ವೇಗ ತಂದ ಆಪತ್ತು: ಕಾರು ಅಪಘಾತಕ್ಕೆ ಇಬ್ಬರು ಬಲಿ
ಬೆಂಗಳೂರು ಮೇ 25 : ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಡಿವೈಡರ್ ಗೆ ಡಿಕ್ಕಿ ಹೊಡೆದು ಮಗುಚಿಬಿದ್ದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಒಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಾಗಡಿಯ ಕುಡುಲೂರು ಕ್ರಾಸ್ ಬಳಿ ನಡೆದಿದೆ.
ಕಾರಿನಲ್ಲಿದ್ದ ಬೆಂಗಳೂರಿನ ಬನಶಂಕರಿ ನಿವಾಸಿ ರತ್ನಮ್ಮ(65) ಕಾರು ಚಾಲಕ ಜಹೀರ್(56) ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ. ಕಾರಿನಲ್ಲಿದ್ದ ರತ್ನಮ್ಮಳ ಪತಿ ರಂಗಸ್ವಾಮಿ ಗಂಭೀರ ಗಾಯಗೊಂಡಿದ್ದಾರೆ.
ಶುಕ್ರವಾರ ಮಧ್ಯಾಹ್ನ 3.30ರ ಸಮಯದಲ್ಲಿ ರಾಷ್ಟ್ರೀಯ ಹೆದ್ದಾರಿ 75ರ ಕುಡುಲೂರು ಕ್ರಾಸ್ ಬಳಿ ಕೆಎಎಂಜಿ 8214 ಟಾಟಾ ಮಜ್ಝಾ ಕಾರು ಕುದೂರಿನಿಂದ ಬೆಂಗಳೂರು ಕಡೆಗೆ ಅತೀ ವೇಗವಾಗಿ ತೆರಳುವಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು 4 ಪಲ್ಟಿಯಾಗಿದೆ.

ಪರಿಣಾಮ ಚಾಲಕ ಜಹೀರ್ ತಲೆಗೆ ತೀವ್ರ ಪೆಟ್ಟು ಬಿದ್ದು ತಲೆಯ ಮೆದುಳು ಹೊರ ಬಂದಿದ್ದು ಭೀಕರವಾಗಿ ಸಾವನ್ನಪ್ಪಿದ್ದರೆ, ರತ್ನಮ್ಮ ಅವರಿಗೆ ತೀವ್ರ ಪೆಟ್ಟು ಬಿದ್ದಿದ್ದು ಅವರು ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕಾರಿನಲ್ಲಿದ್ದ ರಂಗಸ್ವಾಮಿ ಪ್ರಾಣಾಪಾಯದಿಂದ ಪಾರಾಗಿದ್ದು, ಭೀಕರ ರಸ್ತೆ ಅಪಘಾತದಿಂದ ಕೆಲವು ಘಟನೆಗಳ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಅಪಘಾತ ನಡೆದ ನಂತರ ಭಾರಿ ಮಳೆ ಬಂದಿದ್ದರಿಂದ ಕಾರ್ಯಾಚರಣೆಗೆ ಅಡ್ಡಿಯುಂಟಾಗಿತ್ತು.
ಶವಗಳನ್ನು ನೆಲಮಂಗಲದ ಸರ್ಕಾರಿ ಆಸ್ಪತ್ರೆಯಲ್ಲಿರಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳುವುದಾಗಿ ಕುದೂರು ಪಿಎಸ್ಐ ಶಂಕರ್ ನಾಯಕ್ ತಿಳಿಸಿದ್ದಾರೆ.












Click it and Unblock the Notifications