"ಪಾದರಾಯನಪುರ ದಾಂಧಲೆ ಯಾರೇ ಕುಮ್ಮಕ್ಕು ಕೊಟ್ಟರೂ ಬಿಡಲ್ಲ"- ಬೊಮ್ಮಾಯಿ
ಬೆಂಗಳೂರು, ಏಪ್ರಿಲ್.20: ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ವಾರಿಯರ್ಸ್ ಮೇಲೆ ಹಲ್ಲೆಗೆ ಯತ್ನಿಸಿದವರನ್ನು ಹಾಗೂ ಪಾದರಾಯನಪುರದಲ್ಲಿ ನಡೆದ ದಾಂಧಲೆಗೆ ಕುಮ್ಮಕ್ಕು ನೀಡಿದವರ ವಿರುದ್ಧವೂ ಶಿಸ್ತುಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ನಿನ್ನೆ ರಾತ್ರಿ ದಾಂಧಲೆ ನಡೆದ ಬೆಂಗಳೂರಿನ ಪಾದರಾಯನಪುರಕ್ಕೆ ಸಚಿವ ಬಸವರಾಜ್ ಬೊಮ್ಮಾಯಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಹಿರಿಯ ಅಧಿಕಾರಿಗಳನ್ನು ತೆಗೆದುಕೊಂಡ ಸಚಿವರು ತಪ್ಪಿತಸ್ಥರನ್ನು ಬಂಧಿಸುವಂತೆ ಸೂಚನೆ ನೀಡಿದರು.
ಪಾದರಾಯನಪುರ ದಾಂಧಲೆಗೆ ಸಂಬಂಧಿಸಿದಂತೆ ಇದುವರೆಗೂ 54 ಜನರನ್ನು ಬಂಧಿಸಿದ್ದು ಕಠಿಣ ಕಾನೂನಿನ ಅಡಿಯಲ್ಲಿ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗುತ್ತದೆ. ಇದರ ಜೊತೆಗೆ ಯಾರೆಲ್ಲಾ ದಾಂಧಲೆಯಲ್ಲಿ ಭಾಗಿಯಾಗಿದ್ದರೋ ಎಲ್ಲರನ್ನು ಬಂಧಿಸಲಾಗುತ್ತದೆ ಎಂದು ತಿಳಿಸಿದರು.

ಪೊಲೀಸರ ಕಾರ್ಯಾಚರಣೆಯನ್ನು ತೋರಿಸ್ತೀವಿ
ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ದಾಂಧಲೆ ಹಿನ್ನೆಲೆ ಇಡೀ ರಾಜ್ಯಕ್ಕೆ ಪೊಲೀಸ್ ಕಾರ್ಯಾಚರಣೆ ಹೇಗಿರುತ್ತದೆ. ಕಂಟೋನ್ ಮೆಂಟ್ ಎಂದರೇನು, ಪೊಲೀಸರ ಕ್ರಮ ಹೇಗೆ ಇರುತ್ತದೆ ಎಂದು ರಾಜ್ಯಕ್ಕೆ ಮಾದರಿಯಾಗುವಂತೆ ತೋರಿಸುತ್ತೀವಿ ಎಂದು ಎಚ್ಚರಿಕೆ ನೀಡಿದ್ದಾರೆ.

ಸಾವಿನ ನಡುವೆಯೇ ಪಾದರಾಯನಪುರದಲ್ಲಿ ದಾಂಧಲೆ
ನಿನ್ನೆಯೇ ಬೆಂಗಳೂರಿನ ಪಾದರಾಯನಪುರದಲ್ಲಿ ವ್ಯಕ್ತಿಯೊಬ್ಬರು ಪ್ರಾಣ ಬಿಟ್ಟಿದ್ದರು. ಅವರ ಸಾವಿಗೆ ಏನು ಕಾರಣ ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ, ಅದಾಗಿ ಕೆಲವು ಗಂಟೆಗಳ ನಂತರದಲ್ಲೇ ಈ ದಾಂಧಲೆ ನಡೆದಿದೆ ಎಂದು ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

