'ವಾಲ್ಮೀಕಿ' ಪುಸ್ತಕ ಮಾರಾಟ, ಸಪ್ನಾ ಮಳಿಗೆ ಮೇಲೆ ರೈಡ್
ಬೆಂಗಳೂರು, ನ.7: ಖ್ಯಾತ ವಿದ್ವಾಂಸ ಕೆ.ಎಸ್ ನಾರಾಯಣಾಚಾರ್ಯ ಅವರ "ವಾಲ್ಮೀಕಿ ಯಾರು?" ಎಂಬ ನಿಷೇಧಿತ ಕೃತಿ ಮಾರಾಟ ಮಾಡುತ್ತಿದ್ದ ಸಪ್ನಾ ಪುಸ್ತಕ ಮಳಿಗೆ ಮೇಲೆ ಉಪ್ಪಾರಪೇಟೆ ಪೊಲೀಸರು ದಾಳಿ ನಡೆಸಿ, ಪುಸ್ತಕಗಳನ್ನು ಜಪ್ತಿ ಮಾಡಿದ್ದಾರೆ.
ನಿಷೇಧಿತ ಕೃತಿಯನ್ನು ಮಾರಾಟ ಮಾಡಿದ ಆರೋಪದ ಮೇಲೆ ಗಾಂಧಿನಗರದ ಸಪ್ನಾ ಬುಕ್ ಹೌಸ್ ಮಾಲೀಕರ ಮೇಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಸಪ್ನಾ ಮಳಿಗೆಯ ಇನ್ನಿತರ ಕೇಂದ್ರಗಳ ಮೇಲೂ ದಾಳಿ ನಡೆಯುವ ಸಂಭವವಿದೆ. [ವಾಲ್ಮೀಕಿ ಯಾರು? ಪುಸ್ತಕದ ವಿರುದ್ಧ ಭುಗಿಲೆದ್ದ ಆಕ್ರೋಶ]
ತುಮಕೂರಿನ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿರುವ ಡಾ. ಸುರೇಶ್ ಎಂಬುವರು ಸಪ್ನಾ ಬುಕ್ ಹೌಸ್ ವಿರುದ್ಧ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಉಪ್ಪಾರಪೇಟೆ ಪೊಲೀಸರು ಗುರುವಾರ ದಾಳಿ ನಡೆಸಿ 45 ಪುಸ್ತಕಗಳನ್ನು ಜಪ್ತಿ ಮಾಡಿದ್ದಾರೆ. ಈ ಬಗ್ಗೆ ವಿಚಾರಣೆ ಮುಂದುವರೆದಿದೆ ಎಂದು ಪಶ್ಚಿಮವಲಯ ಡಿಸಿಪಿ ಲಬೂ ರಾಮ್ ಹೇಳಿದ್ದಾರೆ.ಸಪ್ನಾ ಬುಕ್ ಹೌಸ್ ವಿರುದ್ಧ ಐಪಿಸಿ ಸೆಕ್ಷನ್ 135(ಎ) ಹಾಗೂ 295 (ಎ) ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. [ವಿವಾದಿತ ವಾಲ್ಮೀಕಿ ಯಾರು? ಪುಸ್ತಕ ಮುಟ್ಟುಗೋಲು]

ಸಪ್ನ ಬುಕ್ ಹೌಸ್ ಪ್ರತಿಕ್ರಿಯೆ: ಸಪ್ನ ಬುಕ್ ಹೌಸ್ ಮಾಲೀಕರಾದ ನಿತಿನ್ ಶಾ ಮಾತನಾಡಿ, ನಾವು ಈ ಪುಸ್ತಕದ ಪ್ರಕಾಶಕರಲ್ಲ. ಪುಸ್ತಕದ ಮಾರಾಟಗಾರರಷ್ಟೇ. ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನದಿಂದ ಪುಸ್ತಕ ಹೊರ ಬಂದಿದೆ. ನಾವು ರೀಟೈಲ್ ಮಾರಾಟಗಾರರಾಗಿದ್ದು, ರಾಜ್ಯ ಸರ್ಕಾರದಿಂದಾಗಲಿ, ಪುಸ್ತಕ ಪ್ರಕಾಶಕರಿಂದಾಗಲಿ ವಾಲ್ಮೀಕಿ ಯಾರು? ಕೃತಿ ನಿಷೇಧಗೊಂಡಿರುವ ಬಗ್ಗೆ ಸುತ್ತೋಲೆ ಬಂದಿಲ್ಲ. ಪುಸ್ತಕ ನಿಷೇಧವಾಗಿರುವುದಕ್ಕೆ ಸರಿಯಾದ ದಾಖಲೆಗಳೇ ಇಲ್ಲದಿರುವಾಗ ನಾವು ಮಾಡಿದ ತಪ್ಪೇನು? ನಿಷೇಧವಾದ ಮೇಲೆ ಪ್ರಕಾಶಕರು ನಮಗೆ ಹೇಗೆ ಮಾರಾಟ ಮಾಡಲು ಸಾಧ್ಯ? ನಾವು ಕಾನೂನಿನ ಮೂಲಕ ಹೋರಾಟಕ್ಕೆ ಮುಂದಾಗಿದ್ದೇವೆ ಎಂದಿದ್ದಾರೆ.[ಕೆಎಸ್ಸೆನ್ ಆಚಾರ್ಯರ ಕೃತಿಗೇಕೆ ನಿಷೇಧ?]
ನಿಷೇಧ ಏಕೆ?: ಖ್ಯಾತ ವಿದ್ವಾಂಸ ಕೆ.ಎಸ್ ನಾರಾಯಣಾಚಾರ್ಯ ಅವರ "ವಾಲ್ಮೀಕಿ ಯಾರು?" ಎಂಬ ಕೃತಿಯನ್ನು ಕರ್ನಾಟಕ ಸರ್ಕಾರ ನಿಷೇಧಿಸಲು ಮುಂದಾಗಿದೆ. ಈ ಕೃತಿಯಲ್ಲಿ ನಾರಾಯಣಾಚಾರ್ಯ ಅವರು ಬೇಡ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಆಧಾರವಿಲ್ಲದೆ ವಾಲ್ಮೀಕಿಯನ್ನು ಬ್ರಾಹ್ಮಣ ಎಂದು ಕರೆಯಲಾಗಿದೆ. ವಾಲ್ಮೀಕಿ ಅವರ ಕುಲಕ್ಕೂ ಅವಮಾನ ಮಾಡಲಾಗಿದೆ. ಸರ್ಕಾರ ನಡೆಸುವ ವಾಲ್ಮೀಕಿ ಜಯಂತಿಯನ್ನು ಪ್ರಶ್ನಿಸಿದ್ದಾರೆ ಎಂಬೆಲ್ಲಾ ಕಾರಣವನ್ನು ನೀಡಲಾಗಿದೆ












Click it and Unblock the Notifications