ಪರ್ಯಾಯ ರಸ್ತೆ ನಿರ್ಧಾರ, ಬಂಡೀಪುರ ಸುರಕ್ಷಿತ

ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇರಳ ಸಿಎಂ ಉಮ್ಮನ್ ಚಾಂಡಿ ವಿಧಾನಸೌಧದಲ್ಲಿ ಸಭೆ ನಡೆಸಿದರು. ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 67 ಹಾಗೂ 212ರಲ್ಲಿ ರಾತ್ರಿ ವಾಹನ ಸಂಚಾರ ನಿರ್ಬಂಧ ತೆರವಿನ ಕುರಿತು ಚರ್ಚಿಸಿದರು.
ಆದರೆ, ಈ ಕುರಿತ ವಿಚಾರ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಅಂತಿಮ ನಿರ್ಧಾರ ಕೈಗೊಳ್ಳಲು ಸಿಎಂ ಸಿದ್ದರಾಮಯ್ಯ ನಿರಾಕರಿಸಿದರು. ಪರ್ಯಾಯ ಮಾರ್ಗ ಕಂಡುಕೊಳ್ಳುವ ಸಲಹೆ ನೀಡಿದರು. ಕೇರಳ ಸರ್ಕಾರವೂ ಇದಕ್ಕೆ ಸಮ್ಮತಿ ಸೂಚಿಸಿತು.
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ಉಮ್ಮನ್ ಚಾಂಡಿ, ಕರ್ನಾಟಕ ಮತ್ತು ಕೇರಳ ಗಡಿಯಲ್ಲಿ ಬರುವ ಈ ಎರಡೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿ ವಾಹನ ಸಂಚಾರ ನಿರ್ಬಂಧಿಸಿರುವುದರಿಂದ ಕೇರಳದ ವಾಣಿಜ್ಯ ಚಟುವಟಿಕೆಗೆ ಹೊಡೆತ ಬಿದ್ದಿದೆ ಎಂದರು.
ಈ ರಸ್ತೆಗಳಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಅವಕಾಶ ನೀಡುವಂತೆ ಶೀಘ್ರದಲ್ಲೇ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲಾಗುವುದು. ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಬೆಂಬಲ ನೀಡುವಂತೆ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು. (ಬಂಡೀಪುರ ರಸ್ತೆಯಲ್ಲಿ ರಾತ್ರಿ ಸಂಚಾರ ನಿಷೇಧ)
ಮಾರ್ಗ ಯಾವುದು : ಬಂಡೀಪುರ ಹೊರತು ಪಡಿಸಿ ನಾಲ್ಕು ಪರ್ಯಾಯ ಮಾರ್ಗಗಳನ್ನು ಕರ್ನಾಟಕ ಸರ್ಕಾರ ಕೇರಳಕ್ಕೆ ಸೂಚಿಸಿದೆ. ಮೈಸೂರು - ಹುಣಸೂರು- ಗೋಣಿಕೊಪ್ಪ- ಕುಟ್ಟ- ಕಾಟಿಕುಳಂ, ಮೈಸೂರು- ವಿರಾಜಪೇಟೆ- ಕಣ್ಣೂರು, ಮೈಸೂರು- ಬಾವಲಿ- ಮಾನಂದವಾಡಿ ಹಾಗೂ ಮೈಸೂರು- ಹುಣಸೂರು- ಬೈಲುಕುಪ್ಪೆ ಮಾರ್ಗಗಳ ಬಗ್ಗೆ ಪ್ರಸ್ತಾಪಿಸಲಾಗಿದೆ.
ಈ ಸಂಬಂಧ ಅಂತಿಮ ನಿರ್ಣಯ ಕೈಗೊಳ್ಳಲು ಕರ್ನಾಟಕ ಮತ್ತು ಕೇರಳ ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಎರಡೂ ರಾಜ್ಯಗಳ ಮುಖ್ಯ ಎಂಜಿನಿಯರ್ ಗಳನ್ನು ಒಳಗೊಂಡ ನಿರ್ವಹಣಾ ಸಮಿತಿಯನ್ನು ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮದನಿ ಬಗ್ಗೆ ಚರ್ಚೆ ಇಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗಿನ ಚರ್ಚೆ ವೇಳೆ ಬಂಧಿತ ಉಗ್ರ ಅಬ್ದುಲ್ ನಾಸಿರ್ ಮದನಿ ಕುರಿತ ಯಾವುದೇ ವಿಚಾರವನ್ನು ಪ್ರಸ್ತಾಪಿಸಲಿಲ್ಲ ಎಂದು ಉಮ್ಮನ್ ಚಾಂಡಿ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications