ಕರ್ನಾಟಕದಲ್ಲಿ ಮೊದಲ ಬಾರಿಗೆ CEFC ಕೇಂದ್ರ ಸ್ಥಾಪನೆಗೆ ಪ್ರಸ್ತಾವನೆ: ₹2,000 ಕೋಟಿ ಹೂಡಿಕೆಗೆ ಟಾಟಾ ಕಂಪನಿ ಒಲವು
ಬೆಂಗಳೂರು, ಜುಲೈ 12: ಪ್ರತಿಷ್ಠಿತ ಟಾಟಾ ಟೆಕ್ನಾಲಜೀಸ್ ಕಂಪನಿಯು ₹2000 ಕೋಟಿ ಹೂಡಿಕೆ ಮಾಡಿ ರಾಜ್ಯದಲ್ಲಿ ಮೂರು ಸಾಮಾನ್ಯ ಎಂಜಿನಿಯರಿಂಗ್ ಸೌಲಭ್ಯಗಳ ಕೇಂದ್ರಗಳನ್ನು (ಕಾಮನ್ ಎಂಜಿನಿಯರಿಂಗ್ ಫೆಸಿಲಿಟಿ ಸೆಂಟರ್-CEFC) ಸ್ಥಾಪಿಸಲು ಮುಂದೆ ಬಂದಿದೆ. ಸಿಇಎಫ್‌ಸಿ ಸ್ಥಾಪನಗೆ ಇದೇ ಮೊದಲನೇ ಪ್ರಸ್ತಾವನೆ ಎನ್ನಲಾಗಿದೆ.
ಬುಧವಾರ ಟಾಟಾ ಟೆಕ್ನಾಲಜೀಸ್ ಕಂಪನಿಯು ಉನ್ನತ ಅಧಿಕಾರಿಗಳು ಬೆಂಗಳೂರಿನಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಅವರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿದರು. ಕರ್ನಾಟಕದಲ್ಲಿ ಸೂಕ್ಷ್ನ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (MSME) ಉತ್ತೇಜನಕ್ಕಾಗಿ ಬಂಡವಾಳ ಹೂಡಿಕೆಯ ಪ್ರಸ್ತಾವನೆ ಸಲ್ಲಿಸಿ ಮಾತುಕತೆ ನಡೆಸಿದರು.

ವಿಶೇಷವಾಗಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳನ್ನು (MSME) ಗಳನ್ನು ಗಮನದಲ್ಲಿರಿಸಿಕೊಂಡು ಈ ಘಟಕಗಳ ಕೇಂದ್ರಗಳನ್ನು ಸ್ಥಾಪಿಸುವುದು ಕಂಪನಿಯ ಉದ್ದೇಶವಾಗಿದೆ. ಸರ್ಕಾರ ಖಾಸಗಿ ಸಹಭಾಗಿತ್ವದ ಪಿಪಿಪಿ ಮಾದರಿಯಲ್ಲಿ ಇದನ್ನು ಸ್ಥಾಪಿಸುವ ಯೋಜನೆಯಿದ್ದು, ಟಾಟಾ ಟೆಕ್ನಾಲಜೀಸ್ ಶೇಕಡ 70ರಷ್ಟು ಹೂಡಿಕೆ ಮಾಡಿದರೆ ಸರ್ಕಾರದ ಪಾಲು ಶೇಕಡ 30ರಷ್ಟು ಇರಲಿದೆ ಎಂದು ಸಚಿವ ಎಂ ಬಿ ಪಾಟೀಲ್ ಹೇಳಿದರು.
ಎಂಎಸ್ಎಂಇಗಳಿಗಾಗಿ ಕಾಮನ್ ಎಂಜಿನಿಯರಿಂಗ್ ಫೆಸಿಲಿಟಿ ಸೆಂಟರ್ ಸ್ಥಾಪನೆ ಸಂಬಂಧ ಪ್ರಸ್ತಾವ ಸಲ್ಲಿಕೆಯಾಗಿರುವುದು ರಾಜ್ಯದಲ್ಲಿ ಇದೇ ಮೊದಲು ಎಂದು ತಿಳಿದು ಬಂದಿದೆ.
ಒಂದು CEFC ಕೇಂದ್ರಕ್ಕೆ ಸುಮಾರು ₹630 ಕೋಟಿ ವೆಚ್ಚ
ರಾಜ್ಯದಲ್ಲಿ ಒಟ್ಟು ಮೂರು ಸಿಎಎಫ್‌ಸಿ ಕೇಂದ್ರ ಸ್ಥಾಪನೆಯ ಉದ್ದೇಶ ಹೊಂದಲಾಗಿದೆ. ಈ ಪೈಕಿ ಒಂದು ಕೇಂದ್ರ ಸ್ಥಾಪನೆಗೆ ಸುಮಾರು ₹630 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಇವುಗಳ ಸ್ಥಾಪನೆಯಿಂದಾಗಿ ಅಡ್ವಾನ್ಸ್ ಮ್ಯಾನಫ್ಯಾಕ್ಚರಿಂಗ್ 4.0, ಎಲೆಕ್ಟ್ರಿಕ್ ವೆಹಿಕಲ್ ಟೆಸ್ಟಿಂಗ್ ಮತ್ತು ಬಾಹ್ಯಾಕಾಶ ಹಾಗೂ ರಕ್ಷಣಾ ವಲಯದ ಉದ್ದಿಮೆಗಳಿಗೆ ಹೆಚ್ಚಿನ ಉಪಯೋಗ ಆಗಲಿದೆ. ಅದೇ ರೀತಿ ಈ ವಲಯಗಳ ಸ್ಟಾರ್ಟ್ ಅಪ್ ಗಳಿಗೂ ಇದರಿಂದ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಸಚಿವರು ವಿವರಿಸಿದರು.

ಟಾಟಾ ಟೆಕ್ನಾಲಜೀಸ್ ಕಂಪನಿಯ ಈ ಬೃಹತ್ ಹೂಡಿಕೆಯ ಪ್ರಸ್ತಾವ ಸ್ವಾಗತಾರ್ಹ. ರಾಜ್ಯ ಸರ್ಕಾರವೂ ಸೂಕ್ಷ್ಮ,ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು (MSME) ಬಲಪಡಿಸಲು ಒತ್ತು ಕೊಟ್ಟಿದೆ. ಇನ್ನು ಸಿಎಎಫ್‌ಸಿ ಪ್ರತಿ ಕೇಂದ್ರಕ್ಕೆ ಸುಮಾರು ಐದು ಎಕರೆಯಷ್ಟು ಜಾಗ ಬೇಕಾಗಲಿದೆ. ಇಷ್ಟು ಭೂಮಿಯನ್ನು ಯಾವ ಭಾಗದಲ್ಲಿ ಕಂಪನಿಗೆ ಪೂರೈಸಬೇಕು ಎಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಎಂಬಿ ಪಾಟೀಲ್ ತಿಳಿಸಿದರು.
ಸಚಿವರ ಭೇಟಿ ನಿಯೋಗದಲ್ಲಿ ಟಾಟಾ ಟೆಕ್ನಾಲಜೀಸ್ ಕಂಪನಿಯ ಅಧ್ಯಕ್ಷ ಪವನ್ ಭಗೇರಿಯಾ, ಉಪಾಧ್ಯಕ್ಷ ಪುಷ್ಕರಾಜ್ ಕೌಲಗೂಡ್, ಮುಖ್ಯಸ್ಥ ಪ್ರವೀಣ್ ದಿವೇಕರ್ ಹಾಗೂ ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications