ವಿಧಾನಸೌಧದ ಸಿಬ್ಬಂದಿಗೆ ಗ್ರಹಣದ ಭೀತಿ
ಬೆಂಗಳೂರು, ಡಿ. 26: ಶಕ್ತಿ ಕೇಂದ್ರ ವಿಧಾನಸೌಧಕ್ಕು ಇಂದಿನ ಕೇತುಗ್ರಸ್ತ ಸೂರ್ಯಗ್ರಹಣದ ಭೀತಿ ತಟ್ಟಿದೆ. ಇವತ್ತು ಬೆಳಗ್ಗೆ 8 ಗಂಟೆಯಿಂದ 11.05 ಗಂಟೆವರೆಗೆ ಸೂರ್ಯ ಗ್ರಹಣದ ಹಿನ್ನೆಲೆಯಲ್ಲಿ ವಿಧಾನಸೌಧವೂ ಖಾಲಿಯಾಗಿತ್ತು. ಗ್ರಹಣದ ಭೀತಿಯಿಂದ ಬಹುತೇಕ ಸಿಬ್ಬಂದಿ ವಿಧಾನಸೌಧಕ್ಕೆ ಬಂದಿರಲಿಲ್ಲ. ಹೀಗಾಗಿ ಬೆಳಗ್ಗೆ 11.30 ತನಕ ವಿಧಾನಸೌಧದ ಬಹುತೇಕ ಎಲ್ಲಾ ಕಚೇರಿಗಳು ಖಾಲಿಯಾಗಿದ್ದವು.
ವಿಧಾನಸೌಧ, ವಿಕಾಸಸೌಧದಲ್ಲಿ ಸಾಮಾನ್ಯವಾಗಿ ಬೆಳಗ್ಗೆಯಿಂದಲೇ ಜನಸಾಮಾನ್ಯರು ಹಾಗೂ ಸಿಬ್ಬಂದಿಯಿಂದ ತುಂಬಿರುತ್ತದೆ. ಆದರೆ ಇವತ್ತು ಮಾತ್ರ ಸಾರ್ವಜನಿಕರು, ಅಧಿಕಾರಿಗಳು ಹಾಗೂ ಸಿಬ್ಬಂದಿಯಿಲ್ಲದೆ ಬಿಕೋ ಎನ್ನುತ್ತಿತ್ತು.

ವಿಧಾನಸೌಧ ಹಾಗೂ ವಿಕಾಸಸೌಧದ ಪಾರ್ಕಿಂಗ್ ಪ್ರದೇಶ ಕಾರುಗಳಿಲ್ಲದೆ ಖಾಲಿ ಖಾಲಿಯಾಗಿದ್ದವು. ವಿಧಾನಸೌಧದ ಆವರಣದಲ್ಲಿ ವಾಹನಗಳ ಓಡಾಟವೂ ವಿರಳವಾಗಿತ್ತು. ಗ್ರಹಣ ಮುಗಿದ ಬಳಿಕ ನಿಧಾನವಾಗಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಶಕ್ತಿಸೌಧದಕ್ಕೆ ಬರಲು ಪ್ರಾರಂಭಿಸಿದರು. ಸುಮಾರು 12 ಗಂಟೆಗೆ ವಿಧಾನಸೌಧ ಕಾರಿಡಾರ್, ಪಾರ್ಕಿಂಗ್ ಗೆ ಎಂದಿನ ಕಳೆ ಬಂತು.











Click it and Unblock the Notifications