ಭದ್ರತಾ ಸಿಬ್ಬಂದಿ ನೇಮಿಸಿ, ಇಲ್ಲ ಎಟಿಎಂ ಮುಚ್ಚಿ

ಜ್ಯೋತಿ ಉದಯ್ ಅವರ ಮೇಲೆ ನಡೆದ ಹಲ್ಲೆ ಪ್ರಕರಣದ ನಂತರ ಎಟಿಎಂಗಳಲ್ಲಿ ಕೈಗೊಳ್ಳಬೇಕಾದ ಭದ್ರತಾ ಕ್ರಮಗಳ ಕುರಿತು ಚರ್ಚಿಸಲು ಗೃಹ ಸಚಿವ ಕೆ.ಜೆ.ಜಾರ್ಜ್, ಬುಧವಾರ ವಿಧಾನಸೌಧದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು. ಸಭೆಯ ನಂತರ ಮಾತನಾಡಿದ ಅವರು, ಎಟಿಎಂ ಕೇಂದ್ರಗಳಿಗೆ ಭದ್ರತಾ ಸಿಬ್ಬಂದಿ ನಿಯೋಜನೆ ಕಡ್ಡಾಯಗೊಳಿಸಲಾಗುವುದು ಎಂದು ಹೇಳಿದರು.
ಎಲ್ಲಾ ಬ್ಯಾಂಕ್ ಗಳು ಎಟಿಎಂ ಕೇಂದ್ರಗಳಿಗೆ ಸೆಕ್ಯೂರಿಟಿ ಗಾರ್ಡ್ ನೇಮಕ ಮಾಡಬೇಕು. ಅದಕ್ಕಾಗಿ ಅವರಿಗೆ 3 ದಿನಗಳ ಗಡುವು ನೀಡಲಾಗುವುದು. ನಂತರ ಭದ್ರತಾ ಸಿಬ್ಬಂದಿ ಇಲ್ಲದ ಎಟಿಎಂ ಕೇಂದ್ರಗಳನ್ನು ಮುಚ್ಚಲು ಸೂಚನೆ ನೀಡಲಾಗುವುದು ಎಂದು ಜಾರ್ಜ್ ಹೇಳಿದರು. ಬೆಂಗಳೂರು ನಗರದಲ್ಲಿ 2500 ಎಟಿಎಂ ಕೇಂದ್ರಗಳಿದ್ದು, 600 ಎಟಿಎಂಗಳಿಗೆ ಭದ್ರತಾ ಸಿಬ್ಬಂದಿ ಇಲ್ಲ ಎಂದು ಅವರು ಮಾಹಿತಿ ನೀಡಿದರು.
ಎಟಿಎಂ ಕೇಂದ್ರಗಳಿಗೆ ತರಬೇತಿ ಪಡೆದ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಬೇಕು. ಬ್ಯಾಂಕ್ ಗಳು ಎಟಿಎಂ ಸ್ಥಾಪನೆ ಮಾಡುವ ಮುನ್ನ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ಸಚಿವರು ಹೇಳಿದರು.
ಕಾಲ-ಕಾಲಕ್ಕೆ ಎಟಿಎಂ ಕೇಂದ್ರಗಳ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುವಂತೆ ಸಮೀಪದ ಪೊಲೀಸ್ ಠಾಣೆಗಳಿಗೆ ಸೂಚಿಸಲಾಗುವುದು. ಎಟಿಎಂ ಕೇಂದ್ರಗಳಿಗೆ ಹೊಸ ನಿಯಮ ಜಾರಿಗೆ ತರಲು ವಿಶೇಷ ನಿಯಮ ಪೊಲೀಸ್ ಜಾರಿಗೆ ತರಲಾಗುವುದು ಎಂದು ತಿಳಿಸಿದರು. ( ಜ್ಯೋತಿ ಉದಯ್ ಆರೋಗ್ಯದಲ್ಲಿ ಚೇತರಿಕೆ)












Click it and Unblock the Notifications