ಬೆಂಗಳೂರು ಮಳೆ: ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು, ಸೆಪ್ಟೆಂಬರ್‌ 06: ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಜನರ ಬದುಕು ನರಕ ಸದೃಶವಾಗಿದೆ. ಮುಖ್ಯಮಂತ್ರಿಗಳು ಮಾತ್ರ ಇದಕ್ಕೆಲ್ಲ ಹಿಂದಿನ ಸರ್ಕಾರಗಳು ಕಾರಣ ಎಂದು ಓಡಾಡುತ್ತಿದ್ದಾರೆ. ಸರ್ಕಾರ ಇಂತಹ ಬೇಜವಾಬ್ದಾರಿ ಆಡಳಿತವನ್ನು ನಿಲ್ಲಿಸಿ ನಾಗರಿಕರಿಗೆ ನೆಮ್ಮದಿ ನೀಡಬೇಕು ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಬೊಮ್ಮಾಯಿ ಬೆಂಗಳೂರಿನ ಮಳೆ ಅನಾಹುತಗಳಿಗೆ ಹಿಂದಿನ ಸರ್ಕಾರಗಳು ಕಾರಣ ಎಂದು ಪದೇ ಪದೇ ಹೇಳಿಕೆ ಕೊಡುತ್ತಿದ್ದಾರೆ. ಬೊಮ್ಮಾಯಿಯವರಿಗೆ ಕೆಲವೇ ಕೆಲವು ಅಂಶಗಳನ್ನು ನೆನಪಿಸಬಯಸುತ್ತೇನೆ.

ಎ. ಟಿ. ರಾಮಸ್ವಾಮಿಯವರು ಬೆಂಗಳೂರಿನಲ್ಲಿ 11,980 ಎಕರೆ ಭೂಮಿ ಒತ್ತುವರಿಯಾಗಿತ್ತು ಎಂದು ವರದಿ ನೀಡಿದ್ದರು. ಇದರಲ್ಲಿ 11,680 ಎಕರೆ ಭೂಮಿಯನ್ನು ನಮ್ಮ ಸರ್ಕಾರದ ಅವಧಿಯಲ್ಲಿ ತೆರವುಗೊಳಿಸಿದ್ದೆವು. ಎ. ಟಿ. ರಾಮಸ್ವಾಮಿಯವರು ಅತಿಕ್ರಮಣವಾಗಿದೆಯೆಂದು ಹೇಳಿದ ಜಾಗವನ್ನು ತೆರವುಗೊಳಿಸುವುದರ ಜೊತೆಗೆ 7 ಸಾವಿರ ಎಕರೆಗಳನ್ನು ಹೆಚ್ಚುವರಿಯಾಗಿ ತೆರವುಗೊಳಿಸಿದ್ದೆವು. ನಾವು ತೆರವುಗೊಳಿಸಿದ್ದ ಜಮೀನಿನ ಅಂದಾಜು ಮೌಲ್ಯ 4 ಲಕ್ಷ ಕೋಟಿ ರೂಪಾಯಿಗಳೆಂದು ಅಂದಾಜು ಮಾಡಲಾಗಿತ್ತು.

