ನಿರಂತರ ಮಳೆ; ಬೆಂಗಳೂರಿನಲ್ಲಿ ತರಕಾರಿಗಳ ಬೆಲೆ ದಿಢೀರ್ ಏರಿಕೆ
ಬೆಂಗಳೂರು, ಅಕ್ಟೋಬರ್ 11: ಬೆಂಗಳೂರು ನಗರ ಪ್ರದೇಶದಲ್ಲಿ ಕಳೆದ ಆರೇಳು ದಿನಗಳಿಂದ ಅಧಿಕ ಮಳೆಯಾಗುತ್ತಿದ್ದು, ನಗರಕ್ಕೆ ತರಕಾರಿ ಸಾಗಣೆ, ಪೂರೈಕೆ ಕೊರತೆಯಿಂದಾಗಿ ತರಕಾರಿಗಳ ಬೆಲೆ ಗಗನಮುಖಿಯಾಗುತ್ತಿದೆ. ಮಹಾನವಮಿ, ವಿಜಯದಶಮಿ ಹಬ್ಬ ಸಮೀಪಿಸುತ್ತಿರುವ ಕಾರಣ ತರಕಾರಿ ಬೆಲೆ ಇನ್ನಷ್ಟು ಏರಿಕೆಯಾಗುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ.
ಕಳೆದ ಎರಡು ವಾರಗಳಿಂದ ಟೊಮೆಟೊ ಹಾಗೂ ಈರುಳ್ಳಿ ಬೆಲೆ ಏಕಾಏಕಿ ಏರಿಕೆಯಾಗಿದೆ. ಹಲವು ಕಡೆಗಳಲ್ಲಿ ಮಳೆಯಿಂದಾಗಿ ಟೊಮೆಟೊ ಹಾಗೂ ಈರುಳ್ಳಿ ಬೆಳೆ ನಾಶವಾಗಿರುವ ಕಾರಣ ಪೂರೈಕೆಯಲ್ಲಿಯೂ ವ್ಯತ್ಯಾಸವಾಗಿ ಬೆಲೆ ಏರಿಕೆಯಾಗಲು ಕಾರಣವಾಗಿದೆ. ಈರುಳ್ಳಿ 50 ಕೆ.ಜಿಗೆ 600 ರೂ ಇಂದ 1200 ರೂವರೆಗೂ ಇದ್ದ ಬೆಲೆ ಈಗ 800 ರೂ ಇಂದ 1500 ರೂಗೆ ಮುಟ್ಟಿದೆ.
ಎರಡು ವಾರಗಳಿಂದೀಚೆ ಟೊಮೆಟೊ ಬೆಲೆ ಕೂಡ ದಿಢೀರನೆ ಏರಿಕೆ ಕಂಡಿದ್ದು, ಕೆ.ಜಿ.ಗೆ 20ರೂ ಇದ್ದ ಟೊಮೆಟೊ ಬೆಲೆ ಕೆ.ಜಿ.ಗೆ 80ರೂ ಆಗಿದೆ. ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿಯೇ ಕೆ.ಜಿ.ಗೆ 80 ರೂಗೆ ಮಾರಾಟವಾಗುತ್ತಿದೆ. ದೀಪಾವಳಿ ಹೊತ್ತಿಗೆ ಕೆ.ಜಿ.ಗೆ 100 ರೂ ತಲುಪುವ ಸಾಧ್ಯತೆಗಳಿವೆ.

'ನಿರಂತರ ಮಳೆ ಹಾಗೂ ಮಳೆಯಿಂದ ಉಂಟಾಗುವ ರೋಗಗಳಿಂದ ಈರುಳ್ಳಿ ಬೆಳೆಗೆ ಸಾಕಷ್ಟು ಹಾನಿಯಾಗಿದೆ. ಹೀಗಾಗಿ ಈರುಳ್ಳಿ ಸಾಗಣೆಯೂ ತಗ್ಗಿದೆ. ನಮಗೆ 50 ಸಾವಿರ ಈರುಳ್ಳಿ ಚೀಲ ಬಂದರೆ, ಅದರಲ್ಲಿ 10 ಸಾವಿರ ಚೀಲ ಮಾತ್ರ ಗುಣಮಟ್ಟದ್ದಾಗಿರುತ್ತದೆ. ಈರುಳ್ಳಿಯ ಗಾತ್ರ ಹಾಗೂ ಗುಣಮಟ್ಟದ ಆಧಾರದ ಮೇಲೆ ಬೆಲೆಯೂ ಹೆಚ್ಚಿರುತ್ತದೆ' ಎಂದು ಯಶವಂತಪುರದ ಈರುಳ್ಳಿ ಹಾಗೂ ಆಲೂಗಡ್ಡೆ ವರ್ತಕರ ಸಂಘದ ಸಿ ಉದಯ ಶಂಕರ್ 'ಡೆಕ್ಕನ್ ಹೆರಾಲ್ಡ್'ಗೆ ಮಾಹಿತಿ ನೀಡಿದ್ದಾರೆ.
ದಸರಾ ಹಬ್ಬದ ನಂತರ ಬೆಲೆ ಇಳಿಕೆಯಾಗಬಹುದು ಎಂದು ಅಂದಾಜಿಸಿದ್ದಾರೆ.
ಬೆಂಗಳೂರು ನಗರಕ್ಕೆ ಬಹುಪಾಲು ತರಕಾರಿಗಳು ಬೆಂಗಳೂರು ಹೊರವಲಯದಲ್ಲಿರುವ, ಹೊಸಕೋಟೆ, ಮಾಲೂರು, ಕೋಲಾರ, ಸಿದ್ಲಘಟ್ಟ ಹಾಗೂ ಆನೇಕಲ್‌ನಿಂದ ಬರುತ್ತವೆ. ಆದರೆ ಎಲ್ಲೆಡೆಯಿಂದಲೂ ಸಾಗಣೆ ತಗ್ಗಿದೆ. ಇದೀಗ ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿ ಎಲ್ಲಾ ತರಕಾರಿಗಳ ಬೆಲೆ 50%ಗೆ ಏರಿಕೆಯಾಗಿದೆ ಎಂದು ತರಕಾರಿ ವ್ಯಾಪಾರಿಗಳು ಹೇಳುತ್ತಿದ್ದಾರೆ.
'ಭಾರೀ ಮಳೆಯಿಂದಾಗಿ ಹೂವುಗಳ ಸಾಗಣೆಯೂ ಕಡಿಮೆಯಾಗಿದೆ. ಸೂರ್ಯನ ಕಿರಣಗಳಿಲ್ಲದೇ ಹೂವುಗಳು ಅರಳಲು ಸಾಧ್ಯವಾಗುತ್ತಿಲ್ಲ. ಹೂವುಗಳು ಸರಿಯಾಗಿ ಬಿಡುತ್ತಿಲ್ಲ. ಹೂವು, ತರಕಾರಿಗಳ ಸಾಗಣೆ ಕಡಿಮೆಯಾಗಿದೆ' ಎಂದು ವರ್ತಕರೊಬ್ಬರು ವಿವರಣೆ ನೀಡುತ್ತಾರೆ.

