World Breastfeeding Week: ತಾಯಂದಿರಲ್ಲಿ ಮರು-ಹಾಲುಣಿಸುವಿಕೆ, ಸ್ತನ್ಯಪಾನದ ಪ್ರಕ್ರಿಯೆ ಬಗ್ಗೆ ವೈದ್ಯರ ಸಲಹೆ
ಬೆಂಗಳೂರು, ಆಗಸ್ಟ್. 03: ಗರ್ಭದಿಂದಲೇ ಆರಂಭವಾದ ತಾಯಿ ಮಗುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವುದು ಅಮೃತ ಸಮಾನ ಎಂದು ಕರೆಸಿಕೊಳ್ಳುವ ಎದೆಹಾಲು. ಆದರೆ, ಇತ್ತೀಚೆಗೆ ಸ್ತನ್ಯಪಾನದ ಬಗ್ಗೆ ತಾಯಂದಿರಲ್ಲಿ ಆಸಕ್ತಿ ಕಡಿಮೆಯಾಗಿದೆ. ಈ ಕಾರಣದಿಂದಲೇ ಸ್ತನ್ಯಪಾನಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಜಾಗೃತಿ ಮೂಡಿಸುವ ಮತ್ತು ತಾಯಂದಿರನ್ನು ಹಾಲುಣಿಸಲು ಪ್ರೇರೇಪಿಸಲು ಪ್ರತಿ ವರ್ಷ ಆಗಸ್ಟ್ 1 ರಿಂದ ಆಗಸ್ಟ್ 7ರ ವರೆಗೆ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಆಚರಿಸಲಾಗುತ್ತದೆ.
ಈ ಹಿನ್ನೆಲೆಯಲ್ಲಿ ತಾಯಂದಿರಲ್ಲಿ ಮರು-ಹಾಲುಣಿಸುವಿಕೆ, ಸ್ತನ್ಯಪಾನದ ಪ್ರಕ್ರಿಯೆ ಬಗ್ಗೆ ಮಣಿಪಾಲ್ ಆಸ್ಪತ್ರೆಯ ವೈದ್ಯರಾದ ಡಾ. ರವನೀತ್ ಜೋಶಿ ಹಲವು ಉಪಯುಕ್ತ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

"ಭಾರತದಲ್ಲಿ, ಪ್ರತಿ ವರ್ಷ 26 ಮಿಲಿಯನ್ ಮಕ್ಕಳು ಜನಿಸುತ್ತಾರೆ. ಅದರಲ್ಲಿ ಕೇವಲ 41.8% ಮಾತ್ರ ಹುಟ್ಟಿದ ಮೊದಲ ಗಂಟೆಯಲ್ಲಿ ಸ್ತನ್ಯಪಾನ (ಎದೆಹಾಲು) ಪಡೆಯುತ್ತಾರೆ ಮತ್ತು 63.7% ಮಾತ್ರ ಮೊದಲ 6 ತಿಂಗಳವರೆಗೆ ಸ್ತನ್ಯಪಾನ ಪಡೆಯುತ್ತಾರೆ. ಸ್ತನ್ಯಪಾನವು ಮಗುವಿಗೆ ಮತ್ತು ತಾಯಿಗೆ ತುಂಬಾ ಮುಖ್ಯವಾಗಿದೆ. ಮಗುವಿಗೆ ಸ್ತನ್ಯಪಾನವು ಬಲವಾದ ರೋಗನಿರೋಧಕ ಶಕ್ತಿಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ತಾಯಿಗೆ, ಇದು ರೋಗಗಳಿಂದ ರಕ್ಷಣೆ ನೀಡುತ್ತದೆ. ಎದೆಹಾಲು ಕುಡಿಯದ ಶಿಶುಗಳು ದೊಡ್ಡವರಾದ ನಂತರ ಸೋಂಕುಗಳು, ಅಲರ್ಜಿಗಳು, ಆಸ್ತಮಾ, ಬೊಜ್ಜು, ಟೈಪ್ 2 ಡಯಾಬಿಟಿಸ್ ಮತ್ತು ಹೃದ್ರೋಗದಂತಹ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುವ ಸಂಭವವಿದೆ. ಹಾಲುಣಿಸುವ ಮಹಿಳೆಯರಿಗೆ ಸ್ಥೂಲಕಾಯತೆ, ಕಬ್ಬಿಣದ ಕೊರತೆಯ ರಕ್ತಹೀನತೆ, ಆಸ್ಟಿಯೊಪೊರೋಸಿಸ್ ಮತ್ತು ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್‌ನ ಅಪಾಯ ಕಡಿಮೆ".
