ಕುಡಿಯಲು ಇಲ್ಲದ ನೀರು ಕುಣಿಯಲು ಎಲ್ಲಿಂದ ಬಂತು? ನಗರದಲ್ಲಿ ಭರ್ಜರಿ ಹೋಳಿ ರೇನ್ ಡ್ಯಾನ್ಸ್- ಸಾರ್ವಜನಿಕರ ಆಕ್ರೋಶ!
ಬೆಂಗಳೂರು ಮಾರ್ಚ್ 26: ಬೆಂಗಳೂರಿನಲ್ಲಿ ಎಲ್ಲೆಡೆ ಕಳೆದ ದಿನ ಭರ್ಜರಿಯಾಗಿ ಹೋಳಿ ಹಬ್ಬವನ್ನು ಆಚರಿಸಲಾಯಿತು. ಮಕ್ಕಳು, ಯುವಕ-ಯುವತಿಯರು ಬಣ್ಣದೋಕುಳಿಯಲ್ಲಿ ಮಿಂದೆದ್ದರು. ಮೈದಾನ, ಮನೆಯಂಗಳ ಹಾಗೂ ಪ್ರತ್ಯೇಕ ಸ್ಥಳಗಳಲ್ಲಿ ಹೋಳಿ ಆಚರಣೆಯನ್ನು ಆಯೋಜಿಸಿ ಜನ ಬಣ್ಣದಲ್ಲಿ ಮುಳುಗೆದ್ದರು. ಇದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಹೌದು... ಈ ಬಾರಿ ಬಣ್ಣದ ಹಬ್ಬ ಆಚರಿಸಲು ಕುಡಿಯುವ ನೀರು ಬಳಕೆ ಮಾಡದಂತೆ ಎಚ್ಚರಿಕೆ ನೀಡಲಾಗಿತ್ತು. ನೀರನ್ನು ಪೋಲು ಮಾಡದೆ ಹೋಳಿ ಆಡುವಂತೆ ಜಲಮಂಡಳಿ ಮನವಿ ಮಾಡಿಕೊಂಡಿತ್ತು. ಆದರೆ ಇದನ್ನು ಕೆಲವರು ಪಾಲಿಸಿದರೆ ಕೆಲವರು ಪಾಲಿಸಿದಂತೆ ಕಾಣಿಸುತ್ತಿಲ್ಲ.

ಯಾಕೆಂದರೆ ನಗರದಲ್ಲಿ ಹಲವೆಡೆ ಹೋಳಿ ಆಚರಣೆಗೆಂದು ರೇನ್ ಡ್ಯಾನ್ಸ್ ಆಯೋಜಿಸಿರುವುದು ಕಂಡು ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಹೋಳಿ ಸಂಭ್ರಮದಲ್ಲಿ ರೇನ್ ಡ್ಯಾನ್ಸ್ ಫೋಟೋಗಳು ವೈರಲ್ ಆಗುತ್ತಿದ್ದಂತೆ ಜನ ಕೆಂಡವಾಗಿದ್ದಾರೆ. ಕುಡಿಯಲು ನೀರಿಲ್ಲದ ಸಮಯದಲ್ಲಿ ಪೂಲ್‌ಗಳಲ್ಲಿ ಹೋಳಿ ಆಡಿರುವುದು ಹಾಗೂ ರೇನ್ ಡ್ಯಾನ್ಸ್ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಬರ ಪರಿಸ್ಥಿತಿಯಿಂದ ಕುಡಿಯುವ ನೀರಿಗೆ ಕೊರತೆಯಾಗಿರುವ ಕಾರಣ ಹಬ್ಬದ ವೇಳೆ ನೀರನ್ನು ಮಿತವಾಗಿ ಬಳಸಬೇಕು ಎಂಬ ಜನಮಂಡಳಿಯ ಮನವಿಗೆ ಕೆಲವೆಡೆ ಮಾತ್ರ ಸ್ಪಂದನೆ ದೊರಕಿದೆ. ಬಹುತೇಕ ಕಡೆಗಳಲ್ಲಿ ಎಂದಿನಂತೆ ಯಥೇಚ್ಚವಾಗಿ ನೀರನ್ನು ಬಳಸಿ ಬಣ್ಣದ ಹಬ್ಬವನ್ನು ಆಚರಿಸಲಾಯಿತು. ಕೆಲವು ಪ್ರದೇಶಗಳಲ್ಲಿ ಖಾಸಗಿಯಾಗಿ ಬಣ್ಣದೋಕುಳಿ ಜೊತೆಗೆ ರೇನ್ ಡ್ಯಾನ್ಸ್, ಪೋಲ್ ಡ್ಯಾನ್ಸ್ ಕೂಡ ಜರುಗಿದವು. ಹೀಗಾಗಿ ಮಿತವಿಲ್ಲದೆ ನೀರು ಬಳಕೆಯ ವಿರುದ್ಧ ಜನ ಸಿಡಿದೆದ್ದಿದ್ದಾರೆ.

