ಪರಪುಷನ ಜೊತೆ ಅಕ್ರಮ ಸಂಬಂಧವಿರುವ ಮಹಿಳೆಗೆ ಜೀವನಾಂಶ ಕೊಡಬೇಕೇ? ಹೈಕೋರ್ಟ್ ಮಹತ್ವದ ರೂಲಿಂಗ್
ಬೆಂಗಳೂರು, ಅ 7 : ವಿವಾಹವಾಗಿದ್ದರೂ ಮತ್ತೊಬ್ಬ ಪುರುಷನ ಜತೆಯಲ್ಲಿ ಅಕ್ರಮ ಸಂಬಂಧವಿಟ್ಟುಕೊಂಡು ಸಹಜೀವನ ನಡೆಸುತ್ತಿರುವ ಮಹಿಳೆ ಪತಿಯಿಂದ ಜೀವನಾಂಶ ಕೇಳುವ ಹಕ್ಕಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶವನ್ನು ನೀಡಿದೆ.
ಅರ್ಜಿದಾರರ ಅಕ್ರಮ ಸಂಬಂಧ ಹೊಂದಿದ್ದು ಪ್ರಾಮಾಣಿಕರಿಲ್ಲದಿದ್ದಾಗ ಪತಿಯಿಂದ ಜೀವನಾಂಶ ನೀಡಬೇಕೆಂಬ ವಾದ ಒಪ್ಪಿಕೊಳ್ಳಲಾಗುವುದಿಲ್ಲ. ಜೊತೆಗೆ, ಪತಿಯ ಕಡೆಯಿಂದ ಯಾವುದೆ ನಿರೀಕ್ಷೆ ಮಾಡಬಾರದು ಎಂದು ನ್ಯಾಯಪೀಠ ತಿಳಿಸಿದೆ.

ಚಿಕ್ಕಮಗಳೂರಿನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಕ್ರಿಮಿನಲ್ ಪುನರ್ ಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ಪಟ್ಟಿದ್ದು, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ವಾದ - ಪ್ರತಿವಾದ ಆಲಿಸಿದ ನ್ಯಾಯಾಲಯ, ಅರ್ಜಿದಾರರು ಮತ್ತೊಬ್ಬ ವ್ಯಕ್ತಿಯೊಂದಿಗೆ ಓಡಿಹೋಗಿರುವ ಸಂಬಂಧ ದೂರು ದಾಖಲಾಗಿದ್ದು, ತನಿಖೆ ವೇಳೆ ಆಪ್ತನೊಂದಿಗೆ ನೆಲೆಸಲು ಇಚ್ಚಿಸುತ್ತಿದ್ದಾರೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. ಇದೇ ಆಧಾರದಲ್ಲಿ ವಿಚ್ಚೇದನವೂ ಮಂಜೂರಾಗಿದೆ.
ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿಲ್ಲ
ಈ ಪ್ರಕ್ರಿಯೆ ಪ್ರಶ್ನಿಸಿಲ್ಲ, ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿಲ್ಲ. ಈ ಸಂಬಂಧ ಹಿಂದೊಮ್ಮೆ ರಾಜಿ ಪಂಚಾಯತಿ ನಡೆಸಿದ ಬಳಿಕ ಗಂಡನ ಮನೆಗೆ ಕಳುಹಿಸಲಾಗಿತ್ತು. ಆದರೂ, ಅವರು ಗಂಡನನ್ನು ಬಿಟ್ಟು ಮತ್ತೊಬ್ಬ ವ್ಯಕ್ತಿಯೊಂದಿಗೆ ಸಹಜೀವನ ನಡೆಸುತ್ತಿದ್ದಾರೆಂದು ಆಕೆಯ ಸಹೋದರ ತಿಳಿಸಿದ್ದಾರೆ.
ಜತೆಗೆ, ಅರ್ಜಿದಾರರನ್ನು ಪಾಟಿ ಸವಾಲಿಗೆ ಒಳಪಡಿಸಿದಾಗ ಜೀವನ ನಡೆಸುವುದಕ್ಕಾಗಿ ಯಾವುದೇ ಆದಾಯದ ಮೂಲಗಳಿಲ್ಲ ಎಂಬುದಾಗಿ ತಿಳಿಸಿದ್ದಾರೆ. ಆದರೆ, ಸಾಕ್ಷಿಗಳ ಪ್ರಕಾರ ಮತ್ತೊಂದು ವ್ಯಕ್ತಿಯೊಂದಿಗೆ ನೆಲೆಸಿದ್ದು, ಅವರೇ ಜೀವನ ನೋಡಿಕೊಳ್ಳುತ್ತಿದ್ದಾರೆ. ಎಲ್ಲ ಸಂದರ್ಭಗಳಲ್ಲಿಯೂ ಅವನೊಟ್ಟಿಗೆ ಇರುತ್ತಿರುವ ಅಂಶ ಸಾಕ್ಷ್ಯಾಧಾರಗಳಿಂದ ತಿಳಿದು ಬಂದಿದೆ. ಆದ ಕಾರಣ ಅರ್ಜಿದಾರರ ಪರಿಹಾರ ನೀಡಲಾಗದು ಎಂದು ಪೀಠ ತಿಳಿಸಿದೆ.
