ಕರ್ನಾಟಕ ಬಿಜೆಪಿಗೆ ಸುರೇಶ್ ಕುಮಾರ್ ವಕ್ತಾರ

ಗುರುವಾರ ಈ ಕುರಿತು ಆದೇಶ ಹೊರಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಸುರೇಶ್‌ಕುಮಾರ್ ಅವರನ್ನು ರಾಜ್ಯ ಬಿಜೆಪಿ ವಕ್ತಾರರನ್ನಾಗಿ ನೇಮಿಸಿಲಾಗಿದೆ ಎಂದು ಹೇಳಿದ್ದಾರೆ. ಈ ನೇಮಕದಿಂದಾಗಿ ಬಿಜೆಪಿಗೆ ಇಬ್ಬರು ವಕ್ತಾರರು ನೇಮಕವಾದಂತಾಗಿದೆ.
ಕಳೆದ ವಾರ ಬಿಜೆಪಿ ಪ್ರಕಟಿಸಿದ್ದ ನೂತನ ಪದಾಧಿಕಾರಿಗಳ ಪಟ್ಟಿಯಲ್ಲಿ ವಿಧಾನಪರಿಷತ್ ಸದಸ್ಯ ಅಶ್ವಥ್‌ನಾರಾಯಣ ಅವರಿಗೆ ವಕ್ತಾರ ಸ್ಥಾನ ನೀಡಲಾಗಿತ್ತು. ಗುರುವಾರದ ಆದೇಶದ ನಂತರ ಅದರಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ರಾಜ್ಯ ಪದಾಧಿಕಾರಿಗಳ ಪಟ್ಟಿ ಮತ್ತು ಲೋಕಸಭಾ ಕ್ಷೇತ್ರಗಳ ಉಸ್ತುವಾರಿಗಳ ಪಟ್ಟಿಯಲ್ಲಿ ಸುರೇಶ್‌ಕುಮಾರ್ ಅವರನ್ನು ಸೇರಿಸಿರಲಿಲ್ಲ. ಈ ಕುರಿತು ಪಕ್ಷದ ಕೆಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದರಿಂದ ಅವರಿಗೆ ವಕ್ತಾರ ಸ್ಥಾನ ನೀಡಲಾಗಿದೆ.
ಅ.7 ಮತ್ತು 8ರಂದು ಸಭೆ : ಮುಂಬೈನಲ್ಲಿ ಅ.7 ಮತ್ತು 8ರಂದು ಬಿಜೆಪಿ ಕೋರ್ ಸಭೆ ನಡೆಯಲಿದೆ. ಅ.8ರಂದು ಕರ್ನಾಟಕ ಬಿಜೆಪಿ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಬಿಜೆಪಿ ಪ್ರಧಾನಿ ಅಭ್ಯರ್ಥಿ, ಗುಜರಾತ್ ಮುಖ್ಯಮಂತ್ರಿ ಸಹ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಲೋಕಸಭೆ ಚುನಾವಣೆಯ ತಯಾರಿ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ಬಿ.ಎಸ್.ಯಡಿಯೂರಪ್ಪ ಪಕ್ಷಕ್ಕೆ ಮರಳುವ ಕುರಿತು ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.
ಅಕ್ಟೋಬರ್ 30 ಅಥವ ನವೆಂಬರ್ 8 ಅಥವ 13ರಂದು ರಾಜ್ಯದಲ್ಲಿ ಬಿಜೆಪಿ ಅಧಿಕೃತವಾಗಿ ಲೋಕಸಭೆ ಚುನಾವಣೆ ಪ್ರಚಾರ ಕಾರ್ಯವನ್ನು ಆರಂಭಿಸಲಿದೆ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಎಲ್ಲಾ 28 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸಲಿದೆ ಎಂದು ಜೋಶಿ ತಿಳಿಸಿದ್ದಾರೆ.
ಯಡಿಯೂರಪ್ಪ ಬಗ್ಗೆ ಚರ್ಚೆ ಇಲ್ಲ : ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪಕ್ಷಕ್ಕೆ ಮರಳುವ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ರಾಜ್ಯ ಘಟಕ ಈ ಕುರಿತು ತನ್ನ ಅಂತಿಮ ತೀರ್ಮಾನವನ್ನು ರಾಷ್ಟ್ರ ನಾಯಕರಿಗೆ ತಿಳಿಸಿದ್ದೇವೆ. ಬಹಿರಂಗವಾಗಿ ಈ ಬಗ್ಗೆ ಚರ್ಚೆ ನಡೆಸುವುದಿಲ್ಲ ಎಂದರು.












Click it and Unblock the Notifications