ಯುವ ಜನತೆ ಸಂಭ್ರಮದೊಂದಿಗೆ ಕುಣಿದ ಕುಪ್ಪಳಿಸಿ ಹಬ್ಬವನ್ನು ಆಚರಿಸಿದರು. ಮಕ್ಕಳಂತೂ ಸ್ನೇಹಿತರಿಗೆ ಬಣ್ಣ ಎರಚುತ್ತಾ, ಬಣ್ಣದ ನೀರು ತುಂಬಿದ ಬಲೂನುಗಳನ್ನು ತೂರಿ ಖುಷಿ ಪಟ್ಟರು, ಕಚೇರಿ, ಕಂಪನಿ, ಕೈಗಾರಿಕೆ ಸೇರಿ ಎಲ್ಲಾ ಕಡೆಗಳಲ್ಲಿ ಹಬ್ಬದ ಸಡಗರವಿತ್ತು. ಉದ್ಯೋಗಿಗಳು ಬಣ್ಣ ಹಚ್ಚಿ, ಸಿಹಿ ತಿನಿಸುಗಳನ್ನು ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಹೀಗೆ ನೀರು ವ್ಯತ್ಯಯ ಮಾಡಿದ್ದಕ್ಕೆ ಸಾಮಾನ್ಯ ಜನ ಕೆಲವೆಡೆ ಮಾತ್ರ ನೀರು ಬಳಕೆಗೆ ಮಿತವಿಲ್ಲ, ದುಡ್ಡು ಇದ್ದರೆ ಏನೂ ಬೇಕಾದರೂ ಸಿಗುತ್ತೆ ಅಂತ ಕೋಪಗೊಂಡಿದ್ದಾರೆ.
ಬಣ್ಣದ ಪುಡಿಯಲ್ಲಷ್ಟೇ ಹಬ್ಬ: ನಗರದ ಅರಮನೆ ಮೈದಾನದ ಬಳಿ ಆಯೋಜಿಸಿದ್ದ ಜಯಮಹಲ್ ಹೋಲಿ ಕಾರ್ಯಕ್ರಮದಲ್ಲಿ ಪ್ರತಿಬಾರಿ ರೈನ್ ಡ್ಯಾನ್ಸ್ ಇರುತ್ತಿತ್ತು. ಆದರೆ, ಈ ಬಾರಿ ಜಲಮಂಡಳಿಯಿಂದಲೇ ಎಚ್ಚರಿಕೆ ಸೂಚನೆ ಬಂದಿದ್ದ ಹಿನ್ನೆಲೆಯಲ್ಲಿ ಕೇವಲ ಬಣ್ಣದ ಪುಡಿ ಬಳಸಿ ಹಬ್ಬವನ್ನು ಆಚರಿಸಲಾಯಿತು. ನೂರಾರು ಯುವ ಜನತೆ ಗುಂಪು ಸೇರಿ ಕೇವಲ ಪುಡಿ ಬಣ್ಣವನ್ನು ಪರಸ್ಪರ ಹಚ್ಚಿಕೊಂಡು ಡಿ.ಜೆ ಸಂಗೀತಕ್ಕೆ ನೃತ್ಯ ಮಾಡಿ ಸಂಭ್ರಮಿಸಿದರು.
ಹೋಳಿ ಹೆಸರಲ್ಲಿ ರೈನ್ ಡ್ಯಾನ್ಸ್: ಟೀಕೆ
ನಗರದ ಪ್ರತಿಷ್ಠಿತ ಅಪಾರ್ಟ್‌ಮೆಂಟ್ ಸಮುಚ್ಚಯಗಳಲ್ಲಿ ಕೆಲವೆಡೆ ರೈನ್ ಡ್ಯಾನ್ಸ್‌ಗೆ ವ್ಯವಸ್ಥೆ ಮಾಡಿದ್ದು, ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿದೆ. ಅಪಾರ್ಟ್‌ಮೆಂಟ್ ಹೆಸರು ಉಲ್ಲೇಖಿಸದೆ ವಿಡಿಯೋ ಪೋಸ್ಟ್ ಮಾಡಿರುವ ಆಮ್ ಆದ್ಮಿ ಪಕ್ಷದ ಮುಖಂಡ ಅಶೋಕ ಮೃತ್ಯಂಜಯ, ಹಬ್ಬ ಆಚರಣೆ ಸಂತೋಷ ತರುತ್ತದೆ ನಿಜ. ಆದರೆ, ನೀರಿನ ಸಮಸ್ಯೆಯನ್ನು ನಾವೆಲ್ಲರೂ ಅರ್ಥ ಮಾಡಿಕೊಂಡು ಜವಾಬ್ದಾರಿಯಾಗಿ ವರ್ತಿಸಬೇಕು ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.












Click it and Unblock the Notifications