ಜುಲೈ 1ರಿಂದ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಆಹಾರ ಧಾನ್ಯ: ಅಂತ್ಯೋದಯ ಕಾರ್ಡ್‌ದಾರರಿಗೂ ಅನ್ವಯ
ಬೆಂಗಳೂರು, ಜೂನ್ 2: ಜುಲೈ 1ರಿಂದ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ದಾರರಿಗೆ ಪ್ರತಿ ತಿಂಗಳು 10 ಕೆಜಿ ಆಹಾರ ಧಾನ್ಯ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬಿಪಿಎಲ್ ಕಾರ್ಡ್‌ನ ಪ್ರತಿ ವ್ಯಕ್ತಿಗೂ 10 ಕೆಜಿ ಆಹಾರ ಧಾನ್ಯ ಸಿಗಲಿದೆ.
ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯನವರು, ಚುನಾವಣೆಗೂ ಮುನ್ನ ಘೋಷಣೆ ಮಾಡಿದ್ದ ಎಲ್ಲಾ 5 ಗ್ಯಾರಂಟಿಗಳನ್ನು ಈಡೇರಿಸುವುದಾಗಿ ಸ್ಪಷ್ಟಪಡಿಸಿದರು. 10 ಕೆಜಿ ಅಕ್ಕಿ ಕೊಡಲು ಸದ್ಯ ದಾಸ್ತಾನು ಇಲ್ಲದ ಕಾರಣ, ಜುಲೈ 1 ರಿಂದ 10 ಕೆ.ಜಿ. ಆಹಾರ ಧಾನ್ಯಗಳನ್ನು ನೀಡಲಾಗುವುದು ಎಂದು ಹೇಳಿದ್ದಾರೆ.

ಈ ಮೊದಲಿದ್ದ ಬಿಜೆಪಿ ಸರ್ಕಾರ 7 ಕೆಜಿ ಬದಲಾಗಿ 5 ಕೆಜಿ ಅಕ್ಕಿ ಕೊಡುತ್ತಿದ್ದರು. ಚುನಾವಣಾ ಸಂದರ್ಭದಲ್ಲಿ ನಾವು ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದೆವು ನುಡಿದಂತೆ ನಡೆಯುವುದು ನಮ್ಮ ಕರ್ತವ್ಯ, ಅದರಂತೆ ಬಿಪಿಎಲ್ ಕಾರ್ಡ್ ಜೊತೆಗೆ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೂ ಕೂಡ 10 ಕೆಜಿ ಅಕ್ಕಿ ಸಿಗುತ್ತದೆ ಎಂದು ಹೇಳಿದರು.
ಸರ್ಕಾರಕ್ಕೆ 1400 ಕೋಟಿ ರುಪಾಯಿ ಹೊರೆ
ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವ ಎಲ್ಲರಿಗೂ ಪ್ರತಿ ತಿಂಗಳು ಉಚಿತವಾಗಿ ಅಕ್ಕಿ ಸಿಗಲಿದೆ. ಅಕ್ಕಿ ಖರೀದಿ ಮಾಡಲು ಅಂದಾಜು 1400 ಕೋಟಿ ರುಪಾಯಿ ವ್ಯಯ ಮಾಡಬೇಕಾಗುತ್ತದೆ. ಸದ್ಯ ಕೇಂದ್ರ ಸರ್ಕಾರ ನೀಡುತ್ತಿರುವ 5 ಕೆಜಿ ಅಕ್ಕಿಗೆ ಏನಾದರೂ ನಿಯಮಗಳನ್ನು ವಿಧಿಸಿದರೆ, ರಾಜ್ಯ ಸರ್ಕಾರಕ್ಕೆ ಇನ್ನಷ್ಟು ಸಮಸ್ಯೆಯಾಗಬಹುದು. 10 ಕೆಜಿ ಅಕ್ಕಿ ನೀಡುವಂತೆ ಈಗಾಗಲೇ ವಿರೋಧ ಪಕ್ಷಗಳು ಒತ್ತಾಯ ಮಾಡುತ್ತಿವೆ. ಆದರೆ ಸದ್ಯ ಅಕ್ಕಿ ದಾಸ್ತಾನು ಇಲ್ಲದ ಕಾರಣ, ಆಹಾರ ಧಾನ್ಯಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ.
ವಿರೋಧ ಪಕ್ಷಗಳ ಟೀಕೆ
10 ಕೆಜಿ ಅಕ್ಕಿ ಬದಲು ಆಹಾರ ಧಾನ್ಯ ಕೊಡ್ತೇವೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದು ಇದರಲ್ಲಿ ಸಾಕಷ್ಟು ಗೊಂದಲಗಳಿಗೆ. ಚುನಾವಣೆಗೆ ಮುನ್ನ 10 ಕೆಜಿ ಅಕ್ಕಿ ಕೊಡ್ತೀವಿ ಎಂದು ಹೇಳಿದ್ದವರು, ಈಗ ಆಹಾರ ಧಾನ್ಯ ಎನ್ನುತ್ತಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ. ಯಾವುದೇ ಷರತ್ತಿಲ್ಲದೆ ಎಲ್ಲ ಕೊಡುಗೆಗೆಳನ್ನು ಘೋಷಿಸಿ ಈಗ ಎಲ್ಲದಕ್ಕೂ ಷರತ್ತು ವಿಧಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದರು.












Click it and Unblock the Notifications