ಮದುವೆ ಮುರಿದು ಬಿದ್ದಿದ್ದಕ್ಕೆ ಯುವತಿಗೆ ಗುಂಡಿಕ್ಕಿ, ಆತ್ಮಹತ್ಯೆಗೆ ಯತ್ನಿಸಿದ ಟೆಕ್ಕಿ
ಬೆಂಗಳೂರು, ಫೆಬ್ರವರಿ 26: ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಗುಂಡು ಹಾರಿಸಿ 25 ವರ್ಷದ ಯುವತಿಯ ಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟೆಕ್ಕಿಯನ್ನು ಬಂಧಿಸಲಾಗಿದೆ.
ಓಡಿಸಾ ಮೂಲದ 33 ವರ್ಷದ ಅಮರೇಂದ್ರ ಪಟ್ನಾಯಿಕ್ ಯುವತಿಗೆ ಗುಂಡು ಹಾರಿಸಿ ಪರಾರಿಯಾಗಿದ್ದ. ಆದರೆ, ಮಧ್ಯರಾತ್ರಿ ಮಾರತಹಳ್ಳಿ ಸೇತುವೆ ಬಳಿ ಪೊಲೀಸರು ಬಂಧಿಸಲು ತೆರಳಿದ್ದಾಗ ಅಮರೇಂದ್ರ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಸದ್ಯ ಆತನ ಪರಿಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ಸಾಗಿಸಲಾಗಿದೆ.
ಅಮರೇಂದ್ರ ಪಟ್ನಾಯಿಕ್ ಓಡಿಸಾದಲ್ಲಿ ಸಾಪ್ಟವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ, ಶುಭಶ್ರೀಯನ್ನು ಹತ್ಯೆ ಮಾಡಲು ಬೆಂಗಳೂರಿಗೆ ಬಂದಿದ್ದ. ಆತ್ಮಹತ್ಯೆಗೆ ಯತ್ನಿಸಿರುವ ಅಮರೇಂದ್ರ 17 ಪುಟಗಳ ಡೆತ್ ನೋಟ್ ಬರೆದಿದ್ದು, ಅದರಲ್ಲಿ ಕಳೆದ ಆರು ತಿಂಗಳಿನಿಂದ ಶುಭಶ್ರೀಯನ್ನು ಪ್ರೀತಿಸುತ್ತಿದ್ದೆ ಎಂದು ಬರೆದುಕೊಂಡಿದ್ದಾನೆ.

ಅಮರೇಂದ್ರನ ಮದುವೆ ಮುರಿದು ಬಿದ್ದಿತ್ತು
ಕಳೆದ ಆರು ತಿಂಗಳಿನಿಂದ ಶುಭಶ್ರೀ ಹಾಗೂ ಅಮರೇಂದ್ರ ಪ್ರೀತಿಸುತ್ತಿದ್ದರು. ಆದರೆ, ಅಮರೇಂದ್ರನಿಗೆ ಮನೆಯಲ್ಲಿ ಬೇರೆ ಹುಡುಗಿಯನ್ನು ನೋಡಿ ಮದುವೆ ನಿಶ್ಚಯ ಮಾಡಿದ್ದರು. ಇದರಿಂದ ಕುಪಿತಗೊಂಡಿದ್ದ ಶುಭಶ್ರೀ ಅಮರೇಂದ್ರನ ಜೊತೆ ಇರುವ ಪೋಟೊವನ್ನು ಅಮರೇಂದ್ರನಿಗೆ ನಿಶ್ಚಯವಾಗಿದ್ದ ಹುಡುಗಿ ಮನೆಯವರಿಗೆ ಕಳಿಸಿದ್ದಳಂತೆ. ಹೀಗಾಗಿ ಅಮರೇಂದ್ರನ ಮದುವೆ ಮುರಿದು ಬಿದ್ದಿತ್ತು. ಇದರಿಂದ ಆಕ್ರೋಶಗೊಂಡಿದ್ದ ಅಮರೇಂದ್ರ ಶುಭಶ್ರೀಯನ್ನು ಹತ್ಯೆ ಮಾಡಲು ಮುಂದಾಗಿದ್ದ ಎಂದು ಡೆತ್ ನೋಟ್ ಉಲ್ಲೇಖಿಸಿ ಹೇಳಲಾಗಿದೆ.

ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ
ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ನಡೆದಿದ್ದ ಈ ಘಟನೆ ತಲ್ಲಣ ಸೃಷ್ಠಿಸಿತ್ತು. ಸಿಸಿಟಿವಿ ದೃಶ್ಯಾವಳಿಗಳನ್ನು ಆದರಿಸಿ ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅನುಚೇತ್ ಅವರು ಆರೋಪಿಯನ್ನು ಬಂಧಿಸಲು ಎರಡು ತಂಡಗಳನ್ನು ರಚಿಸಿದ್ದರು. ಮಧ್ಯರಾತ್ರಿ 2;30 ರ ಸುಮಾರು ಆರೋಪಿ ಮಾರತಹಳ್ಳಿ ಸೇತುವೆ ಬಳಿ ಇರುವುದನ್ನು ಖಚಿತಪಡಿಸಿಕೊಂಡು ಪೊಲೀಸರು ಅಲ್ಲಿಗೆ ಹೋದಾಗ ಅಮರೇಂದ್ರ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಎಂಬುದಾಗಿ ತಿಳಿದು ಬಂದಿದೆ.

ಒಂದು ಸುತ್ತಿನ ಗುಂಡಿನ ದಾಳಿ
ಮಾರತ್‌ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮಂಜುನಾಥ ಬಡಾವಣೆಯ ಮುನ್ನೇನ ಕೋಳಾಲದಲ್ಲಿ ಒಡಿಶಾದ ಮೂಲದ ಶುಭಶ್ರೀ ಮೇಲೆ ನಾಡ ಪಿಸ್ತೂಲಿನಿಂದ ಅಮರೇಂದ್ರ ಒಂದು ಸುತ್ತಿನ ಗುಂಡಿನ ದಾಳಿ ನಡೆಸಿದ್ದ. ತೀವ್ರವಾಗಿ ಗಾಯಗೊಂಡಿರುವ ಶುಭಶ್ರೀಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಿ.ಜಿ ಮುಂಭಾಗದಲ್ಲೇ
ಯುವತಿ ಶುಭಶ್ರೀ ನಿಮ್ಹಾನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಎರಡು ವರ್ಷಗಳಿಂದ ನಗರದಲ್ಲಿದ್ದಾರೆ. ಇವರು ತಂಗಿರುವ ಪೇಯಿಂಗ್ ಗೆಸ್ಟ್ ಪಿ.ಜಿ ಮುಂಭಾಗದಲ್ಲೇ ಸಂಜೆ 6 ಗಂಟೆಗೆ ಈ ಘಟನೆ ನಡೆದಿತ್ತು. 7.65ಎಂ.ಎಂ ನಾಡ ಪಿಸ್ತೂಲ್‌ನಿಂದ ಆರೋಪಿ ಒಂದು ಸುತ್ತು ಗುಂಡು ಹಾರಿಸಿದ್ದ.











Click it and Unblock the Notifications