ಸಿಎಂ ಸಿದ್ದು, ಮೋದಿಗೆ ಯುಆರ್ ಅನಂತಮೂರ್ತಿ ಬುದ್ಧಿವಾದ

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ರಾಜಧರ್ಮ ಗೊತ್ತಿಲ್ಲ ಎಂದು ಲೇವಡಿ ಮಾಡಿದ ಡಾ. ಯುಆರ್ ಅನಂತಮೂರ್ತಿ ಅವರು ಅದನ್ನು (ರಾಜಧರ್ಮ) ವಾಜಪೇಯಿ ಅವರೇ ಕಾರ್ಯಕ್ರಮವೊಂದರಲ್ಲಿ ಬಹಿರಂಗವಾಗಿ ಹೇಳಿ ರಾಜಧರ್ಮ ಪಾಲಿಸುವಂತೆ ತಿಳಿಸಿದ್ದರು.
ನರೇಂದ್ರ ಮೋದಿಗೆ ಇತ್ತೀಚೆಗೆ ಬುದ್ಧಿ ಬಂದಂತೆ ಇದೆ. ನಿನ್ನೆ ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಸೋನಿಯಾ ಗಾಂಧಿ ಅವರನ್ನು ಟೀಕಿಸುವುದನ್ನು ಬಿಟ್ಟಿದ್ದಾರೆ. ಹೀಗೆ ಹಂತಹಂತವಾಗಿ ರಾಜಧರ್ಮ ಪಾಲಿಸುವುದನ್ನು ಕಲಿತುಕೊಳ್ಳಲಿ ಎಂದು ಆಶಿಸಿದರು.
ತದನಂತರ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನೂ ತರಾಟೆಗೆ ತೆಗೆದುಕೊಂಡ ಡಾ. ಯುಆರ್, ಪ್ರವಾಸ ಭಾಗ್ಯ, ಶಾದಿ ಭಾಗ್ಯ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿದರು. ಇಂತಹ ಜನಪರ ಯೋಜನೆಗಳು ಸಮರ್ಪಕವಾಗಿರಬೇಕು.
ಯಾವುದೇ ಒಂದು ಜಾತಿ ವರ್ಗದವರನ್ನು ಮಾತ್ರ ಪ್ರವಾಸಕ್ಕೆ ಕಳುಹಿಸುವುದು ಸರಿಯಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಇಂತಹ ಯೋಜನೆಗಳನ್ನು ಜಾರಿಗೆ ತರಬಾರದು. ಬದಲಿಗೆ ಎಲ್ಲಾ ಮಕ್ಕಳನ್ನು ಪ್ರವಾಸಕ್ಕೆ ಕಳುಹಿಸುವ ಯೋಜನೆ ರೂಪಿಸಲಿ ಎಂದು ಆಶಿಸಿದರು.
ಶಾದಿ ಭಾಗ್ಯ ಯೋಜನೆ ಹೆಸರಿನಲ್ಲಿ ಹಾಸಿಗೆ, ಮಂಚ ನೀಡುವ ಬದಲು ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುವಂತೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅನಂತಮೂರ್ತಿ ಸಲಹೆ ನೀಡಿದರು.
ಮೈಸೂರು ದೊರೆ ಟಿಪ್ಪು ಸುಲ್ತಾನ್ 264ನೇ ಜನ್ಮದಿನ ಅಂಗವಾಗಿ ಟಿಪ್ಪು ಸುಲ್ತಾನ್ ರಾಷ್ಟ್ರೀಯ ಪ್ರಶಸ್ತಿಯು ಡಾ ಯುಆರ್ ಅವರ ಜತೆಗೆ ಅಹಿಂದ ಕಾರ್ಯಕಾರಿ ರಾಜ್ಯಾಧ್ಯಕ್ಷ ಪ್ರೊ. ಎನ್ ವಿ ನರಸಿಂಹಯ್ಯ ಹಾಗೂ ಸಮಾಜ ಸೇವಕಿ ಪ್ರೊ. ನಾಜನೀನ್ ಬೇಗಂ ಅವರಿಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು.












Click it and Unblock the Notifications