ಉದ್ಯಾನ ನಗರಿಗೆ ಸೋಮವಾರ ರಾತ್ರಿ ವರುಣನ ಸಿಂಚನ
ಇದ್ದಕ್ಕಿದ್ದಂತೆ ಬಂದ ಮಳೆಯಿಂದಾಗಿ ತೊಂದರೆಗೊಳಗಾದ ವಾಹನ ಸವಾರರು ತೊಂದರೆಗೊಳಗಾದರು. ಆದರೆ, ಮಳೆ ಇಷ್ಟಪಡುವವರಿಗೆ ಇದು ಖುಷಿ ಕೊಟ್ಟಿತು.
ಬೆಂಗಳೂರು, ಮಾರ್ಚ್ 6: ಶಿವರಾತ್ರಿಯ ನಂತರ ಶಿವ ಶಿವ ಎನ್ನುವಷ್ಟು ಬಿಸಿಲಿನಿಂದ ತತ್ತರಿಸಿದ್ದ ಉದ್ಯಾನ ನಗರಿಯ ಜನತೆಗೆ ಸೋಮವಾರ (ಮಾರ್ಚ್ 6) ಸಂಜೆ ವರುಣ ತಂಪೆರದ.
ಸೋಮವಾರ ಬೆಳಗ್ಗೆ ಕೊಂಚ ಮೋಡ ಕವಿದ ವಾತಾವರಣವಿತ್ತಾದರೂ ಆನಂತರ ಬಿಸಿಲು ಎಂದಿನಂತೆ ಪ್ರಕಾಶಮಾನವಾಗಿ ಆವರಿಸಿದ್ದರಿಂದಾಗಿ ಹೊತ್ತು ಮುಳುಗುವ ಹೊತ್ತಿಗೆ ಮಳೆ ಬರಬಹುದೆಂದು ಬಹುತೇಕರು ನಿರೀಕ್ಷಿಸಿರಲಿಲ್ಲ.

ಆದರೆ, ಸಂಜೆ ಹೊತ್ತಿಗೆ ಕೊಂಚ ಮೋಡ ಆವರಿಸಿದಂತಾಗಿ ವಿಜಯ ನಗರ, ದೀಪಾಂಜಲಿ ನಗರ, ಮಾಗಡಿ ರಸ್ತೆ, ಮೈಸೂರು ರಸ್ತೆವರೆಗಿನ ಕೆಲ ಭಾಗಗಳಲ್ಲಿ ಕೊಂಚ ಮಳೆ ಸುಯ್ಯಹತ್ತಿತ್ತು. ಆದರೆ, ನಿಮಿಷಗಳು ಕಳೆದಂತೆ ಮಳೆ ರಭಸವಾಗಿ ರಸ್ತೆಯಲ್ಲಿ ನೀರು ನಿಲ್ಲುವಷ್ಟು ಮಳೆ ಬಂದಿತು.
ಆನಂತರ, ಚದುರಿದ ಮೇಘಗಳು ನಿಧಾನವಾಗಿ ಚಾಮರಾಜ ಪೇಟೆ, ಗಾಂಧೀ ಬಜಾರು, ಜಯನಗರ, ಬಸವನ ಗುಡಿಗೂ ತಮ್ಮಲ್ಲಿನ ನೀರನ್ನು ಚೆಲ್ಲಿ ಜನರನ್ನು ಸಂತುಷ್ಟಗೊಳಿಸಿದವು.
ಬಿಸಿಲಿನಿಂದ ಕಂಗೆಟ್ಟಿದ್ದವರಿಗೆ ಸೋಮವಾರ ಸಂಜೆ ಆವರಿಸಿದ ಮಳೆ ಕೊಂಚ ಖುಷಿಕೊಟ್ಟಿತಾದರೂ ಅಚಾನಕ್ ಆಗಿ ಬಂದ ಈ ಮಳೆಯಿಂದಾಗಿ ಸಂಜೆ, ರಾತ್ರಿ ತಮ್ಮ ಕರ್ತವ್ಯ ಮುಗಿಸಿ ಮನೆಗೆ ತೆರಳಬೇಕಿದ್ದ ವಾಹನ ಸವಾರರು ತೊಂದರೆಗೆ ಸಿಲುಕಿದರು.
ಮಾರ್ಗ ಮಧ್ಯದಲ್ಲೇ ಸಾಗುತ್ತಿದ್ದಾಗ ಮಳೆಗೆ ಸಿಲುಕಿದ ಹಲವಾರು ದ್ವಿಚಕ್ರ ವಾಹನ ಸವಾರರು ಆಶ್ರಯಕ್ಕಾಗಿ ಫ್ಲೈ ಓವರ್ ಗಳು ಹಾಗೂ ರಸ್ತೆ ಬದಿಯ ಕಟ್ಟಡಗಳ ಕೆಳಗೆ ಆಶ್ರಯ ಪಡೆಯಬೇಕಾಯಿತು. ಇದಲ್ಲದೆ, ಮಳೆ ಬಂದಾಗ ಆಗುವ ಟ್ರಾಫಿಕ್ ಜಾಮ್ ಸಮಸ್ಯೆಯೂ ತಲೆದೋರಿ ಅನೇಕ ರಸ್ತೆಗಳು ವಾಹನ ದಟ್ಟಣೆಯಿಂದ ಕೂಡಿದವು.












Click it and Unblock the Notifications