WFH ಅಂತ್ಯ, ಬೆಂಗಳೂರಲ್ಲಿ ಪಿಜಿಗಳ ದರಗಳಲ್ಲಿ ಭಾರೀ ಏರಿಕೆ!
ಬೆಂಗಳೂರು, ಅಕ್ಟೋಬರ್ 16; ಬೆಲೆ ಏರಿಕೆಗಳ ಪಟ್ಟಿಗೆ ಬೆಂಗಳೂರಿನ ಪಿಜಿಗಳು ಸೇರ್ಪಡೆಯಾಗಿವೆ. ಹೌದು ಕಳೆದ ಎರಡು ತಿಂಗಳಿನಿಂದ ಉದ್ಯಾನ ನಗರಿಯಲ್ಲಿ ಪಿಜಿಗಳ ದರಗಳು ಹೆಚ್ಚಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು, ಉದ್ಯೋಗಸ್ಥರು ಹೆಚ್ಚು ಹಣ ಪಾವತಿ ಮಾಡುವುದು ಅನಿವಾರ್ಯವಾಗಿದೆ.
ಶಿಕ್ಷಣ, ಉದ್ಯೋಗಕ್ಕಾಗಿ ಬೆಂಗಳೂರು ನಗರಕ್ಕೆ ದೇಶ, ವಿದೇಶದಿಂದ ಆಗಮಿಸುತ್ತಾರೆ. ಎಲ್ಲರೂ ಬಾಡಿಗೆ ಮನೆ ಮಾಡಿಕೊಂಡು ಇರುವುದಿಲ್ಲ. ಆದ್ದರಿಂಂದ ಪಿಜಿ ವಾಸ್ತವ್ಯದ ಮೊರೆ ಹೋಗುತ್ತಾರೆ. ಅದಕ್ಕಾಗಿ ಮನೆಗಳ ಬಾಡಿಗೆ ಹೆಚ್ಚಾಗುತ್ತಿರುವ ಹಾಗೆಯೇ ಈಗ ಪಿಜಿಗಳಿಗೆ ಭಾರೀ ಡಿಮಾಂಡ್ ಇದೆ.

ಬೆಂಗಳೂರು ನಗರದ ಹಲವು ಐಟಿ ಕಂಪನಿಗಳು ಅಕ್ಟೋಬರ್‌ನಿಂದ ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆ ಕಡಿತಗೊಳಿಸಿವೆ. ಆಫೀಸ್‌ಗೆ ಬರುವುದುದ ಕಡ್ಡಾಯ ಎಂದು ಹೇಳಿವೆ. ಕೆಲವು ಕಂಪನಿಗಳು ನವೆಂಬರ್‌ನಿಂದ ಆಫೀಸಿಗೆ ಬನ್ನಿ ಎಂದು ಇ-ಮೇಲ್ ಕಳಿಸಿವೆ.
ಆಕ್ಸೆಂಚರ್, ಟಿಸಿಎಸ್ ಸೇರಿದಂತೆ ಬಹುದೊಡ್ಡ ಐಟಿ ಕಂಪನಿಗಳು ಮನೆಯಿಂದ ಕೆಲಸ ಮಾಡುವ ವ್ಯವಸ್ಥೆ ಕಡಿಗೊಳಿಸಿವೆ. ಆದ್ದರಿಂದ ಕೋವಿಡ್ ಕಾಲದಿಂದ ಮನೆಯಲ್ಲಿ ಕೆಲಸ ಮಾಡಿಕೊಂಡು ತಮ್ಮ ತಮ್ಮ ಊರುಗಳಲ್ಲಿದ್ದ ಉದ್ಯೋಗಸ್ಥರು ಈಗ ಬೆಂಗಳೂರಿಗೆ ಬಂದು ವಾಸ್ತವ್ಯ ಹೂಡುವುದು ಅನಿವಾರ್ಯವಾಗಿದೆ.
ಎಷ್ಟು ಏರಿಕೆ?; ಮಲ್ಲೇಶ್ವರ ಭಾಗದಲ್ಲಿ ಪಿಜಿಯಲ್ಲಿ ವಾಸ ಮಾಡುವ ತೀರ್ಥಹಳ್ಳಿ ಮೂಲದ ದೀಕ್ಷಾ ಪ್ರಕಾರ ಸುಮಾರು 6 ತಿಂಗಳ ಹಿಂದೆ ಪಿಜಿಗಳ ದರ 3 ರಿಂದ 5 ಸಾವಿರ ರೂ. ತನಕ ಇತ್ತು. ಈಗ ಬೇಡಿಕೆ ಹೆಚ್ಚಾಗಿದ್ದು, 6 ರಿಂದ 12 ಸಾವಿರದ ತನಕ ದರ ಹೇಳುತ್ತಿದ್ದಾರೆ. ಇಷ್ಟು ದರ ಕೊಟ್ಟು ಮಧ್ಯಮ ವರ್ಗದವರು ಇರುವು ಸಾಧ್ಯವೇ? ಎಂದು ಪ್ರಶ್ನಿಸಿದರು.
ಹಲವು ಐಟಿ ಕಂಪನಿಗಳು ಮನೆಯಿಂದ ಕೆಲಸ ಮಾಡುವ ಆಯ್ಕೆಯನ್ನು ರದ್ದು ಮಾಡಿವೆ. ಅಲ್ಲದೇ ಇಂಜಿನಿಯರಿಂಗ್ ಕಾಲೇಜ್‌ಗಳ ತರಗತಿಗಳು ಆರಂಭವಾಗಿವೆ. ಆದ್ದರಿಂದ ನಗರಕ್ಕೆ ಬಂದು ನೆಲೆಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದು ಪಿಜಿಗಳ ಬೇಡಿಕೆ ಜಾಸ್ತಿ ಮಾಡಿದ್ದು, ದರಗಳನ್ನು ಏರಿಸಿದ್ದಾರೆ ಎನ್ನುತ್ತಾರೆ ದೀಕ್ಷಾ.
