ಬಿಜೆಪಿ-ಕೆಜೆಪಿ ವಿಲೀನ ಇಲ್ವೇ ಇಲ್ಲ ಅಂದ್ರು ಬಿಎಸ್‌ವೈ
ಬೆಂಗಳೂರು, ಸೆ. 19: ಮೊನ್ನೆ ಆಷಾಢದ ಕೊನೆಯ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಯಡಿಯೂರಪ್ಪ ಅವರು ಶೋಭಾ ಕರಂದ್ಲಾಜೆ ಜತೆಯಾಗಿ ತಾವುಗಳು ಬಿಜೆಪಿಗೆ ಮರಳುವ ಪ್ರಶ್ನೆಯೇ ಇಲ್ಲ ಎಂದು ಪ್ರಮಾಣ ಮಾಡಿದ್ದಕ್ಕೆ ಬದ್ಧರಾಗಿದ್ದಾರೆ. 'ಕೆಜೆಪಿಯನ್ನು ವಿಸರ್ಜಿಸುವ ಮಾತೇ ಇಲ್ಲ. ಬಿಜೆಪಿಯೊಂದಿಗೆ ಕೆಜೆಪಿ ವಿಲೀನದ ಮಾತೂ ಇಲ್ಲ' ಎಂದು ಬಿಎಸ್‌ವೈ ಖಂಡತುಂಡವಾಗಿ ಗುರುವಾರ ಹೇಳಿದ್ದಾರೆ.
ಅತ್ತ ಗುಜರಾತ್ ಸಿಎಂ ನರೇಂದ್ರ ಮೋದಿ ಅವರು ಪ್ರಧಾನಿ ಅಭ್ಯರ್ಥಿಯಾಗಿ ಹೊರಹೊಮ್ಮುತ್ತಿದ್ದಂತೆ ಮೋದಿ ಮಿತ್ರ ಯಡಿಯೂರಪ್ಪ ಅವರು ತಮ್ಮ ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನಗೊಳಿಸುವುದು ಶತಃಸಿದ್ಧ ಎಂದೇ ಭಾವಿಸಲಾಗಿತ್ತು. ಆದರೆ 'ಅಂಥದ್ದೇನೂ ಇಲ್ಲ' ಎಂದು ಯಡಿಯೂರಪ್ಪ ಇದೀಗ ಸ್ಪಷ್ಟಪಡಿಸಿದ್ದಾರಾದರೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಲು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಅಧಿಕೃತವಾಗಿ ಪ್ರಕಟಿಸಿದ್ದಾರೆ.

ಬಿಜೆಪಿ-ಕೆಜೆಪಿ ವಿಲೀನ ಕುರಿತಾಗಿ ನಿರ್ಣಯಿಸಲು ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಸಭೆ ಕರೆದಿದ್ದ ಯಡಿಯೂರಪ್ಪ, ಪಕ್ಷದ ನಾಯಕರ ಅನಿಸಿಕೆಯಂತೆ ಬಿಜೆಪಿ-ಕೆಜೆಪಿ ವಿಲೀನ ಚಿಂತೆ ಕೈಬಿಟ್ಟು, ಮೋದಿ ಬೆಂಬಲಕ್ಕೆ ಸೀಮಿತಗೊಂಡಿದ್ದಾರೆ.
ಇಂದು ನಗರದಲ್ಲಿ ನಡೆಯುತ್ತಿರುವ ಕೆಜೆಪಿ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಬಿಎಸ್‌ವೈ, ಎನ್ ಡಿಎ ಗೆ ಕೆಜೆಪಿ ಬೆಂಬಲ ಇದೆ. ಎನ್‌ಡಿಎ ಭಾಗವಾಗಿ ಕೆಜೆಪಿ ಮುಂಬರುವ ಲೋಕಸಭಾ ಚುನಾವಣೆಯನ್ನು ಎದುರಿಸಲಿದೆ. ಕೆಜೆಪಿ ಬಿಜೆಪಿಯೊಂದಿಗೆ ಚುನಾವಣಾ ಮೈತ್ರಿ ಮಾಡಿಕೊಳ್ಳುವ ಮೂಲಕ ಪಕ್ಷ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಚಿವರಾದ ಸಿಎಂ ಉದಾಸಿ, ರೇಣುಕಾಚಾರ್ಯ, ಸುನೀಲ್ ವಲ್ಯಾಪುರೆ ಮತ್ತು ಧನಂಜಯ್ ಕುಮಾರ್ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದಾರೆ.












Click it and Unblock the Notifications