39 ಮಂದಿಗೆ ದಿಗ್ಬಂಧನ ವಿಧಿಸುವುದ ಬಾಕಿ ಉಳಿದಿದೆ
ಇನ್ನು, ಪಾದರಾಯನಪುರದಲ್ಲಿ ಕೊರೊನಾ ವೈರಸ್ ಸೋಂಕಿತರ ಜೊತೆ ದ್ವಿತೀಯ ಸಂಪರ್ಕದಲ್ಲಿ ಇರುವ 58 ಜನರನ್ನು ದಿಗ್ಬಂಧನದಲ್ಲಿ ಇರಿಸಲಾಗಿತ್ತು. ಈ ಪೈಕಿ 19 ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಉಳಿದ 39 ಜನರನ್ನು ಬೇರೆಡೆಗೆ ಸ್ಥಳಾಂತರಿಸಲು ತೆರಳಿದಾಗ ಈ ದಾಂಧಲೆ ನಡೆದಿದೆ. ಈಗ ಬಾಕಿ ಉಳಿದಿರುವ 39 ಜನರು ತಾವಾಗಿಯೇ ಮುಂದೆ ಬರಬೇಕು. ಇಲ್ಲದಿದ್ದರೆ ಕಾನೂನು ಪ್ರಕಾರ ಶಿಸ್ತುಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಯುದ್ಧದ ಸಮಯವನ್ನು ಸಮರ್ಥವಾಗಿ ಎದುರಿಸಿ
ಕರ್ನಾಟಕದ ಪಾಲಿಗೆ ಇದು ಯುದ್ಧದ ಸಮಯವಾಗಿದೆ. ಸರ್ಕಾರ ಮತ್ತು ಸರ್ಕಾರದ ಕಾರ್ಯಕ್ರಮ ಹಾಗೂ ಸರ್ಕಾರಿ ಅಧಿಕಾರಿಗಳ ವಿರುದ್ಧ ಪುಂಡಾಟವನ್ನು ತೋರಿದರೆ ಮುಲಾಜಿಲ್ಲದೇ ಶಿಸ್ತುಕ್ರಮ ತೆಗೆದುಕೊಳ್ಳಲಾಗುತ್ತದೆ. ಪಾದರಾಯನಪುರ ದಾಂಧಲೆ ಕುರಿತು ತನಿಖೆ ನಡೆಸುವುದಕ್ಕಾಗಿ ಸೌಮೇಂದ್ರ ಮುಖರ್ಜಿ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಲಾಗಿದೆ ಎಂದು ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.

"ಪುಡಿ ನಾಯಕರಿಂದಲೇ ಪಾದರಾಯನಪುರದಲ್ಲಿ ದಾಂಧಲೆ"
ಸರ್ಕಾರದ ತದ್ವಿರುದ್ಧವಾಗಿ ನಡೆದುಕೊಳ್ಳುವುದೇ ಇಲ್ಲಿನ ಕೆಲವು ನಾಯಕರ ಉದ್ದೇಶವಾಗಿದೆ. ಪುಡಿ ನಾಯಕರಿಗೆ ರಾಜಕೀಯ ರಕ್ಷಣೆ ಸಿಗುತ್ತದೆ ಎಂಬ ಮನೋಭಾವದಲ್ಲಿ ಕಾನೂನನ್ನು ಉಲ್ಲಂಘನೆ ಮಾಡುವುದಕ್ಕಾಗಿ ಈ ರೀತಿ ಕೃತ್ಯ ಎಸಗಲು ಪ್ಲಾನ್ ಮಾಡಿದ್ದಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಆರೋಪಿಸಿದ್ದಾರೆ. ಅಲ್ಲದೇ ಪಾದರಾಯನಪುರ, ಬಾಪೂಜಿನಗರ, ಟಿಪ್ಪು ನಗರ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸಲಾಗುತ್ತದೆ ಎಂದು ತಿಳಿಸಿದ್ದಾರೆ.












Click it and Unblock the Notifications