Gun Manufacturing: 'ಗನ್' ತಯಾರಿಕೆ ಘಟಕ ಸ್ಥಾಪನೆ: ಸಿಎಂ ನೇತೃತ್ವದಲ್ಲಿ ಭಾರೀ ಬಂಡವಾಳ ಹೂಡಿಕೆ ಒಪ್ಪಂದ
ಬೆಂಗಳೂರು, ಫೆಬ್ರವರಿ 19: ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ನಡೆದ ಒಪ್ಪಂದದ ಅನ್ವಯ ಟಾಟಾ ಸಮೂಹದ ಭಾಗವಾಗಿರುವ ಏರ್ ಇಂಡಿಯಾ ಮತ್ತು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ನಿಂದ ಕರ್ನಾಟಕಕ್ಕೆ ಸಾವಿರಾರು ಕೋಟಿ ರೂಪಾಯಿ ಬಂಡವಾಳ ಹರಿದು ಬರಲಿದೆ.
ಹೌದು, ಕರ್ನಾಟಕ ರಾಜ್ಯದಲ್ಲಿ ವಿವಿಧ ಯೋಜನೆಗಳಿಗೆ 2,300 ಕೋಟಿ ರೂ. ಹೂಡಿಕೆ ಮಾಡಲು ಮುಂದಾಗಿವೆ. ಈ ಸಂಬಂಧವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರ ಸಮ್ಮುಖದಲ್ಲಿ ಸೋಮವಾರ ಬೆಂಗಳೂರಿನಲ್ಲಿ ಒಡಂಬಡಿಕೆಗೆ ಅಂಕಿತ ಬಿದ್ದಿದೆ. ಇಷ್ಟೊಂದು ಬಂಡವಾಳ ಹಂಚಿಕೆ ಹೇಗೆ? ಯಾವುದಕ್ಕೆ, ಅಭಿವೃದ್ಧಿಗಳೇನೆ?, ಉದ್ಯೋಗ ಸೃಷ್ಟಿಯ ಮಾಹಿತಿ ಇಲ್ಲಿ ತಿಳಿಯಿರಿ.

ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಏರ್ ಇಂಡಿಯಾದ ಮುಖ್ಯ ವಾಣಿಜ್ಯ ವ್ಯವಹಾರ ಅಧಿಕಾರಿ ನಿಪುಣ್ ಅಗರವಾಲ್ ಹಾಗೂ TASL ಸಿಇಒ ಸುಕರಣ್ ಸಿಂಗ್ ಒಡಂಬಡಿಕೆ ಪತ್ರಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು.
1,650 ಉದ್ಯೋಗ ಸೃಷ್ಟಿ
ಈ ವೇಳೆ ಮಾತನಾಡಿದ ಸಚಿವ ಎಂಬಿ ಪಾಟೀಲ್ ಅವರು, ಟಾಟಾ ಸಮೂಹದ ಈ ಹೂಡಿಕೆಯಿಂದ ನೇರವಾಗಿ 1,650 ಉದ್ಯೋಗಗಳು ಸೃಷ್ಟಿಯಾಗಲಿವೆ. ಒಟ್ಟು ಹೂಡಿಕೆಯ ಪೈಕಿ ಏರ್ ಇಂಡಿಯಾ ಕಂಪನಿಯು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಓವರ್-ಹಾಲ್ (ಎಂಆರ್ ಒ) ಘಟಕವನ್ನು ಸ್ಥಾಪಿಸಲು 1,300 ಕೋಟಿ ರೂ. ಹೂಡುತ್ತಿದೆ.
ಇದರಿಂದಲೂ 1,200 ಜನರಿಗೆ ನೇರವಾಗಿ ಉದ್ಯೋಗ ಸಿಗಲಿದೆ. ಪರೋಕ್ಷವಾಗಿ 25 ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ. ಇಡೀ ಭಾರತದಲ್ಲಿ ಇದು ಇಂತಹ ಮೊಟ್ಟಮೊದಲ ಯೋಜನೆ ಎಂದರು.

