ಜ.11ರಿಂದ ಈ ರೈಲುಗಳ ಸಂಚಾರ ಪುನಃ ಆರಂಭ
ಬೆಂಗಳೂರು, ಜನವರಿ 06; ಜೋಡಿ ಹಳಿ ಕಾಮಗಾರಿಗಾಗಿ ಸ್ಥಗಿತಗೊಂಡಿದ್ದ ಎರಡು ರೈಲುಗಳ ಸಂಚಾರ ಪುನಃ ಆರಂಭವಾಗುವ ದಿನಾಂಕ ಘೋಷಣೆಯಾಗಿದೆ. ನೈಋತ್ಯ ರೈಲ್ವೆ ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.
ಕೆಎಸ್ಆರ್ ಬೆಂಗಳೂರು- ಧಾರವಾಡ ಸೂಪರ್ ಫಾಸ್ಟ್ ಇಂಟರ್ ಸಿಟಿ ರೈಲು, ಧಾರವಾಡ-ಕೆಎಸ್‌ಆರ್ ಬೆಂಗಳೂರು ಸೂಪರ್ ಫಾಸ್ಟ್ ಇಂಟರ್ ಸಿಟಿ ರೈಲು ಮತ್ತು ಹೊಸಪೇಟೆ-ಕೆಎಸ್ಆರ್ ಬೆಂಗಳೂರು ವಿಶೇಷ ಪ್ಯಾಸೆಂಜರ್ ರೈಲು ಸಂಚಾರ ಆರಂಭವಾಗಲಿದೆ.
ವಾಸ್ಕೋಡಗಾಮ-ಯಶವಂತಪುರ ಎಕ್ಸ್‌ಪ್ರೆಸ್, ಮೈಸೂರು-ಬೆಳಗಾವಿ ಎಕ್ಸ್‌ಪ್ರೆಸ್ ರೈಲು ಸಂಚಾರ ಪುನಃ ಆರಂಭವಾಗುತ್ತಿದೆ. ಬೆಳಗಾವಿ-ಶೇಡಬಾಳ ನಡುವೆ ಸಂಚಾರ ನಡೆಸುವ ವಿಶೇಷ ರೈಲಿನ ಸಂಚಾರ ಜನವರಿ 7ರಿಂದ ರದ್ದಾಗಲಿದೆ.

ಯಾವ-ಯಾವ ರೈಲುಗಳು
* ಕೆಎಸ್ಆರ್ ಬೆಂಗಳೂರು-ಧಾರವಾಡ ಸೂಪರ್ ಫಾಸ್ಟ್ ಇಂಟರ್‌ಸಿಟಿ ರೈಲು ಜನವರಿ 11, 17, ಮತ್ತು 22ರಂದು ಆರಂಭವಾಗಲಿದೆ. ಧಾರವಾಡದಿಂದ ಇದೇ ರೈಲಿನ ಸಂಚಾರ ಜನವರಿ 9, 12, 18 ಹಾಗೂ 23ರಂದು ಆರಂಭವಾಗಲಿದೆ.
* ಹೊಸಪೇಟೆ-ಕೆಎಸ್ಆರ್ ಬೆಂಗಳೂರು ನಡುವೆ ಸಂಚಾರ ನಡೆಸುವ ವಿಶೇಷ ಪ್ಯಾಸೆಂಜರ್ ರೈಲು ಜನವರಿ 11ರಂದು ಬೆಂಗಳೂರಿನಿಂದ ಸಂಚಾರವನ್ನು ಆರಂಭಿಸಲಿದೆ.
* ವಾಸ್ಕೋಡಗಾಮ-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಜನವರಿ 7, 10, 16 ಮತ್ತು 21ರಂದು ಮೈಸೂರಿನಿಂದ ಪುನಃ ಸಂಚಾರ ಆರಂಭಿಸಲಿದೆ.
* ಜನವರಿ 8, 11, 17 ಮತ್ತು 22ರಂದು ಮೈಸೂರು-ಬೆಳಗಾವಿ ಎಕ್ಸ್‌ಪ್ರೆಸ್ ರೈಲು ಮೈಸೂರಿನಿಂದ ಮತ್ತೆ ಸಂಚಾರ ಆರಂಭಿಸಲಿದೆ.
ಪ್ರಯಾಣಿಕರಿಗೆ ಮಾರ್ಗಸೂಚಿ; ಕರ್ನಾಟಕ ಸರ್ಕಾರ ಗೋವಾ ರಾಜ್ಯದಿಂದ ಕರ್ನಾಟಕಕ್ಕೆ ಆಗಮಿಸುವ ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿ ಹಾಜರುಪಡಿಸಬೇಕು ಎಂದು ಮಾರ್ಗಸೂಚಿ ಹೊರಡಿಸಿದೆ. ರೈಲು ಪ್ರಯಾಣಿಕರಿಗೂ ಇದು ಅನ್ವಯವಾಗಲಿದೆ.
ನೈಋತ್ಯ ರೈಲ್ವೆ ಈ ಕುರಿತು ಮಾಹಿತಿ ನೀಡಿದೆ. ಗೋವಾದಿಂದ ಕರ್ನಾಟಕಕ್ಕೆ ರೈಲಿನಲ್ಲಿ ಆಗಮಿಸುವ ಪ್ರಯಾಣಿಕರು 72 ಗಂಟೆಗಳ ಮೊದಲ ಕೋವಿಡ್ ಆರ್‌ಟಿಪಿಸಿಆರ್ ವರದಿಯನ್ನು ಕಡ್ಡಾಯವಾಗಿ ಹೊಂದಿರಬೇಕು.
ವಿದ್ಯಾರ್ಥಿಗಳು ಮತ್ತು ಉಭಯ ರಾಜ್ಯಗಳ ನಡುವೆ ಪ್ರತಿದಿನ ಸಂಚಾರ ನಡೆಸುವ ಜನರು 15 ದಿನಗಳಿಗೆ ಒಮ್ಮೆ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಂಡು ವರದಿಯನ್ನು ಇಟ್ಟುಕೊಳ್ಳಬೇಕು.












Click it and Unblock the Notifications