ಬೆಂಗಳೂರಿನ ಹೊರ ವರ್ತುಲ ರಸ್ತೆಯಿಂದ ಸ್ಥಳಾಂತರಗೊಂಡ ಸ್ವಿಗ್ಗಿ ಕೇಂದ್ರ ಕಚೇರಿ!
ಬೆಂಗಳೂರಿನಲ್ಲಿ ಕೆಲವು ಕಂಪನಿಗಳು ಬೆಂಗಳೂರಿನ ಹೊರ ವರ್ತುಲ ರಸ್ತೆಯಿಂದ ತಮ್ಮ ಕಂಪನಿಗಳನ್ನು ಬೇರೆ ಸ್ಥಳಗಳಿಗೆ ಸ್ಥಳಾಂತರಿಸುತ್ತಿವೆ. ಮುಖ್ಯವಾಗಿ ಕೆಲವೊಂದು ಪ್ರತಿಷ್ಠಿತ ಹಾಗೂ ದೊಡ್ಡ ಕಂಪನಿಗಳು ಬೆಂಗಳೂರಿನ ಈ ಪ್ರದೇಶದಿಂದ ಹೊರಕ್ಕೆ ಹೋಗುತ್ತಿವೆ. ಬೆಂಗಳೂರಿನ ಈ ಭಾಗದಲ್ಲಿ ಮೂಲಸೌಕರ್ಯ ಕೊರತೆ ಹಾಗೂ ರಸ್ತೆಗುಂಡಿಗಳ ಸಮಸ್ಯೆ ಇದಕ್ಕೆ ಮುಖ್ಯ ಕಾರಣವಾಗಿದೆ. ಇದೀಗ ಪ್ರತಿಷ್ಠಿತ ಸ್ವಿಗ್ಗಿ (Swiggy) ತನ್ನ ಕೇಂದ್ರ ಕಚೇರಿಯನ್ನು ಈ ಸ್ಥಳದಿಂದ ಬದಲಾಯಿಸಿದೆ.
ಬೆಂಗಳೂರಿನಲ್ಲಿ ಮೂಲಸೌಕರ್ಯ ಕೊರತೆಯಿಂದ ಕಂಪನಿಗಳು ಹೊರಕ್ಕೆ ಹೋಗಲಿವೆ ಎನ್ನುವ ವಿಚಾರವು ಗಂಭೀರ ಚರ್ಚೆಗೆ ಕಾರಣವಾಗಿತ್ತು. ಇದಾದ ನಂತರ ಬೆಂಗಳೂರಿನ ಹೊರ ವರ್ತುಲ ರಸ್ತೆ ಭಾಗದಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ರಸ್ತೆ ಅಭಿವೃದ್ಧಿ ಸೇರಿದಂತೆ ಟ್ರಾಫಿಕ್ ಜಾಮ್‌ಗೂ ಬ್ರೇಕ್ ಹಾಕುವುದಾಗಿ ಹೇಳಲಾಗಿತ್ತು. ಅಲ್ಲದೇ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಸಹ ಈ ಭಾಗದಲ್ಲಿ ತುರ್ತು ಕಾಮಗಾರಿಗಳನ್ನು ತೆಗೆದುಕೊಳ್ಳುವುದಾಗಿ ಹೇಳಿತ್ತು. ಇದ ಹೊರತಾಗಿಯೂ ಈ ಭಾಗದಲ್ಲಿ ಮಹತ್ವದ ಬದಲಾವಣೆಗಳು ಆಗಿಲ್ಲ ಎನ್ನಲಾಗಿದೆ.

ಸಮಾಧಾನಕರ ಸಂಗತಿ ಎಂದರೆ ಇದೀಗ ಸ್ವಿಗ್ಗಿ ತನ್ನ ಪ್ರಧಾನ ಕಚೇರಿಯನ್ನು ಹೊರ ವರ್ತುಲ ರಸ್ತೆಯ (ORR) ಬೆಳ್ಳಂದೂರಿನಿಂದ ಸ್ಥಳಾಂತರವಾಗುತ್ತಿದೆಯಾದರೂ ಬೆಂಗಳೂರು ಬಿಟ್ಟು ಹೋಗುತ್ತಿಲ್ಲ. ಬೆಂಗಳೂರಿನ ವೈಟ್‌ಫೀಲ್ಡ್‌ಗೆ ತನ್ನ ಕೇಂದ್ರ ಕಚೇರಿಯನ್ನು ಸ್ಥಳಾಂತರಿಸಲು ಮುಂದಾಗಿದೆ. ಸಂಚಾರ ದಟ್ಟಣೆಯಿಂದ ಈ ಪ್ರದೇಶ ಕೂಡಿರುವುದು, ಉತ್ತಮ ಮೂಲಸೌಕರ್ಯ ಕೊರತೆ ಹಾಗೂ ಸುಗಮ ಸಂಚಾರಕ್ಕೆ ಅನುಕೂಲವಾಗುವಂತಹ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವುದಕ್ಕೆ ಪ್ರಮುಖ ಕಂಪನಿಗಳು ನಿರ್ಧರಿಸಿವೆ.