ಇಷ್ಟು ಮಾತ್ರವಲ್ಲ ಹಲವು ಸಂಘ ಸಂಸ್ಥೆಗಳಿಗೆ ನೀಡಿದ್ದ ಜಮೀನುಗಳ ಮಂಜೂರಾತಿ ನಿಯಮ ಉಲ್ಲಂಘಿಸಿದ್ದವರಿಂದಲೂ ಜಮೀನನ್ನು ವಾಪಸ್ಸು ಪಡೆದಿದ್ದೇವೆ. ಅಪೊಲೊ ಆಸ್ಪತ್ರೆಯಿಂದ 5 ಎಕರೆ, ರಾಷ್ಟ್ರೋತ್ಥಾನ ಪರಿಷತ್‍ನಿಂದ 10 ಎಕರೆ, ಮಿಥಿಕ್ ಸೊಸೈಟಿ ಸೇರಿದಂತೆ ಹಲವರಿಂದ ವಾಪಸ್ಸು ಪಡೆದಿದ್ದೆವು. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಗೋಮಾಳ, ಕೆರೆ, ಕಟ್ಟೆ, ಕುಂಟೆ, ಸರ್ಕಾರಿ ಖರಾಬು, ಗ್ರಾಮಠಾಣ, ಗುಂಡುತೋಪು, ಸ್ಮಶಾನ ಸೇರಿದಂತೆ ಸುಮಾರು 1.23 ಲಕ್ಷ ಎಕರೆ ಭೂಮಿ ಸರ್ಕಾರಕ್ಕೆ ಸೇರಿದ್ದಾಗಿದೆ ಎಂಬ ಮಾಹಿತಿಯನ್ನೂ ಮುಖ್ಯಮಂತ್ರಿಗಳ ಗಮನಕ್ಕೆ ತರಬಯಸುತ್ತೇನೆ.

ನಾವು ಒತ್ತುವರಿಯನ್ನು ಮಾತ್ರ ತೆರವುಗೊಳಿಸಿರಲಿಲ್ಲ. ಸರ್ಕಾರಕ್ಕೆ ಪಡೆದ ಜಮೀನನ್ನು ಸದುಪಯೋಗ ಪಡಿಸಿಕೊಳ್ಳಲು ಯೋಜಿಸಿದ್ದೆವು. ಬಡವರಿಗಾಗಿ 1 ಲಕ್ಷ ಮನೆ ಕಟ್ಟಲು 1500 ಎಕರೆ ಭೂಮಿಯನ್ನು ವಸತಿ ಇಲಾಖೆಗೆ ನೀಡಲಾಗಿತ್ತು. ಸೋಮಣ್ಣನವರು ಇತ್ತೀಚೆಗೆ ಹಾಗೆ ಯಾವುದೆ ಜಮೀನು ಕೊಟ್ಟಿರಲಿಲ್ಲ ಎಂದು ಹೇಳಿದ್ದರು. ಅವರೂ ಸಹ ದಾಖಲೆಗಳನ್ನು ತೆಗೆದು ನೋಡಲಿ, ವಾಸ್ತವಾಂಶ ಏನೆಂದು ಅರ್ಥವಾಗುತ್ತದೆ.

ಹಾಗೆಯೆ ಸರ್ಕಾರದಿಂದ 10 ಲಕ್ಷ ಸಸಿಗಳನ್ನು ನೆಡಲು ಬಿಬಿಎಂಪಿ, ಬಿಡಿಎಗಳಿಗೆ 1618 ಎಕರೆ ಜಮೀನನ್ನು ನೀಡಲಾಗಿತ್ತು. ಉಳಿದಂತೆ ವಿವಿಧ ಸಮುದಾಯಗಳಿಗೆ ಹಾಗೂ ಎಚ್ ಐ ವಿ ಪೀಡಿತರಿಗೆ ವಸತಿ ಕಲ್ಪಿಸಲು 300 ಎಕರೆ ಜಮೀನು ನೀಡಲಾಗಿತ್ತು. ಸಕಾರಿ ಆಸ್ಪತ್ರೆ, ಶಾಲೆ, ಕಾಲೇಜು, ಪೊಲೀಸ್ ಠಾಣೆಯಂತಹ ಸಾರ್ವಜನಿಕ ಉದ್ದೇಶಗಳಿಗೆ 3604 ಎಕರೆ ಭೂಮಿಯನ್ನು ನೀಡಲಾಗಿತ್ತು. ಉಳಿದ ಜಮೀನಿನಲ್ಲಿ ರಾಜಕಾಲುವೆ, ಕೆರೆ, ಕಟ್ಟೆ, ಅರಣ್ಯ ಮುಂತಾದವುಗಳಿದ್ದವು.

ನಮ್ಮ ಸರ್ಕಾರದ ಅವಧಿಯಲ್ಲಿ ಮುಲಾಜಿಲ್ಲದೆ ಒತ್ತುವರಿ ತೆರವುಗೊಳಿಸಿದ್ದೆವು. ಸೆಪ್ಟೆಂಬರ್ 26, 2014 ರಲ್ಲಿ ಒಂದೆ ದಿನ ಬಿದ್ದ ಮಳೆಯ ಪ್ರಮಾಣ 132 ಮಿ.ಮೀಟರುಗಳಷ್ಟಿತ್ತು. ಆದರೆ ಮೊನ್ನೆ ಭಾನುವಾರ ಬಿದ್ದ ಮಳೆಯ ಪ್ರಮಾಣ 131.6 ಮಿಮೀ ಮಾತ್ರ. ಆದರೂ ಬೆಂಗಳೂರಿನ ರಸ್ತೆಗಳಲ್ಲಿ ದೋಣಿಗಳನ್ನು ಓಡಾಡಿಸಬೇಕಾದ ಪರಿಸ್ಥಿತಿ ಬಂದಿತ್ತು. ಐ ಟಿ ಕಂಪೆನಿಗಳು ಸರ್ಕಾರಕ್ಕೆ ಪತ್ರ ಬರೆದು ವ್ಯವಸ್ಥೆ ಸರಿಪಡಿಸದಿದ್ದರೆ ಹೊರ ರಾಜ್ಯಗಳಿಗೆ ಹೋಗಬೇಕಾಗುತ್ತದೆ ಎಂದವು. ಸರ್ಕಾರದ ಆರೋಗ್ಯ ಸಚಿವರು ಪತ್ರ ಬರೆದ ಐಟಿ ಸಂಸ್ಥೆಗಳ ಮುಖ್ಯಸ್ಥರಿಗೆ ಧಮಕಿ ಹಾಕುವ ರೀತಿಯಲ್ಲಿ ಮಾತನಾಡಿದ್ದಾರೆ.

ಬಾಣಸವಾಡಿ ಕೆರೆಯ ಒತ್ತುವರಿ ತೆರವು ಮಾಡುವಾಗ ಸುರೇಶ್ ಕುಮಾರ್ ಅವರು ಏನು ಹೇಳಿದ್ದರು ಎಂದು ನೆನಪಿಸಿಕೊಳ್ಳಬೇಕು. ಅವರು " ಸರ್ಕಾರ ಹುಚ್ಚಾಟ ನಡೆಸುತ್ತಿದೆ, ಜನರು ಸರ್ಕಾರಕ್ಕೆ ತೆರಿಗೆ ಕಟ್ಟುತ್ತಿದ್ದಾರೆ, ಆದರೂ ಈ ರೀತಿ ಮಾಡಿರುವುದು ಸರಿಯಲ್ಲ" .ಸರ್ಕಾರ ಮನೆ ಒಡೆಯುವ ಪ್ರವೃತ್ತಿ ನಿಲ್ಲಿಸಬೇಕು" ಎಂದು ಹೇಳಿದ್ದರು ಪ್ರತಿಭಟನೆಯ ನೇತೃತ್ವವನ್ನು ಮಾಜಿ ಸಚಿವರಾದ ಸುರೇಶ್ ಕುಮಾರ್ ವಹಿಸಿಕೊಂಡಿದ್ದರು. ಅವರ ಜೊತೆಯಲ್ಲಿ ಹೆಬ್ಬಾಳದ ಶಾಸಕರಾಗಿದ್ದ ಜಗದೀಶ್ ಕುಮಾರ್ ಅವರೂ ಇದ್ದರು. ವಿಧಾನ ಪರಿಷತ್ ಸದಸ್ಯರುಗಳೂ ಇದ್ದರು.

ನಮ್ಮ ಸರ್ಕಾರವಿದ್ದಾಗ ಮುಂದೆ ಬಂದೊದಗುವ ಪರಿಣಾಮಗಳನ್ನು ಅಂದಾಜು ಮಾಡಿ ಒತ್ತುವರಿ ತೆರವು ಮಾಡುತ್ತಿದ್ದರೆ, ವಿರೋಧ ಪಕ್ಷದಲ್ಲಿದ್ದ ಬಿಜೆಪಿಯು ನಮ್ಮ ತೆರವು ಕಾರ್ಯಾಚರಣೆಯನ್ನು ವಿರೊಧ ಮಾಡುತ್ತಿತ್ತು. ಪರಿಸ್ಥಿತಿ ಹೀಗಿದ್ದರೂ, ಹಿಂದೆ ಮುಂದೆ ನೋಡದ, ಸಣ್ಣ ಮಾಹಿತಿಯನ್ನೂ ಇಟ್ಟುಕೊಳ್ಳದ ಬೊಮ್ಮಾಯಿಯವರು ಬೆಂಗಳೂರಿನ ಮಳೆ ಅನಾಹುತಗಳಿಗೆ ಹಿಂದಿನ ಸರ್ಕಾರಗಳು ಕಾರಣ ಎಂದು ಹೇಳುತ್ತಾರೆ.

ಹಾಗಿದ್ದರೆ ಬಿಜೆಪಿ ಸರ್ಕಾರ ಏನು ಮಾಡಿದೆ? ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ಒತ್ತುವರಿದಾರರಿಗೆ ಮಾರಾಟ ಮಾಡುವ ರಿಯಲ್ ಎಸ್ಟೇಟ್ ದಂಧೆಗೆ ಅನುಕೂಲ ಮಾಡಿಕೊಡುವ ಕಾನೂನನ್ನು ಇದೇ ಬಿಜೆಪಿ ಸರ್ಕಾರ ಜಾರಿಗೆ ತಂದಿದೆ. ಬೊಮ್ಮಾಯಿಯವರೂ ಅದರ ಭಾಗವಾಗಿದ್ದರು. ರೆವಿನ್ಯೂ ಲೇಔಟ್‍ಗಳಲ್ಲಿ ಅಕ್ರಮವಾಗಿ ನಿರ್ಮಿಸಿರುವ ನಿವೇಶನಗಳನ್ನು ಮುಕ್ತವಾಗಿ ಖಾತೆ ಮಾಡಿಕೊಡಲು ಬೊಮ್ಮಾಯಿಯವರ ಸರ್ಕಾರವೆ ಅವಕಾಶ ನೀಡಿದೆ. ಪ್ರತಿ ನಿವೇಶನವನ್ನು ನೋಂದಣಿ ಮಾಡುವಾಗ ಯಾರ್ಯಾರು ಎಷ್ಟೆಷ್ಟು ಕಮಿಷನ್ ತಿನ್ನುತ್ತಿದ್ದಾರೆ ಎಂಬ ಮಾಹಿತಿ ಈಗ ಎಲ್ಲರ ಬಳಿ ಇದೆ. ಅಕ್ರಮ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡಲು ಇದ್ದ ನಿರ್ಬಂಧವನ್ನು ಬೊಮ್ಮಾಯಿಯವರ ಸರ್ಕಾರವೆ ಸಂಪೂರ್ಣವಾಗಿ ತೆಗೆದು ಹಾಕಿದೆ.