ತಮ್ಮ ಶಿಶುಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಎದೆಹಾಲು ಉತ್ಪಾದಿಸಲು ಕಷ್ಟಪಡುವ ತಾಯಂದಿರಿದ್ದಾರೆ. ಇದು ಸಂಕಟ ಅನುಭವಿಸುವ ಪರಿಸ್ಥಿತಿ. ಇದು ತಾಯಿಯಲ್ಲಿ ಸಮರ್ಪಕವಲ್ಲದ ಅಥವಾ ತಪ್ಪು ಎದೆಯುಣಿಸುವ ಪ್ರಕ್ರಿಯೆ, ತಾಯ್ತನದ ಒತ್ತಡ, ಆತಂಕ, ಖಿನ್ನತೆ, ಅಥವಾ ಹಾರ್ಮೋನುಗಳ ಅಸಹಜತೆ (ಹೈಪೋಥೈರಾಯ್ಡಿಸಮ್/ ಪಾಲಿಸಿಸ್ಟಿಕ್ ಅಂಡಾಶಯದ ಕಾಯಿಲೆ ಇತ್ಯಾದಿ) ಕಾರಣದಿಂದಾಗಿರಬಹುದು. ಕಡಿಮೆ ಹಾಲು ಉತ್ಪಾದನೆಗೆ ಹೆಚ್ಚಿನ ಕಾರಣಗಳನ್ನು ಸುಲಭವಾಗಿ ಗುರುತಿಸಬಹುದು ಮತ್ತು ಚಿಕಿತ್ಸೆಯನ್ನು ಕೂಡ ನೀಡಬಹುದಾದರೂ, ಸರಿಯಾದ ಶಿಕ್ಷಣ, ಸಲಹೆ ಮತ್ತು ಕುಟುಂಬದ ಬೆಂಬಲವನ್ನು ಸಿಗದಿದ್ದರೆ, ಎದೆಹಾಲಿನ ಉತ್ಪಾದನೆಯು 2-3 ವಾರಗಳಲ್ಲಿ ಕಡಿಮೆಯಾಗುತ್ತದೆ ಮತ್ತು ನಿಧಾನವಾಗಿ ನಿಲ್ಲಬಹುದು. ಈ ತಾಯಂದಿರು ಲಕ್ಟೇಷನ್ ಕನ್ಸಲ್ಟೆಂಟ್ ಬೆಂಬಲ ಮತ್ತು ಮಾರ್ಗದರ್ಶನದೊಂದಿಗೆ ಸ್ತನ್ಯಪಾನವನ್ನು ಮರುಪ್ರಾರಂಭಿಸಲು ಸಾಧ್ಯವಿದೆ. ಈ ಪ್ರಕ್ರಿಯೆಯನ್ನು ಮರು-ಹಾಲುಣಿಸುವಿಕೆ ಎಂದು ಕರೆಯಲಾಗುತ್ತದೆ.

