ಲವರ್ ತಾಯಿಗಾಗಿ ಚಿನ್ನ ಕದಿಯುತ್ತಿದ್ದ ಬೆಂಗಳೂರಿನ ಡ್ಯಾನ್ಸ್ ಮಾಸ್ಟರ್ ಅರೆಸ್ಟ್
ಬೆಂಗಳೂರು, ನವೆಂಬರ್ 11: ತನ್ನ ಗರ್ಲ್‌ಫ್ರೆಂಡ್ ತಾಯಿಗಾಗಿ ಸಿಕ್ಕ ಸಿಕ್ಕ ಕಡೆ ಕಳ್ಳತನ ಮಾಡುತ್ತಿದ್ದ ಬೆಂಗಳೂರಿನ ಡ್ಯಾನ್ಸ್ ಮಾಸ್ಟರ್‌ಅನ್ನು ಜಿಗಣಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹುಲ್ಲೂರು ನಿವಾಸಿ ಸೈಯ್ಯದ್ ಅಲಿ ಬಾಳಸಾಹೇಬ್ ನಡಾಫ್ (25) ಎನ್ನುವಾತನನ್ನು ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಸೈಯ್ಯದ್ ಅಲಿ ಬಾಳಸಾಹೇಬ್ ನಡಾಫ್ ಮದುವೆಯಾಗಬೇಕು ಎಂದು ಬಯಸಿದ್ದ ಹುಡುಗಿ ಕಷ್ಟದಲ್ಲಿದ್ದಳು. ಆಕೆಯ ತಾಯಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ತಾಯಿಗೆ ಚಿಕಿತ್ಸೆ ಕೊಡಿಸುವುದು ನಡಾಫ್ ಪ್ರೇಯಸಿಗೆ ಅನಿವಾರ್ಯವಾಗಿತ್ತು. ಆದರೆ ಬಡತನ ಹಾಗೂ ಹಣವಿಲ್ಲದೇ ಕಷ್ಟದ್ದಲ್ಲಿದ್ದಳು ಎನ್ನಲಾಗಿದೆ.

ಪ್ರೇಯಿಸಿಯ ಕಷ್ಟ ಕಂಡ ಸೈಯ್ಯದ್ ಅಲಿ ಬಾಳಸಾಹೇಬ್ ನಡಾಫ್ ಚಿನ್ನಾಭರಣ ಕಳ್ಳತನಕ್ಕೆ ಇಳಿದಿದ್ದಾನೆ. ಕಳೆದ ಆಗಸ್ಟ್‌ನಲ್ಲಿ ಆರೋಪಿ ಜಿಗಣಿಯ ರತ್ನಮ್ಮ ಎಂಬವರ ಸರವನ್ನು ಕಳ್ಳತನ ಮಾಡಿದ್ದ. ಬುಲೆಟ್ ಬೈಕ್‍ನಲ್ಲಿ ಬಂದು ಸಿಗರೇಟ್ ಖರೀದಿಸುವ ನೆಪದಲ್ಲಿ ಮಾಂಗಲ್ಯದ ಸರ ಕದ್ದು ಪರಾರಿಯಾಗಿದ್ದ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಘಟನೆ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೆತ್ತಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ 8 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, 2 ಬೈಕ್‍ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಬೈಕ್ ಸವಾರನಿಂದ ಬಿಎಂಟಿಸಿ ಚಾಲಕನ ಮೇಲೆ ಹಲ್ಲೆ: ಆರೋಪಿ ಅರೆಸ್ಟ್
ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಬಿಎಂಟಿಸಿ ಚಾಲಕನ ಮೇಲೆ ಹಲ್ಲೆ ಮಾಡಿದ ಆರೋಪಿಯನ್ನು ನಗರದ ಬ್ಯಾಟರಾಯನಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮಲ್ಲೇಶ್ವರ ಮೂಲದ ಕಮಲ್ ಸಿಂಗ್ (30) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ರಸ್ತೆಯಲ್ಲಿ ತೆರಳುವಾಗ ಬಸ್ ಟಚ್ ಆಗಿದೆ ಎಂಬ ಕಾರಣಕ್ಕೆ ಜಗಳ ಆರಂಭವಾಗಿದ್ದು, ಮಾತಿಗೆ ಮಾತು ಬೆಳೆದಿದೆ.
ಇದೇ ಜಗಳ ಅತಿರೇಖಕಕ್ಕೆ ಏರಿದ್ದು, ಆರೋಪಿ ಬಸ್ ಒಳಗೆ ಬಂದು ಬಿಎಂಟಿಸಿ ಚಾಲಕನ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಘಟನೆ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು ಗಲಾಟೆಯ ಕಾರಣದ ಬಗ್ಗೆ ನಿಖರ ಮಾಹಿತಿ ಕಲೆ ಹಾಕುತ್ತಿದ್ದು, ಬಂಧಿತ ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications