Arvind Limbavali Ticket Denied: ಮಾಜಿ ಸಚಿವ ಅರವಿಂದ ಲಿಂಬಾವಳಿಗೆ ಕೈತಪ್ಪಿದ ಬಿಜೆಪಿ ಟಿಕೆಟ್
ಬೆಂಗಳೂರು, ಏಪ್ರಿಲ್ 17: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ( Karnataka Assembly Elections 2023 ) ಬಿಜೆಪಿ ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. 10 ಅಭ್ಯರ್ಥಿಗಳನ್ನು ಘೋಷಿಸಿರುವ ಬಿಜೆಪಿ ( BJP ) ಎರಡು ಕ್ಷೇತ್ರಗಳಿಗೆ ಇನ್ನೂ ಟಿಕೆಟ್ ಘೋಷಿಸಿದ ಬಾಕಿ ಉಳಿಸಿಕೊಂಡಿದೆ.
ಈ ಪಟ್ಟಿಯಲ್ಲಿಯೂ ಬಿಜೆಪಿ ಹೊಸ ಮುಖಗಳಿಗೆ ಮಣೆ ಹಾಕಿದೆ. ತೀವ್ರ ಕುತೂಹಲ ಕೆರಳಿಸಿದ್ದ ಬೆಂಗಳೂರಿನ ಮಹದೇವಪುರ ಟಿಕೆಟ್ ಘೋಷಣೆಯಾಗಿದೆ. ಈ ಕ್ಷೇತ್ರದಲ್ಲಿ ಮಾಜಿ ಸಚಿವ, ಹಾಲಿ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿಗೆ ಟಿಕೆಟ್ ಕೈತಪ್ಪಿದೆ. ಆದರೆ, ಅವರ ಪತ್ನಿ ಮಂಜುಳಾ ಅರವಿಂದ ಲಿಂಬಾವಳಿ ಅವರಿಗೆ ಟಿಕೆಟ್ ನೀಡಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ 10 ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿಯನ್ನು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ನಿಂದ ಕಣಕ್ಕಿಳಿಸಿದೆ. ಇದು ಟಿಕೆಟ್ ನಿರಾಕರಿಸಿದ ನಂತರ ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಅನುಭವಿ ರಾಜಕಾರಣಿ ಜಗದೀಶ್ ಶೆಟ್ಟರ್ ಅವರ ಕ್ಷೇತ್ರವಾಗಿದೆ.
ಬಿಜೆಪಿಯ ಹಿರಿಯ ನಾಯಕ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಸೋಮವಾರ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿಗಳಾದ ಕೆ ಸಿ ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಶಾಸಕಾಂಗ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇತರರು ಶೆಟ್ಟರ್ ಅವರನ್ನು ಕಾಂಗ್ರೆಸ್‌ಗೆ ಬರಮಾಡಿಕೊಂಡರು.
ಆರು ಬಾರಿ ಶಾಸಕರಾಗಿದ್ದ ಶೆಟ್ಟರ್ ಅವರು ಈ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ ನಂತರ ಭಾನುವಾರ ಬಿಜೆಪಿಗೆ ರಾಜೀನಾಮೆ ನೀಡಿದ್ದರು. ಅವರು ಹುಬ್ಬಳ್ಳಿ-ಧಾರವಾಡ (ಕೇಂದ್ರ) ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದರು. ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಅವರ ವಿರುದ್ಧ ಮಹೇಶ್ ತೆಂಗಿನಕಾಯಿ ಅವರನ್ನು ಕಣಕ್ಕಿಳಿಸಿದೆ.
ಕಾಂಗ್ರೆಸ್ ಸೇರಿದ ನಂತರ ಶೆಟ್ಟರ್ ಅವರು ಟಿಕೆಟ್ ನಿರಾಕರಿಸುವ ಮೂಲಕ ಬಿಜೆಪಿ ಅವಮಾನ ಮಾಡಿದೆ ಎಂದು ಆರೋಪಿಸಿದ್ದಾರೆ.
224 ಸದಸ್ಯ ಬಲದ ವಿಧಾನಸಭೆಗೆ ಮೇ 10 ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ಇದುವರೆಗೆ 222 ಅಭ್ಯರ್ಥಿಗಳನ್ನು ಹೆಸರಿಸಿದೆ. ನಾಮಪತ್ರ ಸಲ್ಲಿಸಲು ಏಪ್ರಿಲ್ 20 ಕೊನೆಯ ದಿನವಾಗಿದೆ.












Click it and Unblock the Notifications