ಗವಿಗಂಗಾಧರೇಶ್ವರ ದೇಗುಲದಲ್ಲಿ ಶಿವಲಿಂಗ ಸ್ಪರ್ಶಿಸಲಿದೆ ಸೂರ್ಯ ರಶ್ಮಿ: ಸಮಯ ತಿಳಿಯಿರಿ
ಬೆಂಗಳೂರು ಜನವರಿ 15: ಮಕರ ಸಂಕ್ರಾಂತಿ ವರ್ಷದ ಮೊದಲ ಹಾಗೂ ಸುಗ್ಗಿಯ ಹಬ್ಬ. ಈ ದಿನ ಬೆಂಗಳೂರಿನ ಗವಿಗಂಗಾಧರೇಶ್ವರ ದೇಗುಲದಲ್ಲಿ ವಿಸ್ಮಯವೊಂದು ನಡೆಯಲಿದೆ. ಇಂದು ಸೂರ್ಯನ ಬೆಳಕು ನೇರವಾಗಿ ಶಿವಲಿಂಗದ ಮೇಲೆ ಬೀಳಲಿದೆ. ಇದನ್ನು ಕಣ್ತುಂಬಿಕೊಳ್ಳಲು ಭಕ್ತ ಸಾಗರವೇ ನೆರೆದಿರುತ್ತದೆ.
ಹೌದು... ಮಲ್ಲೇಶ್ವರಂನಲ್ಲಿ ಇರುವ ಗವಿಗಂಗಾಧರೇಶ್ವರ ದೇಗುಲದಲ್ಲಿ ಇಂದು ಶಿವಲಿಂಗವನ್ನು ಸೂರ್ಯ ರಶ್ಮಿ ಸ್ಪರ್ಶಿಸಲಿದೆ. ಇದೊಂದು ವಿಸ್ಮಯವೇ ಹೌದು. ಸೂರ್ಯ ದಕ್ಷಿಪಧದಿಂದ ಉತ್ತರಕ್ಕೆ ಪಥ ಸಂಚಲನ ಮಾಡುವ ವೇಳೆ ಶಿವನ ಮೂರ್ತಿಯನ್ನು ಸ್ಪರ್ಶಿಸಲಿದ್ದಾನೆ. ಸಂಜೆ 5.20 ರಿಂದ 5.23 ನಿಮಿಷದವರೆಗೆ ಸೂರ್ಯರಶ್ಮಿ ಶಿವನಿಗೆ ನಮಿಸಲಿದೆ. ಭಕ್ತಾಧಿಗಳು ಈ ವಿಸ್ಮಯವನ್ನು ನೋಡಲು ದೇವಾಲಯದ ಹೊರಭಾಗದಲ್ಲಿ ಎರಡು ಎಲ್‌ಇಡಿ ಹಾಗೂ ಐದು ಟಿವಿಗಳ ವ್ಯವಸ್ಥೆ ಮಾಡಲಾಗಿದೆ.

ಈ ವೇಳೆ ದೇವಸ್ಥಾನದಲ್ಲಿ ಮಂತ್ರ, ಓಂಕಾರ ಪಠಣಗಳು ನಡೆಯಲಿವೆ. ಅರ್ಚಕರು ಶಿವಲಿಂಗದ ಮೇಲೆ ಎಳನೀರು ಅಭಿಷೇಕ ಮಾಡಲಿದ್ದಾರೆ. ಕೆಲ ಸೆಕೆಂಡ್‌ಗಳ ಕಾಲ ಸೂರ್ಯ ರಶ್ಮಿ ಶಿವಲಿಂಗವನ್ನು ಸ್ಪರ್ಶಿಸಿ ಮರೆಯಾಗಲಿದೆ.
ಗವಿಗಂಗಾಧರೇಶ್ವರ ಐತಿಹಾಸಿಕ ದೇವಸ್ಥಾನವಾಗಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಸಿಲಿಕಾನ್ ಸಿಟಿ ಬೆಂಗಳೂರಿನ ದಕ್ಷಿಣ ಭಾಗದ ಕೇಂಪೆಗೌಡ ನಗರದ ಗವಿಪುರ ಬಡಾವಣೆಯಲ್ಲಿ ಗವಿ ಗಂಗಾಧರೇಶ್ವರ ದೇವಸ್ಥಾನ ನೆಲೆಸಿದೆ. ಸುಮಾರು 1300 ವರ್ಷಗಳ ಹಿಂದೆ ಹೊಯ್ಸಳ ಕಾಲದಲ್ಲಿ ಈ ದೇವಸ್ಥಾನ ನಿರ್ಮಾಣವಾಗಿದೆ ಎಂದು ಇತಿಹಾಸಕಾರರು ಹೇಳುತ್ತಾರೆ. ಮಕರ ಸಂಕ್ರಾಂತಿ ದಿನದಂದು ಸಾವಿರಾರು ಜನ ಇಲ್ಲಿ ಆಗಮಿಸಿ ಶಿವಲಿಂಗದ ದರ್ಶನ ಪಡೆಯುತ್ತಾರೆ.