ಆದರೆ ಆನ್‌ಲೈನ್‌ನಲ್ಲಿ ವಹಿವಾಟು ತರಕಾರಿ ಖರೀದಿಗೆ ಗ್ರಾಹಕರಿಗೆ ಪ್ರಯೋಜನ ತಂದುಕೊಟ್ಟಿದೆ ಎನ್ನಲಾಗಿದೆ. ಖಾಸಗಿ ಸಂಸ್ಥೆಗಳು ತರಕಾರಿಗಳನ್ನು ಕಡಿಮೆ ಬೆಲೆಗೆ ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿವೆ. ಖಾಸಗಿ ಮಾರಾಟ ಸಂಸ್ಥೆಗಳು ತರಕಾರಿ ಕೊಂಡುಕೊಳ್ಳುವ ಬೆಲೆಯೂ ಕಡಿಮೆಯಿರುವುದರಿಂದ ಗ್ರಾಹಕರಿಗೆ ಕಡಿಮೆ ಬೆಲೆಗೆ ನೀಡಲು ಸಾಧ್ಯವಾಗಿದೆ ಎಂದು ಅಂದಾಜಿಸಲಾಗಿದೆ.
ನಿರಂತರ ಮಳೆಯಿಂದಾಗಿ ಎಲ್ಲಾ ತರಕಾರಿಗಳ ಬೆಲೆಯೂ ಏರಿಕೆಯಾಗಿದೆ. ಸೊಪ್ಪುಗಳ ಬೆಲೆಯೂ ಏರಿಕೆಯಾಗಿದೆ. ಮೆಂತ್ಯೆ ಸೊಪ್ಪಿಗೆ ಕೆ.ಜಿ.ಗೆ 135 ರೂ ಆಗಿದೆ. ಪಾಲಾಕ್ ಸೊಪ್ಪಿಗೆ ಕೆ.ಜಿ.ಗೆ 58 ರೂ ಇದ್ದರೆ, ಕೊತ್ತಂಬರಿ ಬೆಲೆ 65 ರೂ ಆಗಿದೆ.
ಸದ್ಯ ಟೊಮೆಟೊ ಬೆಲೆ ಹೋಲ್‌ಸೇಲ್, ಕೆ.ಜಿ.ಗೆ 60-80ರೂಗೆ ಮಾರಾಟವಾಗುತ್ತಿದೆ. ಈರುಳ್ಳಿ ಬೆಲೆ 16-30 ರೂಗೆ ಮಾರಾಟವಾಗುತ್ತಿದೆ. ಬೀನ್ಸ್‌ಗೆ 50-60 ರೂ ಇದ್ದು, ಕ್ಯಾರೆಟ್ 60ರೂಗೆ ಮಾರಾಟವಾಗುತ್ತಿದೆ. ಬದನೆಕಾಯಿ ಕೆ.ಜಿ.ಗೆ 20-25 ರೂ ಇದೆ.
ಒಟ್ಟಿನಲ್ಲಿ ಹಬ್ಬದ ಸಮಯಕ್ಕೆ ಸಾಮಾನ್ಯ ಜನರಿಗೆ ತರಕಾರಿ, ಹೂವು, ಹಣ್ಣುಗಳ ಬೆಲೆ ಏರಿಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಸರಿಯಾದ ಪೂರೈಕೆ ಇಲ್ಲದ ಕಾರಣ, ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿ ದಿಢೀರ್ ಬೆಲೆ ವ್ಯತ್ಯಾಸ ಕಂಡುಬಂದಿದೆ. ಆದರೆ ಇವೆಲ್ಲವೂ ಗ್ರಾಹಕರಿಗೆ ಮಾತ್ರ ಹೊರೆಯಾಗಿ ಪರಿಣಮಿಸಿದೆ.












Click it and Unblock the Notifications