ಬೆಂಗಳೂರಿನಲ್ಲಿ ಮಹಿಳಾ ಟೆಕ್ಕಿ ಉಸಿರುಗಟ್ಟಿಸಿ ಹತ್ಯೆ
ಬೆಂಗಳೂರು, ಆಗಸ್ಟ್ 20 : ಮಹಿಳಾ ಟೆಕ್ಕಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವೈಟ್‌ಫೀಲ್ಡ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಕೊಲೆಯಾದವರನ್ನು 23 ವರ್ಷದ ವಿಜಯಲಕ್ಷ್ಮೀ ಎಂದು ಗುರುತಿಸಲಾಗಿದೆ. ದೆಹಲಿ ಮೂಲದ ವಿಜಯಲಕ್ಷ್ಮೀ ಆಗಸ್ಟ್ 1 ರಿಂದ ಐಟಿಪಿಎಲ್‌ನಲ್ಲಿರುವ ಎಂಯು-ಸಿಗ್ಮಾ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ವೈಟ್‌ಫೀಲ್ಡ್ ಸಮೀಪದ ಇಮ್ಮಡಿಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿದ್ದರು, ಪ್ರಿಯಕರನ ಜೊತೆ ವಾಸವಾಗಿದ್ದರು. ಮನೆಯಲ್ಲಿಯೇ ಹಾಸಿಗೆ ಮೇಲೆ ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಉಸಿರುಗಟ್ಟಿಸಿ ಅವರನ್ನು ಹತ್ಯೆ ಮಾಡಲಾಗಿದೆ.

ಮೂರು ದಿನಗಳ ಹಿಂದೆ ಕೊಲೆಯಾಗಿರಬಹುದು ಎಂದು ಶಂಕಿಸಲಾಗಿದೆ. ಮನೆಯ ಬಳಿ ಯಾರೂ ಓಡಾಡುತ್ತಿರಲಿಲ್ಲ. ಇದರಿಂದ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಂದು ನೋಡಿದಾಗ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.
ವೈಟ್‌ಫೀಲ್ಡ್ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೃತದೇಹವನ್ನು ವೈದೇಹಿ ಆಸ್ಪತ್ರೆಗೆ ರವಾನಿಸಲಾಗಿದೆ. ವಿಜಯಲಕ್ಷ್ಮೀ ಪ್ರಿಯಕರ ನಾಪತ್ತೆಯಾಗಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಪ್ರಿಯಕರ ದೆಹಲಿ ಮೂಲದವನು ಎಂದು ತಿಳಿದುಬಂದಿದ್ದು, ದೂರವಾಣಿ ಕರೆಗಳ ಮಾಹಿತಿಯನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ.












Click it and Unblock the Notifications