ವಿಮಾನ ಪರಿವರ್ತನೆ ಘಟಕ
ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್ಎಲ್) ಕಂಪನಿಯು ಮೂರು ಯೋಜನೆಗಳಿಗೆ 1,030 ಕೋಟಿ ರೂ. ಬಂಡವಾಳ ಹೂಡಲಿದೆ. ಇವುಗಳ ಪೈಕಿ 420 ಕೋಟಿ ರೂ.ಗಳನ್ನು ಅದು ನಾಗರಿಕ ವಿಮಾನಗಳನ್ನು ಸರಕು ಸಾಗಣೆ ವಿಮಾನಗಳನ್ನಾಗಿ (ಫ್ರೈಟರ್) ಪರಿವರ್ತಿಸುವ ಘಟಕ ಸ್ಥಾಪನೆಗೆ ವಿನಿಯೋಗಿಸಲಿದೆ.
ಗನ್ ತಯಾರಿಕೆ ಘಟಕ
ಇನ್ನೂ 310 ಕೋಟಿ ರೂ. ಹೂಡಿಕೆಯೊಂದಿಗೆ ಗನ್ ತಯಾರಿಕೆ ಘಟಕ ಮತ್ತು 300 ಕೋಟಿ ರೂ. ವೆಚ್ಚದಲ್ಲಿ ವಿಮಾನಯಾನ ಮತ್ತು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಿದೆ. ಇದರಿಂದ 450 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅವರು ವಿವರಿಸಿದರು.
ಬೆಂಗಳೂರು ವಿಮಾನ ನಿಲ್ದಾಣದ ಸಮೀಪ ಮತ್ತು ಕೋಲಾರದಲ್ಲಿ ಟಿಎಎಸ್ಎಲ್ ತಾನು ಸ್ಥಾಪಿಸಲಿರುವ ಗನ್ ತಯಾರಿಕೆ ಘಟಕದ ಮೂಲಕ ತನಗೆ ಅಗತ್ಯವಿರುವ 13 ಸಾವಿರ ಬಿಡಿಭಾಗಗಳ ಪೈಕಿ ಶೇಕಡ 50ರಷ್ಟನ್ನು ಪೂರೈಸಿಕೊಳ್ಳುವ ಆಲೋಚನೆ ಹೊಂದಿದೆ. ಇದರಿಂದಾಗಿ 300ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ 2-3 ಸಾವಿರ ಜನರಿಗೆ ಉದ್ಯೋಗಗಳು ಸಿಗಲಿವೆ. 1939ರಷ್ಟು ಹಿಂದೆಯೇ ಬೆಂಗಳೂರಿನಲ್ಲಿ ಎಚ್ಎಎಲ್ ಸ್ಥಾಪನೆಯಾಗುವುದರೊಂದಿಗೆ ರಾಜ್ಯವು ವೈಮಾನಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ ಎಂದು ಅವರು ಹೇಳಿದರು.
ರಫ್ತು ವಹಿವಾಟಿಗೆ ಕರ್ನಾಟಕ ಕೊಡುಗೆ
ರಕ್ಷಣಾ ಇಲಾಖೆಗೆ ಬೇಕಾಗುವ ವಿಮಾನಗಳು ಮತ್ತು ಹೆಲಿಕಾಪ್ಟರುಗಳ ಪೈಕಿ ಶೇಕಡ 67ರಷ್ಟು ಕರ್ನಾಟಕದಲ್ಲೇ ತಯಾರಾಗುತ್ತಿದೆ. ಜತೆಗೆ ದೇಶದ ವೈಮಾಂತರಿಕ್ಷ ಮತ್ತು ರಕ್ಷಣಾ ವಲಯದ ರಫ್ತು ವಹಿವಾಟಿಗೆ ರಾಜ್ಯವು ಶೇಕಡ 65ರಷ್ಟು ಕೊಡುಗೆ ನೀಡುತ್ತಿದೆ. ದೇಶದಲ್ಲಿ ಈ ವಲಯದಲ್ಲಿರುವ ಕಂಪನಿಗಳ ಪೈಕಿ ಶೇ.70ರಷ್ಟು ಕಂಪನಿಗಳು ಕರ್ನಾಟಕದಲ್ಲೇ ನೆಲೆ ಹೊಂದಿವೆ.
ಕಾರ್ಯಕ್ರಮದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್, ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ, ಏರ್ ಇಂಡಿಯಾದ ಉನ್ನತಾಧಿಕಾರಿಗಳಾದ ಮನನ್ ಚೌಹಾಣ್, ಕಾರ್ತಿಕೇಯ ಭಟ್, ಅತುಲ್ ಶುಕ್ಲ, ಟಿಎಎಸ್ಎಲ್ ಉನ್ನತಾಧಿಕಾರಿಗಳು ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications