ಅನಂತಮೂರ್ತಿಯನ್ನು ಬಸವಣ್ಣಗೆ ಹೋಲಿಸಬಹುದು!

ಪ್ರೊ ಅನಂತಮೂರ್ತಿ ಅವರು ಮೇಲ್ಜಾತಿಯಿಂದ ಬಂದವರಾದರೂ ತಮ್ಮದೇ ಜಾತಿಗಳ ಒಳಗಿರುವ ಕಂದಾಚಾರ ಹಾಗೂ ಸಂಪ್ರದಾಯಗಳನ್ನು ಪ್ರಶ್ನಿಸಿದವರು. ಬಸವಣ್ಣನವರೂ ಹಾಗೆಯೇ ಮಾಡಿದರು ಎಂದು ಕೆ ಮರುಳಸಿದ್ದಪ್ಪ ಅವರು ಬಣ್ಣಿಸಿದ್ದಾರೆ.
ಸುಚಿತ್ರ ಸಿಸಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಏರ್ಪಡಿಸಲಾಗಿದ್ದ 'ಭಾರತೀಯ ಸಾಹಿತಿಗಳ ಸಾಕ್ಷ್ಯಚಿತ್ರ ಪ್ರದರ್ಶನ' ಕಾರ್ಯಕ್ರಮದಲ್ಲಿ ಪ್ರದರ್ಶನಗೊಂಡ ಯುಆರ್ ಅನಂತಮೂರ್ತಿ, ಪುತಿ ನರಸಿಂಹಾಚಾರ್ ಹಾಗೂ ಖುಶ್ವಂತ್ ಸಿಂಗ್ ಸಾಕ್ಷ್ಯಚಿತ್ರಗಳ ಕುರಿತು ಮಾತನಾಡುತ್ತಾ ಮರುಳಸಿದ್ದಪ್ಪ ಅವರು ಹೀಗೆ ಹೇಳಿದ್ದಾರೆ.
'ಸಣ್ಣ ಸಮುದಾಯದ ಒಳಗೆ ಇದ್ದುಕೊಂಡು ಬಹುಸಂಖ್ಯಾತ ಸಮುದಾಯಗಳ ಕುರಿತು ಕಾಳಜಿ ವ್ಯಕ್ತಪಡಿಸಿದ ಅನಂತಮೂರ್ತಿ ಅವರಿಗೆ ಇತ್ತೀಚೆಗೆ ಬಸವ ಪ್ರಶಸ್ತಿ ಬಂದಿರುವುದು ಔಚಿತ್ಯಪೂರ್ಣವಾಗಿದ್ದು, ವೈಯಕ್ತಿಕವಾಗಿ ನನಗೆ ಬಹಳ ಸಂತೋಷ ನೀಡಿದೆ' ಎಂದೂ ಮರುಳಸಿದ್ದಪ್ಪ ಹೇಳಿದರು.
ಪಾರದರ್ಶಕ ವ್ಯಕ್ತಿತ್ವದ ಅನಂತಮೂರ್ತಿ ಅವರದ್ದು ಅನ್ನಿಸಿದ್ದನ್ನು ಹೇಳುವ ದಿಟ್ಟ ಮನಸ್ಸು . ಇಂತಹ ಹೇಳಿಕೆಗಳಿಂದ ಅವರು ತೊಂದರೆ ಅನುಭವಿಸುವ ಸಂಭವವಿದ್ದರೂ ಅವರು ತಮ್ಮ ಹೇಳಿಕೆಗಳಿಂದ, ಚಿಂತನೆಗಳಿಂದ ಹಿಂದೆ ಸರಿಯಲಿಲ್ಲ. ಹಾಗಾಗಿಯೇ ಅವರ ಮಾತುಗಳು ಹಲವು ಬಾರಿ ವಿವಾದಕ್ಕೆ ಕಾರಣವಾಗಿವೆ. ಅವರೊಬ್ಬ ಭಾರತೀಯ ಸಾಹಿತ್ಯದ ಶ್ರೇಷ್ಠ ವ್ಯಕ್ತಿ ಹಾಗೂ ಶ್ರೇಷ್ಠ ಲೇಖಕ ಎಂದು ಮರುಳಸಿದ್ದಪ್ಪ ಶ್ಲಾಘಿಸಿದರು.
ಪುತಿನ ಸಹ ಜಾತ್ಯತೀತ ಮನೋಭಾವದ ವ್ಯಕ್ತಿ:
'ಪುತಿ ನರಸಿಂಹಾಚಾರ್ ಅವರು ತಾವು ನಂಬಿದ ದೇವರ ಜತೆಗಿದ್ದರೂ ಜಾತ್ಯತೀತ ಮನೋಭಾವದ ವ್ಯಕ್ತಿಯಾಗಿದ್ದರು. ಬಾಬರಿ ಮಸೀದಿ ಧ್ವಂಸದ ಸಂದರ್ಭದಲ್ಲಿ ಕಬ್ಬನ್ ಪಾರ್ಕಿನಲ್ಲಿ ನಮ್ಮಿಂದಿಗೆ ಪಾಲ್ಗೊಂಡು ಮಸೀದಿ ಧ್ವಂಸವನ್ನು ವಿರೋಧಿಸಿದ್ದರು' ಎಂದು ಮರುಳಸಿದ್ದಪ್ಪ ನೆನಪಿಸಿಕೊಂಡರು.












Click it and Unblock the Notifications