ಗವಿಗಂಗಾಧರೇಶ್ವರ ದೇಗುಲದ ಬಗ್ಗೆ
ಬೆಂಗಳೂರಿನಲ್ಲಿ ಸಾಕಷ್ಟು ಐತಿಹಾಸಿಕ ಮತ್ತು ಪುರಾಣ ಪ್ರಸಿದ್ಧ ಕ್ಷೇತ್ರಗಳಿವೆ. ಇಂದಿಗೂ ಈ ಕ್ಷೇತ್ರಗಳು ತನ್ನದೇ ಆದ ಹಿರಿಮೆ ಗರಿಮೆಯ ಮೂಲಕ ಭಕ್ತಕೋಟಿಯನ್ನು ತನ್ನತ್ತ ಸೆಳೆಯುತ್ತಿರುತ್ತದೆ. ಇಂತಹ ಪವಿತ್ರ ಕ್ಷೇತ್ರಗಳ ಭೇಟಿ ಮನಸ್ಸಿಗೂ ಬಲು ಆನಂದ ನೀಡುತ್ತವೆ. ಅಂತಹ ಪುಣ್ಯ ಕ್ಷೇತ್ರಗಳಲ್ಲಿ ಒಂದು ಗವಿಗಂಗಾಧರೇಶ್ವರನ ಸನ್ನಿಧಿ. ಮಕರ ಸಂಕ್ರಾಂತಿಯ ದಿನದ ಸಂಜೆ ಸೂರ್ಯ ರಶ್ಮಿ ಶಿವಲಿಂಗವನ್ನು ಸ್ಪರ್ಶಿಸುವ ಕ್ಷಣವನ್ನು ಕಣ್ತುಂಬಿಕೊಳ್ಳುವುದೇ ಒಂದು ಅದ್ಭುತ ಅನುಭವ.
ರಾಜಧಾನಿ ಬೆಂಗಳೂರಿನ ಮಡಿಲಿನಲ್ಲೊಂದು ಪರಮ ಪವಿತ್ರ ಕ್ಷೇತ್ರವಿದೆ. ಒಂದು ಕಾಲದ ತಪೋಭೂಮಿ ಇದು. ಖುಷಿ, ಮುನಿಗಳ ಭೇಟಿಗೆ ಸಾಕ್ಷಿಯಾದ ಈ ಸ್ಥಳ ಇಂದಿಗೂ ತನ್ನ ಧಾರ್ಮಿಕ ಮಹತ್ವವನ್ನು ಉಳಿಸಿಕೊಂಡು ಅದೆಷ್ಟೋ ಭಕ್ತರ ಮನಸ್ಸಿಗೆ ನೆಮ್ಮದಿಯ ತಾಣವಾಗಿ ಗಮನ ಸೆಳೆಯುತ್ತಿದೆ. ಅದೇ ಪರ ಶಿವನ ಪವಿತ್ರ ಆಲಯ ಗವಿಗಂಗಾಧರೇಶ್ವರ ಕ್ಷೇತ್ರ.
ಗವಿಪುರಂ ಗುಟ್ಟಹಳ್ಳಿಯಲ್ಲಿ ಈ ದೇವ ಸನ್ನಿಧಿ ಇದೆ. ಬೆಂಗಳೂರಿನ ಚಾಮರಾಜಪೇಟೆ ಮತ್ತು ರಾಮಕೃಷ್ಣಾಶ್ರಮಕ್ಕೆ ಸಮೀಪದಲ್ಲಿಯೇ ಈ ಕ್ಷೇತ್ರವಿದೆ. ಗಂಗಾಧರನಾಗಿ ಪರಶಿವ ಇಲ್ಲಿ ಭಕ್ತರಿಗೆ ದರ್ಶನ ನೀಡುತ್ತಾನೆ. ಸಾವಿರಾರು ವರ್ಷಗಳ ಇತಿಹಾಸ ಇರುವ ದೇವ ಸನ್ನಿಧಿ ಇದು. ಇದೇ ಕಾರಣದಿಂದ ಸಾಕಷ್ಟು ಭಕ್ತರು ಸದಾ ಗವಿಗಂಗಾಧರೇಶ್ವರನ ದರ್ಶನ ಪಡೆಯಲು ಈ ದೇಗುಲಕ್ಕೆ ಬರುತ್ತಾರೆ.
ಶಬರಿಮಲೆಯ ಮಕರ ಜ್ಯೋತಿ
ಅಯ್ಯಪ್ಪದ ದೇವಸ್ಥಾನದಲ್ಲಿ ಮಕರ ಜ್ಯೋತಿ ದರ್ಶನವಾಗಲಿದೆ. ಇಂದು ಸಂಜೆ 6.30 ರಿಂದ 7 ಗಂಟೆಯವರೆಗೆ ಮೂರು ಬಾರಿ ಮಕರ ಜ್ಯೋತಿ ದರ್ಶನವಾಗಲಿದೆ. ಅಯ್ಯಪ್ಪ ಜ್ಯೋತಿಯನ್ನು ಕಾಣಲು 4 ಲಕ್ಕಕ್ಕೂ ಹೆಚ್ಚು ಜನ ಭಕ್ತಾಧಿಗಳು ಅಯ್ಯಪ್ಪನ ಸನ್ನಿಧಾನದಲ್ಲಿ ಸೇರುತ್ತಾರೆ. ಮಕರ ಜ್ಯೋತಿ ದರ್ಶನಕ್ಕಾಗಿ ಈಗಾಗಲೇ ಭಕ್ತ ಸಾಗರವೇ ಶಬರಿಮಲೆಯದಲ್ಲಿ ಸೇರಿದೆ.












Click it and Unblock the Notifications