ಮನಿ ಕಂಟ್ರೋಲ್ ವರದಿಯ ಪ್ರಕಾರ, ಸ್ವಿಗ್ಗಿ ಶೀಘ್ರದಲ್ಲೇ ತನ್ನ ಎಲ್ಲಾ ಕಾರ್ಪೊರೇಟ್ ಪ್ರಧಾನ ಕಚೇರಿಗಳನ್ನು ಎಂಬಸಿ ಟೆಕ್ ವಿಲೇಜ್‌ನಿಂದ ವೈಟ್‌ಫೀಲ್ಡ್‌ನಲ್ಲಿರುವ ಸುಮಧುರ ಕ್ಯಾಪಿಟಲ್ ಟವರ್ಸ್‌ಗೆ ಸ್ಥಳಾಂತರಿಸಲಿದೆ. ಈ ಸೌಲಭ್ಯವು ಸುಮಾರು 2,000 ಸಿಬ್ಬಂದಿಗೆ ವಸತಿ ಸೌಲಭ್ಯವನ್ನು ಒದಗಿಸಲಿದೆ ಎಂದು ಹೇಳಲಾಗಿದೆ.
ಮೆಟ್ರೋ (ಕಾಡುಗೋಡಿ ಟ್ರೀ ಪಾರ್ಕ್ ಮೆಟ್ರೋ)ಗೆ ಹತ್ತಿರದಲ್ಲಿರುವುದರಿಂದ ಹೊಸ ಕಚೇರಿ ಉತ್ತಮ ಸಂಪರ್ಕವನ್ನು ಹೊಂದಿದೆ ಎಂದು ಸ್ವಿಗ್ಗಿ ಉದ್ಯೋಗಿಗಳಿಗೆ ತಿಳಿಸಲಾಗಿದೆ. ಅಲ್ಲದೇ ವಸತಿ ಪ್ರದೇಶ ಹಾಗೂ ವೆಚ್ಚವು ORR ಮತ್ತು ಬೆಳ್ಳಂದೂರಿಗಿಂತ ಕಡಿಮೆ ಬೆಲೆಯಲ್ಲಿ ಈ ಭಾಗದಲ್ಲಿ ಸಿಗಲಿದೆ ಎಂದು ಹೇಳಲಾಗಿದೆ. ಸ್ವಿಗ್ಗಿಯ ಹೊಸ ಕಚೇರಿಯು ಎರಡು ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸಲಿದೆ. ಕಾಡುಗೋಡಿ ಟ್ರೀ ಪಾರ್ಕ್ ನಿಲ್ದಾಣ ಮತ್ತು ಹೋಪ್‌ಫಾರ್ಮ್ ಚನ್ನಸಂದ್ರ ಮೆಟ್ರೋ ನಿಲ್ದಾಣ ಸಮೀಪವಾಗಲಿದೆ ಎಂದು ಹೇಳಲಾಗಿದೆ.
ಇನ್ನಷ್ಟು ಕಂಪನಿಗಳು ಸ್ಥಳಾಂತರಗೊಳ್ಳುವ ಸಾಧ್ಯತೆ: ಇನ್ನು ಬೆಂಗಳೂರಿನ ಹೊರ ವರ್ತುಲ ರಸ್ತೆಯಿಂದ ಇನ್ನಷ್ಟು ಕಂಪನಿಗಳು ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ. ಈ ಭಾಗದಲ್ಲಿ ಮೂಲಸೌಕರ್ಯ ಕೊರತೆ, ಭೂಮಿ ಬೆಲೆ ಹೆಚ್ಚಳ, ರಸ್ತೆಗುಂಡಿ ಹಾಗೂ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚಳ ಸೇರಿದಂತೆ ಹಲವು ಕಾರಣಗಳಿಗೆ ಕಂಪನಿಗಳು ಈ ಭಾಗದಿಂದ ಸ್ಥಳಾಂತರಗೊಳ್ಳುತ್ತಿವೆ ಎಂದು ಹೇಳಲಾಗಿದೆ.












Click it and Unblock the Notifications