ಸಾಕ್ಷ್ಯಾಧಾರಗಳನ್ನು ಪರಿಗಣಿಸಿಯೇ ಈ ಆದೇಶ ನೀಡಿದೆ
ಅಲ್ಲದೆ, ಅರ್ಜಿದಾರರ ಮನವಿಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸದೆ ಜೀವನಾಂಶ ನೀಡಲು ನಿರ್ದೇಶನ ನೀಡಿದೆ. ಆದರೆ, ಸೆಷನ್ಸ್ ನ್ಯಾಯಾಲಯ ಎಲ್ಲಾ ಸಾಕ್ಷ್ಯಾಧಾರಗಳನ್ನು ಪರಿಗಣಿಸಿಯೇ ಈ ಆದೇಶ ನೀಡಿದೆ. ಇದರಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದ ನ್ಯಾಯಪೀಠ ಪುನರ್ ಪರಿಶೀಲನಾ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಅರ್ಜಿ ದಾರರ ಪರ ವಕೀಲರು, ಅರ್ಜಿದಾರರು ಪ್ರತಿವಾದಿಯವರನ್ನು ಕಾನೂನು ಬದ್ಧವಾಗಿ ವಿವಾಹವಾಗಿದ್ದು, ಪತ್ನಿಗೆ ಜೀವನಾಂಶ ನೀಡುವುದು ಗಂಡನ ಕರ್ತವ್ಯವಾಗಿದೆ ಎಂದು ನ್ಯಾಯಪೀಠವನ್ನು ಕೋರಿದರು. ಪ್ರತಿವಾದಿಯ ಪರ ವಕೀಲರು, ಅಕ್ರಮ ಸಂಬಂಧದ ಆಧಾರದಲ್ಲಿ ವಿಚಾರಣೆ ನ್ಯಾಯಾಲಯ ದಂಪತಿಯ ನಡುವೆ ವಿಚ್ಚೇದನ ಮಂಜೂರು ಮಾಡಿದೆ.
ಅಲ್ಲದೆ, ಅರ್ಜಿದಾರರು ಪತಿಯೊಂದಿಗೆ ಜೀವನ ನಡೆಸಲು ನಿರಾಕರಿಸಿದ್ದು, ಮತ್ತೊಬ್ಬ ವ್ಯಕ್ತಿಯೊಂದಿಗೆ ಜೀವನ ನಡೆಸುತ್ತಿದ್ದಾರೆ. ಜತೆಗೆ, ಕಾನೂನು ಬದ್ಧವಾಗಿ ದಂಪತಿಯಾಗಿದ್ದರೂ, ಅಕ್ರಮ ಸಂಬಂಧ ಹೊಂದಿರುವ ಅವರ ನಡುವಳಿಕೆಯಿರುವುದರಿಂದ ಯಾವುದೇ ಜೀವನಾಂಶಕ್ಕೆ ಅರ್ಹರಲ್ಲ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಪ್ರಕರಣದ ಹಿನ್ನೆಲೆ: ಚಿಕ್ಕಮಗಳೂರು ಜಿಲ್ಲೆಯ ರಾಮನಹಳ್ಳಿಯ ವ್ಯಕ್ತಿ ಅದೇ ಜಿಲ್ಲೆಯ ರತ್ನಕೋಟೆ ಎಂಬ ಗ್ರಾಮದ ಮಹಿಳೆಯನ್ನು ವಿವಾಹವಾಗಿದ್ದರು. ವಿವಾಹದ ಬಳಿಕ ಪತ್ನಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧವಿಟ್ಟು ಕೊಂಡಿದ್ದರು. ಈ ಸಂಬಂಧ ರಾಜಿ ಪಂಚಾಯಿತಿ ನಡೆದು ಬುದ್ದಿವಾದ ಹೇಳಲಾಗಿತ್ತು. ಆದರೂ, ಆಕೆ ತನ್ನ ಚಟವನ್ನು ಬಿಟ್ಟಿರಲಿಲ್ಲ.
ಇದೇ ಆಧಾರದಲ್ಲಿ ಕೌಟುಂಬಿಕ ನ್ಯಾಯಾಲಯ ವಿಚ್ಚೇದನವನ್ನೂ ಮಂಜೂರು ಮಾಡಿತ್ತು. ಆದರೆ, ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಪತ್ನಿಗೆ ಜೀವನ ನೀರ್ವಹಣೆಗೆ 1,500 ರೂ ಮನೆ ಬಾಡಿಗೆಗೆ 1,000 ರೂ ಮತ್ತು 5,000 ರೂ. ಗಳನ್ನು ಪರಿಹಾರವಾಗಿ ನೀಡಲು ಸೂಚನೆ ನೀಡಿತ್ತು. ಈ ಆದೇಶವನ್ನು ಸೆಷನ್ಸ್ ನ್ಯಾಯಾಲಯ ರದ್ದು ಪಡಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರ ಹೈಕೋರ್ಟ್‌ನಲ್ಲಿ ಕ್ರಿಮಿನಲ್ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.












Click it and Unblock the Notifications