ತಮ್ಮ ಕ್ಷೇತ್ರಗಳನ್ನು ಸರಿಪಡಿಸಿಕೊಳ್ಳಲು ಪ್ರಯತ್ನವೇನು

ತಮ್ಮ ಕ್ಷೇತ್ರಗಳನ್ನು ಸರಿಪಡಿಸಿಕೊಳ್ಳಲು ಪ್ರಯತ್ನವೇನು

ಈಗ ಜಲಾವೃತವಾಗಿರುವ ಮಹದೇವಪುರ, ಬೊಮ್ಮನಹಳ್ಳಿ, ಭಾಗಶಃ ತೊಂದರೆ ಅನುಭವಿಸುತ್ತಿರುವ ಕೆ. ಆರ್ ಪುರಂಗಳಲ್ಲಿ ಎಷ್ಟು ವರ್ಷಗಳಿಂದ ಯಾವ ಪಕ್ಷದ ಶಾಸಕರುಗಳು ಅಧಿಕಾರದಲ್ಲಿದ್ದಾರೆ ಎಂಬುದನ್ನು ನಾನು ಬೊಮ್ಮಾಯಿಯವರಿಗೆ ನೆನಪಿಸಬೇಕೆ?. ಬೊಮ್ಮನಹಳ್ಳಿಯ ಸತೀಶ್ ರೆಡ್ಡಿಯವರು ಎಷ್ಟು ವರ್ಷದಿಂದ ಬಿಜೆಪಿ ಶಾಸಕರು?. ಮಹದೇವಪುರದ ಅರವಿಂದ ಲಿಂಬಾವಳಿಯವರು ಎಷ್ಟು ವರ್ಷದಿಂದ ಮಹದೇವಪುರವನ್ನು ಬಿಜೆಪಿಯಿಂದ ಆಯ್ಕೆಯಾಗುತ್ತಿದ್ದಾರೆ? ಕೆ. ಆರ್. ಪುರಂನ ನಂದೀಶ್ ರೆಡ್ಡಿ ಯಾವ ಪಕ್ಷದವರಾಗಿದ್ದರು?. ಈಗಿರುವ ನಗರಾಭಿವೃದ್ಧಿ ಸಚಿವರಾದ ಬಸವರಾಜುರವರು ಯಾವ ಪಕ್ಷದಿಂದ ಆಯ್ಕೆಯಾಗಿದ್ದಾರೆ? ಇವರುಗಳೆಲ್ಲ ತಮ್ಮ ಕ್ಷೇತ್ರಗಳನ್ನು ಸರಿಪಡಿಸಿಕೊಳ್ಳಲು ಯಾವ ಪ್ರಯತ್ನ ಮಾಡಿದ್ದಾರೆ? ಎಂದು ಸಿದ್ದರಾಮಯ್ಯ ಕೇಳಿದ್ದಾರೆ.

 ಕಾನೂನುಗಳನ್ನು ಮನಸೋ ಇಚ್ಛೆ ಬದಲಾವಣೆ

ಕಾನೂನುಗಳನ್ನು ಮನಸೋ ಇಚ್ಛೆ ಬದಲಾವಣೆ

ಯಾವ ಮಾಹಿತಿಯೂ ಇಲ್ಲದೆ ಸುಳ್ಳು ಹೇಳಿಕೊಂಡು ಓಡಾಡಿದರೆ, ರಿಯಲ್ ಎಸ್ಟೇಟ್ ದಂಧೆಯವರಿಗಾಗಿ ಕಾನೂನುಗಳನ್ನು ಮನಸೋ ಇಚ್ಛೆ ಬದಲಾಯಿಸಿ ನಗರವನ್ನು ನರಕ ಮಾಡಿದ್ದರೆ ಅದಕ್ಕೆ ಕಾರಣ ಯಾರು? ಬೊಮ್ಮಾಯಿಯವರು ಮುಖ್ಯಮಂತ್ರಿಗಳಾದ ಮೇಲೆ ರಾಜ್ಯದ ಉಚ್ಛ ನ್ಯಾಯಾಲಯ ಕೇವಲ ರಸ್ತೆ ಗುಂಡಿ ಮುಚ್ಚುವಂತೆ ಎಷ್ಟು ಸಾರಿ ಛೀಮಾರಿ ಹಾಕಿದೆ ಎಂಬ ಲೆಕ್ಕ ಏನಾದರೂ ಮುಖ್ಯಮಂತ್ರಿಗಳಿಗೆ ಗೊತ್ತಿದೆಯಾ? ಅದನ್ನೂ ನಾನೇ ಹೇಳಬೇಕಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಬೆಂಗಳೂರಿಗರ ಕಷ್ಟವನ್ನು ಕೇಳುವವರು ಗತಿಯಿಲ್ಲ

