ಬೆಂಗಳೂರು ಹಿಂಸಾಚಾರ: ಶಾಸಕ ಶ್ರೀನಿವಾಸಮೂರ್ತಿ ನಿವಾಸಕ್ಕೆ ಬಿಜೆಪಿ ನಿಯೋಗ
ಬೆಂಗಳೂರು, ಆಗಸ್ಟ್.16: ಬೆಂಗಳೂರಿನ ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ) ಮತ್ತು ದೇವರ ಜೀವನಹಳ್ಳಿ(ಡಿ.ಜೆ.ಹಳ್ಳಿ)ಯಲ್ಲಿ ನಡೆದ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀನಿವಾಸಮೂರ್ತಿ ನಿವಾಸಕ್ಕೆ ಬಿಜೆಪಿ ನಿಯೋಗ ಭೇಟಿ ನೀಡಿತು.
Recommended Video
ಬಿಜೆಪಿ ಉಪಾಧ್ಯಕ್ಷ ಅರವಿಂದ ಲಿಂಬಾವಳಿ ನೇತೃತ್ವದ ಬಿಜೆಪಿ ನಿಯೋಗ ಕಾವಲ್ ಬೈರಸಂದ್ರದಲ್ಲಿರುವ ಶಾಸಕ ಶ್ರೀನಿವಾಸಮೂರ್ತಿ ಅವರ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಪಿ.ಸಿ ಮೋಹನ್ ಮತ್ತು ಛಲವಾದಿ ನಾರಾಯಣಸ್ವಾಮಿ ಸ್ಥಳ ಪರಿಶೀಲನೆ ನಡೆಸಿದರು. ಶಾಸಕರ ಮನೆ ಎದುರು ನಡೆದ ಗಲಾಟೆ ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಿತು.
ಬಿಜೆಪಿ ನಿಯೋಗ ಭೇಟಿ ಹಿನ್ನೆಲೆ ಶಾಸಕ ಶ್ರೀನಿವಾಸಮೂರ್ತಿ ನಿವಾಸದ ಸುತ್ತಮುತ್ತಲಿನಲ್ಲಿ ರಾಪಿಡ್ ಆಕ್ಷನ್ ಫೋರ್ಸ್ ನಿಯೋಜಿಸಲಾಗಿದ್ದು, ಬಿಗಿ ಭದ್ರತೆಯನ್ನು ಒದಗಿಸಲಾಗಿದೆ. ಶನಿವಾರವಷ್ಟೇ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ನೇತೃತ್ವದ ಕಾಂಗ್ರೆಸ್ ಸತ್ಯ ಶೋಧನಾ ಸಮಿತಿಯು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿತ್ತು.

ಮುನೇಗೌಡ ನಿವಾಸಕ್ಕೂ ಬಿಜೆಪಿ ನಿಯೋಗ:
ಕಾವಲ್ ಬೈರಸಂದ್ರದಲ್ಲಿ ಶಾಸಕ ಶ್ರೀನಿವಾಸಮೂರ್ತಿ ಮನೆ ಪಕ್ಕದಲ್ಲಿದ್ದ ಮುನೇಗೌಡರ ನಿವಾಸಕ್ಕೂ ಬಿಜೆಪಿ ನಿಯೋಗವು ಭೇಟಿ ನೀಡಿತು. ಕಳೆದ ಆಗಸ್ಟ್.11ರ ರಾತ್ರಿ ನಡೆದ ಹಿಂಸಾಚಾರದಲ್ಲಿ ಮುನೇಗೌಡರ ಮನೆಗೂ ಕೂಡಾ ಹಾನಿಯಾಗಿತ್ತು. ಈ ಹಿನ್ನೆಲೆ ಬಿಜೆಪಿ ನಿಯೋಗವು ಭೇಟಿ ನೀಡಿ ಪರಿಶೀಲಿಸಿತು.
ಸುಟ್ಟಿರುವುದು ನಮ್ಮ ಮನೆ ಎಂದ ಶಾಸಕರು:
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಿಗೆ ಶಾಸಕ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ ನಡೆಸಿದ ಪ್ರಕರಣವೇ ರಾಜಕೀಯ ಕೆಸರೆರಚಾಟಕ್ಕೆ ದಾರಿ ಮಾಡಿಕೊಟ್ಟಿದೆ. ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಬೊಟ್ಟು ಮಾಡುತ್ತಿದ್ದರೆ, ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಈ ಹಿನ್ನೆಲೆ ಪ್ರತಿಕ್ರಿಯೆ ನೀಡಿರುವ ಶ್ರೀನಿವಾಸಮೂರ್ತಿ, "ಸುಟ್ಟಿರುವುದು ನಮ್ಮ ಮನೆ, ಇದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ" ಎಂದು ಹೇಳಿದರು.
ಕೆ.ಜಿ.ಹಳ್ಳಿ ಡಿ.ಜೆ.ಹಳ್ಳಿ ಗಲಾಟೆ ಹಿಂದಿನ ಕಾರಣ?
ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸೋದರಳಿಯ ನವೀನ್, ಒಂದು ಸಮುದಾಯದ ವಿರುದ್ಧ ಪೋಸ್ಟ್ ಹಾಕಿದ್ದಾರೆ ಎಂಬ ಆರೋಪವಿದೆ. ಈ ಹಿನ್ನೆಲೆ ಮೊದಲಿಗೆ ಕಾವಲ್ ಬೈರಸಂದ್ರದಲ್ಲಿರುವ ಶಾಸಕರ ನಿವಾಸದ ಎದುರು ನೂರಾರು ಮಂದಿ ಉದ್ರಿಕ್ತರು ನೆರೆದು ಗಲಾಟೆ ಶುರು ಮಾಡಿದರು, ನೋಡನೋಡುತ್ತಿದ್ದಂತೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಶಾಸಕರ ಮನೆ ಗಾಜುಗಳಿಗೆ ಕಲ್ಲುತೂರಿದ ಉದ್ರಿಕ್ತರು ಮನೆ ಎದುರಿಗಿದ್ದ ವಾಹನಗಳನ್ನು ಪುಡಿಗಟ್ಟಿದರು. ದುಷ್ಕರ್ಮಿಗಳು ನಡೆಸಿದ ದುಷ್ಕೃತ್ಯಕ್ಕೆ ಶಾಸಕರ ನೆಲಮಹಡಿಯು ಸಂಪೂರ್ಣ ಸುಟ್ಟು ಭಸ್ಮವಾಗಿದೆ.












Click it and Unblock the Notifications