Namma Metro: ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಸಂಚಾರ ವ್ಯತ್ಯಯ
ಭಾನುವಾರ ಬೆಳಿಗ್ಗೆ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ತಾಂತ್ರಿಕ ದೋಷದಿಂದಾಗಿ ವೈಟ್‌ಫೀಲ್ಡ್ (ಕಾಡುಗೋಡಿ) ಮತ್ತು ಐಟಿಪಿಎಲ್ ನಡುವೆ ರೈಲು ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಕಾರಣ ಪ್ರಯಾಣಿಕರು ಪರದಾಡುವಂತಾಯಿತು. ಬೆಳಗ್ಗೆ 8.25 ರಿಂದ 8.55 ಗಂಟೆಯವರೆಗೆ ರೈಲು ಸೇವೆಗಳನ್ನು ನಿಲ್ಲಿಸಲಾಗಿತ್ತು. ಈ ಸಮಯದಲ್ಲಿ ಚಲ್ಲಘಟ್ಟದಿಂದ ಐಟಿಪಿಎಲ್ ಮಾರ್ಗಗಳ ನಡುವೆ ರೈಲು ಸಂಚಾರ ನಡೆಸಲಾಯಿತು.
ಬೆಳಗ್ಗೆ 8.55ರ ಬಳಿಕ ನೇರಳೆ ಮಾರ್ಗದಲ್ಲಿ ಎಂದಿನಂತೆ ಮೆಟ್ರೋ ಸಂಚಾರವನ್ನು ಮತ್ತೆ ಆರಂಭಿಸಲಾಯಿತು. ಹಸಿರು ಮಾರ್ಗದ ಮೆಟ್ರೋ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಿಲ್ಲ ಎಂದು ಬಿಎಂಆರ್ ಸಿಎಲ್ ಸ್ಪಷ್ಟನೆ ನೀಡಿದೆ.

ಹಸಿರು ಮಾರ್ಗದಲ್ಲಿ ಸುರಕ್ಷತಾ ಸಂಚಾರ
ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಹಸಿರು ಮಾರ್ಗದಲ್ಲಿ ಮಾದಾವರ ಮತ್ತು ನಾಗಸಂದ್ರ ನಡುವೆ ರೈಲು ಸಂಚಾರ ಆರಂಭಿಸಲು ಮುಹೂರ್ತ ನಿಗದಿಯಾಗಿದೆ. ಅಕ್ಟೋಬರ್ 3 ಮತ್ತು 4ರಂದು ಮೆಟ್ರೊ ರೈಲು ಸುರಕ್ಷತಾ ಆಯುಕ್ತರು (CMRS) ಸುರಕ್ಷತಾ ತಪಾಸಣೆ ನಡೆಸಲಿದೆ ಎಂದು ಬಿಎಂಆರ್ ಸಿಎಲ್ ಮಾಹಿತಿ ನೀಡಿದೆ.
ಈಗಾಗಲೇ ನಾಗಸಂದ್ರ ಮಾದಾವರ ನಡುವೆ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದ್ದು. ಸುರಕ್ಷತೆ ತಪಾಸಣೆಗೆ ಕಾಯುತ್ತಿದೆ. 3.7 ಕಿಲೋ ಮೀಟರ್ ಮಾರ್ಗದಲ್ಲಿ ಸುರಕ್ಷತಾ ತಪಾಸಣೆ ನಡೆದು, ಮೆಟ್ರೋ ಸಂಚಾರಕ್ಕೆ ಒಪ್ಪಿಗೆ ಸಿಕ್ಕ ಬಳಿಕ ವಾಣಿಜ್ಯ ಕಾರ್ಯಾಚರಣೆ ಆರಂಭವಾಗಲಿದೆ. ನವೆಂಬರ್ ಅಥವಾ ಡಿಸೆಂಬರ್ ವೇಳೆಗೆ ಹಸಿರು ಮಾರ್ಗದಲ್ಲಿ ಸಂಪೂರ್ಣವಾಗಿ ಕಾರ್ಯ ನಿರ್ವಹಿಸಲಿದೆ.
ನಾಗಸಂದ್ರದಿಂದ ಮಾದಾವರದವರೆಗೆ 3.7 ಕಿ.ಮೀ ಉದ್ದದ ವಿಸ್ತೃತ ಹಸಿರು ಮಾರ್ಗದ ಕಾಮಗಾರಿಯನ್ನು 2017ರಲ್ಲಿ ಆರಂಭಿಸಿದರೂ, ಹಲವು ಅಡೆತಡೆಗಳನ್ನು ದಾಟಿ 7 ವರ್ಷಗಳ ಸುಧೀರ್ಘ ಕಾಮಗಾರಿಯ ಬಳಿಕ ಉದ್ಘಾಟನೆಗೆ ಸಜ್ಜಾಗಿದೆ. ನಾಗಸಂದ್ರ ದಿಂದ ಮಾದಾವರದವರೆಗೆ ಮೆಟ್ರೋ ಸಂಚಾರ ಆರಂಭವಾದ ಬಳಿಕ ಹಸಿರು ಮಾರ್ಗ ಒಟ್ಟು ಉದ್ದ 33.46 ಕಿ.ಮೀಗೆ ಹೆಚ್ಚಾಗಲಿದೆ.












Click it and Unblock the Notifications