ಶಿವಾಜಿನಗರ: ರಿಜ್ವಾನ್ ಅರ್ಷದ್ ಗೆ ಕಾಂಗ್ರೆಸ್ ಮುಖಂಡರಿಂದಲೇ ವಿರೋಧ
ಬೆಂಗಳೂರು, ನವೆಂಬರ್ 18: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಿವಾಜಿನಗರವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದ್ದ ಕಾಂಗ್ರೆಸ್ ಈ ಬಾರಿ ಉಪಚುನಾವಣೆಯಲ್ಲಿ ತಪ್ಪು ಹೆಜ್ಜೆ ಇಟ್ಟಿದೆಯೆಂಬ ಅನುಮಾನ ಮೂಡುತ್ತಿದೆ.
ರೋಷನ್ ಬೇಗ್ ರಾಜೀನಾಮೆಯಿಂದಾಗಿ ತೆರವಾಗಿರುವ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಶಿವಾಜಿನಗರ ಕ್ಷೇತ್ರಕ್ಕೆ ಸುಮಾರು ಇಪ್ಪತ್ತು ಜನರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿದ್ದರು. ಆದರೆ ಇವರ ನಡುವೆ ರಿಜ್ವಾನ್ ಅರ್ಷದ್‌ಗೆ ಟಿಕೆಟ್ ನೀಡಲಾಗಿದೆ.
ರಿಜ್ವಾನ್ ಅರ್ಷದ್ ಗೆ ಶಿವಾಜಿನಗರ ಉಪಚುನಾವಣೆ ಟಿಕೆಟ್ ನೀಡಿರುವುದು ಕ್ಷೇತ್ರದ ಕಾಂಗ್ರೆಸ್ ಮುಖಂಡರಲ್ಲಿ ಅಸಮಾಧಾನ ಮೂಡಿಸಿದ್ದು, ರಿಜ್ವಾನ್ ಅರ್ಷದ್‌ಗೆ ವಿರುದ್ಧ ಅಸಹಕಾರ ಪ್ರತಿಭಟನೆ ಆರಂಭಿಸಿದ್ದಾರೆ.
ಇಂದು ರಿಜ್ವಾನ್ ಅರ್ಷದ್ ಅವರು ಉಪಚುನಾವಣೆಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೆ ಯಾವೊಬ್ಬ ಸ್ಥಳೀಯ ಕಾಂಗ್ರೆಸ್ ಮುಖಂಡರೂ ಸಹ ಆಗಮಿಸಿರಲಿಲ್ಲ. ನಾಮಪತ್ರ ಸಲ್ಲಿಕೆಗೆ ಆಹ್ವಾನಿಸಿದಾಗಲೂ ಸಹ 'ನಿಮಗೆ ಟಿಕೆಟ್ ಕೊಟ್ಟವರನ್ನೇ ಕರೆದುಕೊಂಡು ಹೋಗಿ' ಎಂಬ ಉತ್ತರ ಸ್ಥಳೀಯ ಕಾಂಗ್ರೆಸ್ ಮುಖಂಡರಿಂದ ಬಂದಿದೆ. ಇದು ರಿಜ್ವಾನ್ ಅರ್ಷದ್ ಗೆ ತೀವ್ರ ನಿರಾಸೆ ಉಂಟು ಮಾಡಿದೆ.

ಕೇವಲ ಮೂವರು ಮುಖಂಡರೊಂದಿಗೆ ನಾಮಪತ್ರ ಸಲ್ಲಿಕೆ
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್, ಐವಾನ್ ಡಿಸೋಜ ಮಾತ್ರವೇ ರಿಜ್ವಾನ್ ಅರ್ಷದ್ ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದರು. ಇದು ಶಿವಾಜಿನಗರ ಕ್ಷೇತ್ರದಲ್ಲಿನ ಕಾಂಗ್ರೆಸ್ ಹುಳಕನ್ನು ಜಗಜ್ಜಾಹೀರು ಮಾಡಿದೆ.