ಬೆಂಗಳೂರಿಗರ ಕಷ್ಟವನ್ನು ಕೇಳುವವರು ಗತಿಯಿಲ್ಲ

ಬೆಂಗಳೂರು ಅಭಿವೃದ್ಧಿಗಾಗಿ ಈವರೆಗೂ ಒಬ್ಬ ಸ್ವತಂತ್ರ ಸಚಿವರನ್ನು ಬೊಮ್ಮಾಯಿ ಸರ್ಕಾರ ನೇಮಿಸಿಲ್ಲ. ಶಿಸ್ತಿನ ಪಕ್ಷವೆಂದು ಹೇಳಿಕೊಳ್ಳುವ ಬಿಜೆಪಿಯು ಬೆಂಗಳೂರು ನಗರಾಭಿವೃದ್ಧಿಗಾಗಿ ಒಬ್ಬ ಸಚಿವರನ್ನು ನೇಮಿಸಿದರೆ ಉಳಿದವರು ಕಿತ್ತಾಟಕ್ಕಿಳಿಯುತ್ತಾರೆ. ಅದನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಈ ಖಾತೆಯನ್ನು ಮುಖ್ಯಮಂತ್ರಿಗಳೇ ಇಟ್ಟುಕೊಂಡಿದ್ದಾರೆ. ಬೆಂಗಳೂರಿಗರ ಕಷ್ಟವನ್ನು ಕೇಳುವವರು ಗತಿಯಿಲ್ಲ. ಹಾಗಾಗಿ ಬಿಜೆಪಿಯ ಸನಾತನ ತಂತ್ರವಾದ ತಾನು ಚೆನ್ನಾಗಿ ತಿಂದು ಮೇಕೆ ಬಾಯಿಗೆ ಒರೆಸುವ ಕೋತಿಯ ತಂತ್ರವನ್ನು ಜನರು ಅರ್ಥಮಾಡಿಕೊಳ್ಳದಷ್ಟು ದಡ್ಡರೇನಲ್ಲ.

ಸಮಗ್ರ ವರದಿ ಬಿಡುಗಡೆ ಮಾಡಬೇಕು

ಸಮಗ್ರ ವರದಿ ಬಿಡುಗಡೆ ಮಾಡಬೇಕು

ಮುಖ್ಯ ಮಂತ್ರಿಗಳಿಗೆ ಧೈರ್ಯವಿದ್ದರೆ ಬೆಂಗಳೂರು ಅಭಿವೃದ್ಧಿಯ ಬಗ್ಗೆಯೆ ಅಧಿವೇಶನದಲ್ಲಿ ಪ್ರತ್ಯೇಕ ಚರ್ಚೆ ನಡೆಸಲಿ, ಜೊತೆಗೆ ಕಳೆದ 20 ವರ್ಷಗಳಲ್ಲಿ ಏನೇನಾಗಿದೆ ಎಂಬ ಕುರಿತು ಸಮಗ್ರ ವರದಿ ಬಿಡುಗಡೆ ಮಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ರಿಯಲ್ ಎಸ್ಟೇಟ್‍ನವರಿಗೆ ಅನುಕೂಲ ಮಾಡಿಕೊಡುವ ಕಾನೂನುಗಳನ್ನು ಹಿಂಪಡೆದು, ಸಮಸ್ಯೆಗಳು ಎಲ್ಲಿವೆ ಎಂದು ಪತ್ತೆ ಹಚ್ಚಿ ಜನಪರವಾಗಿ ಕೆಲಸ ಮಾಡಿ ನಗರದ ಜನರಿಗೆ ನೆಮ್ಮದಿ ನೀಡಬೇಕೆಂದು ಆಗ್ರಹಿಸುತ್ತೇನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+