ಕ್ಯಾಬ್, ಟ್ಯಾಕ್ಸಿಗಳಲ್ಲಿ ಚೈಲ್ಡ್ ಲಾಕ್ ಇರುವಂತಿಲ್ಲ: ಕಾರಣವೇನು?
ಬೆಂಗಳೂರು, ಆಗಸ್ಟ್ 11:ಓಲಾ, ಊಬರ್‌ನಂತಹ ಅಪ್ಲಿಕೇಷನ್ ಆಧಾರಿತ ಕ್ಯಾಬ್‌ಗಳು, ಟ್ಯಾಕ್ಸಿಗಳಲ್ಲಿ ಚೈಲ್ಡ್ ಲಾಕ್ ಇರುವುದರಿಂದ ಕಾರಿನಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಲೈಂಗಿಕ ಕಿರುಕುಳ ನಡೆಸಿದ ಪ್ರಕರಣಗಳು ತಡವಾಗಿ ಬೆಳಕಿಗೆ ಬರುತ್ತಿವೆ.
ಕ್ಯಾಬ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಮೇಲಿನ ದೌರ್ಜನ್ಯ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ವಾಣಿಜ್ಯ ವಾಹನಗಳಲ್ಲಿ ನಡೆಯುವ ಅಂತಹ ಪ್ರಕರಣಗಳನ್ನು ನಿಯಂತ್ರಿಸುವ ಸಲುವಾಗಿ ಚೈಲ್ಡ್ ಲಾಕ್ ವ್ಯವಸ್ಥೆ ನಿಷ್ಕ್ರಿಯಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಆದರೆ ಆ ಕುರಿತು ರಾಜ್ಯ ಸರ್ಕಾರವೇ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಲಾಗದು, ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ಅನುಮತಿ ಪಡೆಯಬೇಕಾಗಿದೆ. ಅದಕ್ಕಾಗಿ ಸಾರಿಗೆ ಇಲಾಖೆ ಕಡತವನ್ನು ಸಿದ್ಧಪಡಿಸಿ ಈಗಾಗಲೇ ರಾಜ್ಯ ಸರ್ಕಾರಕ್ಕೆ ಕಳುಹಿಸಿದೆ.

ಸಾರಿಗೆ ಆಯುಕ್ತರು ರಾಜ್ಯ ಸರ್ಕಾರಕ್ಕೆ ಚೈಲ್ಡ್ ಸೇಫ್ಟಿ ಲಾಕ್ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸುವ ತುರ್ತು ಅಗತ್ಯದ ವಿವರವಾದ ಪತ್ರವನ್ನು ಬರೆದಿದ್ದಾರೆ. ಅದರಲ್ಲಿ ಅವರು, ಹೈಕೋರ್ಟ್‌ನಲ್ಲಿ ಈ ಸಂಬಂಧ ಸಲ್ಲಿಕೆಯಾಗಿರುವ ಸಾರ್ವಜನಿಕರ ಹಿತಾಸಕ್ತಿ ಅರ್ಜಿಯ ವಿಷಯವನ್ನೂ ಉಲ್ಲೇಖಿಸಿದ್ದಾರೆ.
ಬೆಂಗಳೂರು ಪ್ರಸೂತಿ ಮತ್ತು ಸ್ತ್ರೀರೋಗ ಸೊಸೈಟಿ ಸಲ್ಲಿಸಿದ್ದ ಸಾರ್ವಜನಿಕರ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಸರ್ಕಾರರಿ ವಕೀಲ ಎಚ್‌ಎಸ್ ಪ್ರಶಾಂತ್ ಈ ಸಂಬಂಧ ಈಗಾಗಲೇ ಸಾರಿಗೆ ಆಯುಕ್ತರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಹಾಗಾಗಿ ಒಂದು ತಿಂಗಳು ಕಾಲಾವಕಾಶ ಬೇಕು ಎಂದು ಕೋರಿದ್ದಾರೆ.
ಈಗಿನ ಕ್ಯಾಬ್‌ಗಳಲ್ಲಿರುವ ಚೈಲ್ಡ್ ಸೇಫ್ಟಿ ಲಾಕ್ ವ್ಯವಸ್ಥೆ ಜಾರಿಗೊಳಿಸಲು ಸಾರಿಗೆ ಇಲಾಖೆ ಅಥವಾ ಮೋಟಾರು ವಾಹನ ನಿರೀಕ್ಷಕರು ನೇರ ಕ್ರಮ ಕೈಗೊಳ್ಳಲಾಗುವುದು. ಕೇಂದ್ರದಿಂದ ಒಪ್ಪಿಗೆ ಪಡೆದ ನಂತರ ಟ್ಯಾಕ್ಸಿ ಮತ್ತು ಕ್ಯಾಬ್‌ಗಳ ಪರವಾನಗಿ ನವೀಕರಣ ಸಂದರ್ಭದಲ್ಲಿ ಅದನ್ನು ತೆಗೆದು ಹಾಕಬಹುದು.
ಬೆಂಗಳೂರು ನಗರದಲ್ಲಿ ಕ್ಯಾಬ್‌ಗಳಲ್ಲಿ ಸಂಚರಿಸುವ ಮಹಿಳಾ ಪ್ರಯಾಣಿಕರ ಮೇಲೆ ಹಲ್ಲೆ ಹಾಗೂ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಬಹುತೇಕ ಪ್ರಕರಣಗಳಲ್ಲಿ ಚಾಲಕರು ಚೈಲ್ಡ್ ಲಾಕ್ ವ್ಯವಸ್ಥೆ ದುರುಪಯೋಗಪಡಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅದನ್ನು ತೆಗೆದು ಹಾಕಲು ಅನುಮತಿ ಕೇಳಲಾಗುತ್ತಿದೆ.












Click it and Unblock the Notifications