ಬಸವನಗುಡಿ ಭಾಗದಲ್ಲಿ ಪಿಜಿಯಲ್ಲಿ ನೆಲೆಸಿರುವ ಮಾನಸ, ಎರಡು ತಿಂಗಳಿನಲ್ಲಿ ಪಿಜಿಗಳ ದರಗಳನ್ನು ಏರಿಕೆ ಮಾಡಲಾಗುತ್ತಿದೆ. ಸುಮಾರು ಬಡಾವಣೆಗಳಲ್ಲಿ ಹುಡುಕಿದರು ಕಚೇರಿ, ಕಾಲೇಜು ಹತ್ತಿರದ ಪಿಜಿಗಳು ಸಿಗುತ್ತಿಲ್ಲ. ಸಿಕ್ಕಿದರೂ ಊಟ, ಸ್ವಚ್ಛತೆ ವಿಚಾರದಲ್ಲಿ ರಾಜಿಯಾಗಬೇಕು ಎಂದರು.
ಬೆಂಗಳೂರು ನಗರಕ್ಕೆ ಬೇರೆ ರಾಜ್ಯ, ದೇಶಗಳಿಂದ ಬರುವವರಿಗೆ ವಾಸ್ತವ್ಯ ಹೂಡಲು ಪಿಜಿಗಳಿಂದ ಅನುಕೂಲವೇ ಆಗಿದೆ. ಕೋವಿಡ್ ಸಮಯದಲ್ಲಿ ಐಟಿ ಕಂಪನಿಗಳು ಮನೆಯಿಂದಲೇ ಕೆಲಸ ಮಾಡುವ ಆಯ್ಕೆ ನೀಡಿದ ಮೇಲೆ ಪಿಜಿ ಉದ್ಯಮಕ್ಕೆ ಭಾರೀ ಪೆಟ್ಟು ಬಿದ್ದಿತ್ತು. ಈಗ ಕಂಪನಿಗಳು ಮತ್ತೆ ಕಚೇರಿಗೆ ಬನ್ನಿ ಎಂದು ಕರೆದಾಗ ಡಿಮಾಂಡ್ ಸೃಷ್ಟಿಯಾಗಿ ಪಿಜಿಗಳು ದರ ಏರಿಕೆ ಮಾಡಿವೆ.
ನಗರದಲ್ಲಿ ಅತಿ ಹೆಚ್ಚು ಪಿಜಿಗಳು ಇವೆ. ಕೆಲವು ತಿಂಗಳ ಹಿಂದೆ ಪಿಜಿಗಳಿಗೆ ಜಿಎಸ್‌ಟಿ ತೆರಿಗೆ ಹಾಕಿದಾಗ ಖಾಸಗಿ ಪಿಜಿಗಳು, ಎನ್‌ಜಿಒ ಹಾಗೂ ಹಾಸ್ಟೆಲ್‌ಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ಕೊಡಿ ಎಂದು ಅಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್‌ಗೆ ಮನವಿ ಸಲ್ಲಿಸಿದ್ದವು. ಆದರೆ ಮನವಿಯನ್ನು ತಿರಸ್ಕರಿಸಲಾಗಿತ್ತು.
ಇಬ್ಬರು, ಮೂವರು ಶೇರಿಂಗ್ ಮಾಡುವ ಪಿಜಿಗಳಿಗೆ ವಿಜಯನಗರ ಭಾಗದಲ್ಲಿ ಈಗ 7 ರಿಂದ 9 ಸಾವಿರ ರೂ., ಮಲ್ಲೇಶ್ವರ ಭಾಗದಲ್ಲಿ 8 ರಿಂದ 12 ಸಾವಿರ, ಜಯನಗರ ಮತ್ತು ಜೆಪಿ ನಗರ ಭಾಗದಲ್ಲಿ 8 ರಿಂದ 10 ಸಾವಿರ ರೂ. ದರವನ್ನು ಕೇಳಲಾಗುತ್ತಿದೆ ಎಂಬ ಮಾಹಿತಿ ಇದೆ.
ನಮ್ಮ ಮೆಟ್ರೋ ನಿಲ್ದಾಣಕ್ಕೆ ಹತ್ತಿರವಿರುವ ಪಿಜಿಗಳಲ್ಲಿ ಸಹಜವಾಗಿಯೇ ದರಗಳು ಹೆಚ್ಚಿವೆ. ಐಟಿ ಕಂಪನಿಗಳ ಸುತ್ತಮತ್ತ, ಕೋರಮಂಗಲ ಭಾಗದಲ್ಲಿ ಪಿಜಿಗಳ ದರಗಳು ಇನ್ನಷ್ಟು ಹೆಚ್ಚಿದೆ. ಬರುವ ಸಂಬಳದಲ್ಲಿ 8, 10 ಸಾವಿರ ಪಿಜಿಗೆ ಕಟ್ಟಿದರೆ ನಮಗೇನು ಉಳಿಯುತ್ತದೆ? ಎಂದು ಪ್ರಶ್ನೆ ಮಾಡುತ್ತಾರೆ ಕೆಲವರು.












Click it and Unblock the Notifications