ಮರು ಹಾಲುಣಿಸುವಿಕೆಯು ಎದೆಹಾಲು ಉಣಿಸುವುದನ್ನು ನಿಲ್ಲಿಸಿದ ತಾಯಂದಿರಲ್ಲಿ ಎದೆಹಾಲಿನ ಉತ್ಪಾದನೆಯನ್ನು ಮತ್ತೆ ಉಂಟುಮಾಡುವ ಪ್ರಕ್ರಿಯೆಯಾಗಿದೆ. ಉತ್ತಮ ಎದೆಹಾಲುಣಿಸುವ ತಂತ್ರಗಳನ್ನು ತಿಳಿಸುವ ಮೂಲಕ, ಮಗು ಮತ್ತು ತಾಯಿಯ ನಡುವೆ ಚರ್ಮ ಸಂಪರ್ಕವನ್ನು ಹೆಚ್ಚಿಸುವ ಮೂಲಕ ಮತ್ತು ಮಗುವಿಗೆ ಹಾಲುಣಿಸುವ ಮೂಲಕ ಆಗಾಗ್ಗೆ ಸ್ತನ ಉತ್ತೇಜನ ಅಥವಾ ಕೈ/ಪಂಪ್ ರೀತಿಯಲ್ಲಿ ಮಾಡುವ ಮೂಲಕ ಮರು-ಹಾಲುಣಿಸುವಿಕೆಯನ್ನು ಮತ್ತೆ ಮಾಡಬಹುದು. ಅಗತ್ಯವಿದ್ದರೆ, ಗ್ಯಾಲಕ್ಟಾಗೋಗ್ಸ್ (ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುವ ಪದಾರ್ಥಗಳು) ಅನ್ನು ತಾಯಿಗೆ ವೈದ್ಯರು ನೀಡಬಹುದು. ಈ ಪ್ರಕ್ರಿಯೆಯು ಸುಮಾರು 2 ವಾರಗಳ ಸಮಯ ತೆಗೆದುಕೊಳ್ಳಬಹುದು, ಮತ್ತು ನಂತರ ತಾಯಿಯು ಎದೆ ಹಾಲು ಉತ್ಪಾದಿಸಲು ಪ್ರಾರಂಭಿಸಬಹುದು. ಮಗುವಿಗೆ ಸಾಕಷ್ಟು ಪೋಷಣೆ ಸಿಗುತ್ತಿದೆ ಎಂದು ಖಚಿತಪಡಿಸಿಕೊಳ್ಳಲು ಮರು-ಹಾಲುಣಿಸುವಿಕೆಯನ್ನು ಎಚ್ಚರಿಕೆಯಿಂದ ಗಮನಿಸಬೇಕು.

ಹಾಲುಣಿಸುವಿಕೆಯನ್ನು ಮತ್ತೆ ಮಾಡುವಾಗ ತಾಯಿಗೆ ಸಲಹೆ ನೀಡುವುದು ಅತ್ಯಗತ್ಯ. ಎಲ್ಲಾ ಹಾಲುಣಿಸುವ ತಾಯಂದಿರಿಗೆ, ಅವರ ಕುಟುಂಬದ ಬೆಂಬಲವು ಎದೆಹಾಲಿನ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಸವಾ ನಂತರದ ಖಿನ್ನತೆ, ಮಾನಸಿಕ ಒತ್ತಡ ಮತ್ತು ಆತ್ಮವಿಶ್ವಾಸದ ಕೊರತೆ ಎದೆಹಾಲಿನ ಉತ್ಪಾದನೆಯ ಮೇಲೆ ಪರಿಣಾಮ ಬೀರಬಹುದು. ಕುಟುಂಬದ ಸಲಹೆ, ಭಾವನಾತ್ಮಕ ಬೆಂಬಲ, ತಾಯಂದಿರ ಅಗತ್ಯಗಳನ್ನು ಸೂಕ್ಷ್ಮತೆಯಿಂದ ತೆಗೆದುಕೊಳ್ಳುವುದು ಮತ್ತು ಅವರ ಹಾಲುಣಿಸುವ ತಂತ್ರಗಳು ಅಥವಾ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಹಾಲಿನ ಉತ್ಪಾದನೆಯನ್ನು ಸುಧಾರಿಸಬಹುದು. ಸ್ತನ್ಯಪಾನದ ಮಹತ್ವದ ಬಗ್ಗೆ ತಂದೆಗೆ ಶಿಕ್ಷಣ ನೀಡುವುದರಿಂದ ಸ್ತನ್ಯಪಾನದ ಬಗ್ಗೆ ಕುಟುಂಬದವರ ಜ್ಞಾನವನ್ನು ಹೆಚ್ಚಿಸುವ ಮೂಲಕ ಸ್ವಯಂ-ಫಲದಾಯಕತೆಯನ್ನು ಸುಧಾರಿಸಬಹುದು.
(ಲೇಖನ- ಡಾ. ರವನೀತ್ ಜೋಶಿ, ಕನ್ಸಲ್ಟೆಂಟ್ - ಹಾಲುಣಿಸುವ ತಜ್ಞರು, ಮಣಿಪಾಲ್ ಆಸ್ಪತ್ರೆ, ಹಳೆ ವಿಮಾನ ನಿಲ್ದಾಣ ರಸ್ತೆ)












Click it and Unblock the Notifications