ಕೆಜೆಪಿ ಒಡೆಯಲು ಬಿಜೆಪಿ ಷಡ್ಯಂತ್ರ ರೂಪಿಸಿದೆ : ಬಿಎಸ್ವೈ

ಬೆಂಗಳೂರು, ಅ, 30 : ಲೋಕಸಭೆ ಚುನಾವಣೆಯಲ್ಲಿ ಕೆಜೆಪಿ ಮತ್ತು ಬಿಜೆಪಿಯ ಮೈತ್ರಿ ಮಾತುಕತೆ ಮರಿದು ಬಿದ್ದಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ವತಂತ್ರ ಹೋರಾಟಕ್ಕೆ ಸಜ್ಜಾಗಿದ್ದಾರೆ. ಬಿಜೆಪಿ ಜೊತೆ ಪಕ್ಷವನ್ನು ವಿಲೀನ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ.

ಮಂಗಳವಾರ ಪಕ್ಷದ ಕಚೇರಿಯಲ್ಲಿ ಬಿ.ಎಸ್.ಯಡಿಯೂರಪ್ಪ ಪತ್ರಿಕಾಗೋಷ್ಠಿ ನಡೆಸಿದರು. ಬಿಜೆಪಿ ನಾಯಕರು ಕೆಜೆಪಿ ಪಕ್ಷವನ್ನು ವಿಭಜಿಸುವ ವ್ಯವಸ್ಥಿತ ಷಡ್ಯಂತ್ರ ನಡೆಸುತ್ತಿದ್ದಾರೆ. ಆದ್ದರಿಂದ ಕೆಜೆಪಿ ಮತ್ತು ಬಿಜೆಪಿ ವಿಲೀನ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಗಂಭೀರವಾದ ಆರೋಪ ಮಾಡಿದರು.

 B.S. Yeddyurappa

ಯಾವುದೇ ಕಾರಣಕ್ಕೂ ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನಗೊಳಿಸುವುದಿಲ್ಲ. ಬಿಜೆಪಿ ನಾಯಕರು ಈ ಕುರಿತು ಗೊಂದಲ ಹುಟ್ಟು ಹಾಕಿ, ಕಾರ್ಯಕರ್ತರಿಗೆ, ಜನರಿಗೆ ತಪ್ಪು ಸಂದೇಶ ನೀಡುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಚುನಾವಣೆಯಲ್ಲಿ ಎನ್‌ಡಿಎಗೆ ಬೆಂಬಲ ನೀಡುವುದಾಗಿ ಅವರು ಹೇಳಿದರು.

ಬಿಜೆಪಿ ನಾಯಕರು ಕೆಜೆಪಿಯ ಜಿಲ್ಲಾ ಮುಖಂಡರ ಜೊತೆ ಮಾತುಕತೆ ನಡೆಸಿ, ಯಡಿಯೂರಪ್ಪ ಪಕ್ಷಕ್ಕೆ ಮರಳುತ್ತಾರೆ. ಅವರಿಗಿಂತ ಮೊದಲು ನೀವು ಬನ್ನಿ, ಸೂಕ್ತ ಸ್ಥಾನಮಾನ ನೀಡುತ್ತೇವೆ ಎಂದು ಆಮಿಷ ಒಡ್ಡುತ್ತಿದ್ದಾರೆ ಎಂದು ಯಡಿಯೂರಪ್ಪ ದೂರಿದರು.

ಕೆಜೆಪಿಯ ಕಾರ್ಯಕರ್ತರು ಮತ್ತು ಮುಖಂಡರು ಅನಗತ್ಯ ಗೊಂದಲಗಳಿಗೆ ಸಿಕ್ಕಿಹಾಕಿಕೊಳ್ಳುವ ಅಗತ್ಯವಿಲ್ಲ. ಕೆಜೆಪಿ ಮತ್ತು ಬಿಜೆಪಿ ವಿಲೀನವಾಗುವುದಿಲ್ಲ. ಕಾರ್ಯಕರ್ತರು ಮತ್ತು ಮುಖಂಡರು ಬಿಜೆಪಿಯ ಆಮಿಷಗಳಿಗೆ ಬಲಿಯಾಗಬಾರದು ಎಂದು ಯಡಿಯೂರಪ್ಪ ಮನವಿ ಮಾಡಿದರು.

ಬಿಜೆಪಿಯ ಮಿತ್ರರು ಉದ್ದೇಶಪೂರ್ವಕವಾಗಿಯೇ ನಾನು ಬಿಜೆಪಿಗೆ ವಾಪಸಾಗುವುದು ನಿರ್ಧಾರವಾಗಿದೆ, ಬಿಜೆಪಿ ಮತ್ತು ಕೆಜೆಪಿಯ ವಿಲೀನಕ್ಕೆ ದಿನಾಂಕವೂ ನಿಗದಿಯಾಗಿದೆ ಎಂಬ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದನ್ನು ನಿಲ್ಲಿಸಿ ಗೊಂದಲಗಳಿಗೆ ತೆರೆ ಎಳೆಯಬೇಕು ಎಂದು ತಾಕೀತು ಮಾಡಿದರು.

ನರೇಂದ್ರ ಮೋದಿಗೆ ಬೆಂಬಲ : ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಬೇಕು ಎಂಬ ಏಕೈಕ ಕಾರಣದಿಂದ ಎನ್‌ಡಿಎಗೆ ಬೆಂಬಲ ನೀಡುವ ನಿರ್ಧಾರ ಕೈಗೊಂಡಿದ್ದೇನೆ. ಈ ಸಂಬಂಧ ಎನ್‌ಡಿಎ ಅಧ್ಯಕ್ಷ ಎಲ್‌.ಕೆ.ಅಡ್ವಾಣಿ ಅವರಿಗೆ ಪತ್ರವನ್ನೂ ಬರೆದಿದ್ದೇನೆ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದರು. (ಅಡ್ವಾಣಿಗೆ ಪತ್ರ ಬರೆದ ಯಡಿಯೂರಪ್ಪ)

ಲೋಕಸಭಾ ಚುನಾವಣೆಗೆ ಸಿದ್ಧತೆ ಕೈಗೊಳ್ಳುವ ಸಂಬಂಧ ಶೀಘ್ರವೇ ಪಕ್ಷದ ಕಾರ್ಯಕಾರಿಣಿ ಸಭೆ ನಡೆಸಲಾಗುವುದು. ಬೀದರ್‌, ಚಾಮರಾಜನಗರ, ಮೈಸೂರು, ತುಮಕೂರು, ಶಿವಮೊಗ್ಗ, ಗುಲ್ಬರ್ಗ, ಧಾರವಾಡ ಸೇರಿದಂತೆ ಆಯ್ದ 10 ಕ್ಷೇತ್ರಗಳಲ್ಲಿ ಕೆಜೆಪಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದರು.

ಮೋದಿ ಭೇಟಿ ಇಲ್ಲ : ನವೆಂಬರ್‌ 17ರಂದು ಬೆಂಗಳೂರಿಗೆ ಆಗಮಿಸುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವುದಿಲ್ಲ. ಯಾವ ನಾಯಕರನ್ನು ಭೇಟಿ ಮಾಡುವ ಕುರಿತು ಆಲೋಚನೆ ನಡೆಸಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+