ಲೋಕಸಭೆ ಚುನಾವಣೆಯಲ್ಲೂ ಸೋತಿದ್ದ ರಿಜ್ವಾನ್ ಅರ್ಷದ್
ಏಪ್ರಿಲ್-ಮೇ ತಿಂಗಳಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿಯೂ ರಿಜ್ವಾನ್ ಅರ್ಷದ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಅವರು ಬೆಂಗಳೂರು ಸೆಂಟ್ರಲ್ ನಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು. ಹಾಗಾಗಿ ಅವರಿಗೆ ಮತ್ತೊಮ್ಮೆ ಅವಕಾಶ ನೀಡುವ ಕುರಿತು ಶಿವಾಜಿನಗರ ಕ್ಷೇತ್ರದ ಕಾಂಗ್ರೆಸ್ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಇದನ್ನು ಲೆಕ್ಕಿಸದೇ ಕಾಂಗ್ರೆಸ್ ಪಕ್ಷ ರಿಜ್ವಾನ್ ಅರ್ಷದ್‌ಗೆ ಟಿಕೆಟ್ ನೀಡಿದೆ.

ರಿಜ್ವಾನ್ ಅರ್ಷದ್ ಗೆ ಬೆಂಬಲಿಸೆ ಎಂದಿದ್ದ ರೋಷನ್ ಬೇಗ್
'ರಿಜ್ವಾನ್ ಅರ್ಷದ್ ಹೊರತುಪಡಿಸಿ ಇನ್ಯಾರಿಗೆ ಕಾಂಗ್ರೆಸ್ ಟಿಕೆಟ್ ನೀಡಿದರೂ ನಾನು ಅವರಿಗೆ ಬೆಂಬಲ ನೀಡುತ್ತೇನೆ' ಎಂದು ಕೆಲವು ದಿನಗಳ ಹಿಂದಷ್ಟೆ ಅನರ್ಹ ಶಾಸಕ ರೋಷನ್ ಬೇಗ್ ಹೇಳಿದ್ದರು. ಅದಾಗ್ಯೂ ಕಾಂಗ್ರೆಸ್ ಪಕ್ಷ ರಿಜ್ವಾನ್ ಗೆ ಮಣೆ ಹಾಕಿದೆ. ಇದರ ಹಿಂದೆ ಸಿದ್ದರಾಮಯ್ಯ ಕೈವಾಡ ಇದೆ ಎನ್ನಲಾಗುತ್ತಿದೆ.

ಸ್ಥಳೀಯ ಮುಖಂಡರ ಮೊಬೈಲ್ ಸ್ವಿಚ್ ಆಫ್
ಸ್ಥಳೀಯ ಕಾರ್ಪೊರೇಟರ್‌ಗಳು, ಮುಖಂಡರು ತಮ್ಮ ಮೊಬೈಲ್ ಗಳನ್ನು ಸ್ವಿಚ್ ಆಫ್ ಮಾಡಿದ್ದು, ರಿಜ್ವಾನ್ ಅರ್ಷದ್ ಪರ ಪ್ರಚಾರಕ್ಕೆ ಬರಲು ಒಲ್ಲೆ ಎಂದಿದ್ದಾರೆ. ಹೀಗಾಗಿಯೇ ಇಂದು ನಡೆಯಬೇಕಿದ್ದ ಬೃಹತ್ ಮೆರವಣಿಗೆಯನ್ನು ಸಹ ಜನರಿಲ್ಲದ ಕಾರಣ ರದ್ದು ಮಾಡಲಾಗಿದೆ.

ಕಳೆದ ಬಾರಿ ಗೆದ್ದಿದ್ದ ಕಾಂಗ್ರೆಸ್
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದ ಶಿವಾಜಿನಗರ ಕ್ಷೇತ್ರವನ್ನು ರಿಜ್ವಾನ್ ಗೆ ಟಿಕೆಟ್ ನೀಡುವ ಮೂಲಕ ಕಳೆದುಕೊಳ್ಳಲಿದೆಯೇ ಎಂಬ ಅನುಮಾನ ಮೂಡಿದೆ. ಈ ನಡುವೆ ಶರವಣಗೆ ಟಿಕೆಟ್ ನೀಡಿರುವ ಬಿಜೆಪಿ ಹೆಚ್ಚಿನ ಹುರುಪಿನಿಂದ ಪ್ರಚಾರ ಆರಂಭಿಸಿದೆ.












Click it and Unblock the Notifications