ಮಾಜಿ ಸಿಎಂ ಸಿದ್ದರಾಮಯ್ಯಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿರುಗೇಟು
ಬೆಂಗಳೂರು, ಜೂ. 17: ಒಂದೆಡೆ ದೇಶದ ಗಡಿಯಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ. ಮತ್ತೊಂದೆಡೆ ದೇಶದ ಒಳಗೆ ಭಾರತ-ಚೀನಾ ವಿಚಾರವಾಗಿ ಆರೋಪ-ಪ್ರತ್ಯಾರೋಪಗಳು ಶುರುವಾಗಿವೆ. ಗಡಿ ಘರ್ಷಣೆಯನ್ನು ಇಟ್ಟುಕೊಂಡು ಆರೋಪ ಪ್ರತ್ಯಾರೋಪಗಳನ್ನು ರಾಜಕೀಯ ನಾಯಕರು ಮಾಡುತ್ತಿದ್ದಾರೆ.
ದೇಶದ ಗಡಿಯೊಳಗೆ 7 ವಾರಗಳ ಹಿಂದೆಯೆ ಚೀನಾ ಸೈನಿಕರು ಪ್ರವೇಶ ಮಾಡಿದ್ದಾರೆಂದು ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದಾರೆ. ಚೀನಾ ದೇಶ ಗಡಿ ತಂಟೆ ಶುರು ಹಚ್ಚಿ ಏಳು ವಾರಗಳಾಗುತ್ತ ಬಂತು. ಅಲ್ಲಿನ ಬೆಳವಣಿಗೆಗಳ ಬಗ್ಗೆ ನಿಜಸಂಗತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಅಧಿಕೃತ ಹೇಳಿಕೆಯನ್ನು ನೀಡಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಟ್ವೀಟ್‌ಗೆ ಟ್ವೀಟ್ ಮೂಲಕವೇ ಪ್ರತ್ಯುತ್ತರ ಕೊಟ್ಟಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು, ಯಾರ ಅಧಿಕಾರದಲ್ಲಿ ದೇಶ ಭೂಮಿಯನ್ನು ಕಳೆದುಕೊಂಡಿದೆ ಎಂಬುದು ಇತಿಹಾಸದಲ್ಲಿ ದಾಖಲಾಗಿದೆ. ಅದನ್ನು ನೀವು (ಸಿದ್ದರಾಮಯ್ಯ) ಮೊದಲು ಇತಿಹಾಸ ಅಧ್ಯಯನ ಮಾಡಿ. ಹಿಂದೆ ಕಾಂಗ್ರೆಸ್ ಆಳ್ವಿಕೆಯಲ್ಲಿ ಅಜ್ಞಾನ ಮತ್ತು ಮೂರ್ಖತನದಿಂದಾಗಿ ಭಾರತವು ಚೀನಾಕ್ಕೆ ತನ್ನ ಭೂಮಿಯನ್ನು ಕಳೆದುಕೊಂಡಿದೆ ಎಂದು ಸಿದ್ದರಾಮಯ್ಯ ಅವರಿಗೆ ಪ್ರತ್ಯುತ್ತರ ಕೊಟ್ಟಿದ್ದಾರೆ.












Click it and Unblock the Notifications