾರ್ಯಕ್ರಮಕ್ಕೆ ಹೋಗಿ, 10 ನಿಮಿಷಗಳಲ್ಲಿ ಕಾರ್ಯಕ್ರಮ ಮುಗಿಸುವಂತೆ ಸೂಚನೆ ನೀಡಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿಧಾನಸಭೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಆರ್‌ಸಿಬಿ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಉತ್ತರ ನೀಡುವ ವೇಳೆ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಅವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ ನೀಡದಿದ್ದರೆ, ಉಪಮುಖ್ಯಮಂತ್ರಿಗಳು ಹೋಗಿದ್ದು ಯಾಕೆ? ಎಂದು ಪ್ರಶ್ನೆ ಕೇಳಿದರು. ಇದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಸ್ಪಷ್ಟನೆ ಕೊಟ್ಟರು. ನನ್ನನ್ನು ಪದೇ ಪದೆ ನೆನೆಯದಿದ್ದರೆ ನಿಮಗೆ ಸಮಾಧಾನ ಆಗುವುದಿಲ್ಲ. ನಿಮ್ಮ ಪಕ್ಷದವರಿಗೆ ಖುಷಿ ಪಡಿಸಲೂ ಆಗುವುದಿಲ್ಲ. ನಿಮಗೆ ಖುಷಿ ಆಗುವಂತೆ ಉತ್ತರ ಕೊಡಲೂ ಆಗುವುದಿಲ್ಲ ಎಂದು ತಿರುಗೇಟು ನೀಡಿದರು.
ಅಂದು ವಿಧಾನಸೌಧದ ಮುಂದೆ ನಡೆದ ಸರ್ಕಾರಿ ಕಾರ್ಯಕ್ರಮಕ್ಕೆ ಬಂದಿದ್ದ ಕೆಎಸ್‌ಸಿಎ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗಲು ಸಾಧ್ಯವಾಗದೇ ಹತಾಶರಾಗಿದ್ದರು. ಇನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಕೇವಲ 10 ನಿಮಿಷಗಳಲ್ಲಿ ಮುಗಿಸುವಂತೆ ನೀವೇ ಬಂದು ವ್ಯವಸ್ಥೆ ಮಾಡಿ ಎಂದು ಪೊಲೀಸ್ ಕಮೀಷನರ್ ಅವರು ನನ್ನ ಬಳಿ ಮನವಿ ಮಾಡಿಕೊಂಡಿದ್ದರು ಎಂದಿದ್ದಾರೆ.
ಕಾರ್ಯಕ್ರಮಕ್ಕೆ ಹೋಗಿದ್ದು ನಿಜ!
ನಾನು ಕಾರ್ಯಕ್ರಮಕ್ಕೆ ಹೋಗಿದ್ದೂ ನಿಜ, ಅಲ್ಲಿ ಇದ್ದಿದ್ದೂ ನಿಜ, ಅಲ್ಲಿ ಆರ್‌ಸಿಬಿ ಆಟಗಾರರಿಗೆ ಅಭಿನಂದನೆ ಸಲ್ಲಿಸಿದ್ದೂ ನಿಜ. ಜೊತೆಗೆ 10 ನಿಮಿಷಗಳಲ್ಲಿ ಈ ಕಾರ್ಯಕ್ರಮ ಮುಗಿಸಬೇಕು ಎಂದು ಅವರಿಗೆ ಸೂಚನೆ ಕೊಟ್ಟಿದ್ದೂ ನಿಜ. ಇದೇ ಮಾತನ್ನು ನಾನು ಕುನ್ಹಾ ಅವರ ತನಿಖಾ ತಂಡದ ಮುಂದೆ ಹೇಳಿಕೆ ನೀಡಿದ್ದೂ ನಿಜ ಎಂದು ಒಪ್ಪಿಕೊಂಡಿದ್ದಾರೆ. ನಾನು ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿಲ್ಲ ಎಂದು ಹೇಳುತ್ತಿಲ್ಲ. ಅಲ್ಲಿಗೆ ಹೋಗಲು ನಿಮ್ಮ ಅನುಮತಿಯ ಅಗತ್ಯವೂ ನನಗಿಲ್ಲ. ಪೊಲೀಸರ ಮನವಿ ಮೇಲೆ ನನ್ನ ಜವಾಬ್ದಾರಿಯಿಂದ ನಾನು ಹೋಗಿ ಅವರಿಗೆ ಸೂಚನೆ ನೀಡಿದ್ದೇನೆ. ಕಪ್‌ಗೆ ಮುತ್ತು ನೀಡಿದ್ದೇನೆ, ಆಟಗಾರರಿಗೆ ಅಭಿನಂದಿಸಿದ್ದೇನೆ ಬಿಜೆಪಿಗರ ಆರೋಪಗಳಿಗೆ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.












Click it and Unblock the Notifications