Sanchari Cauvery: ಬೆಂಗಳೂರು ಅಪಾರ್ಟ್‌ಮೆಂಟ್, ಸಂಸ್ಥೆ, ವಾಣಿಜ್ಯ ಸಂಕೀರ್ಣಗಳಿಗೆ ಜಲಮಂಡಳಿ ಗುಡ್‌ನ್ಯೂಸ್
ಬೆಂಗಳೂರು: ರಾಜಧಾನಿ ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಹೊಸ ವ್ಯವಸ್ಥೆ ರೂಪಿಸಿದೆ. ಇನ್ನೂ ಅಪಾರ್ಟ್‌ಮೆಂಟ್ ಎಸ್‌ಟಿಪಿ ಸಂಸ್ಕರಿತ ನೀರನ್ನು ಸಮೀಪದ ಕೈಗಾರಿಕೆ, ಶಿಕ್ಷಣ ಸಂಸ್ಥೆ ಹಾಗೂ ವಾಣಿಜ್ಯ ಸಂಕೀರ್ಣಗಳಿಗೆ ಪೂರೈಸಲು ಮಹತ್ವದ ನಿರ್ಧಾರ ಕೈಗೊಂಡಿದೆ.
ಬೆಂಗಳೂರು ನಗರದ ಅಪಾರ್ಟ್‌ಮೆಂಟ್‌ಗಳಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆಯನ್ನು ಮತ್ತಷ್ಟು ಸುಗಮಗೊಳಿಸುವ ನಿಟ್ಟಿನಲ್ಲಿ 'ಸಂಚಾರಿ ಕಾವೇರಿ' (ಮೊಬೈಲ್ ಕುಡಿಯುವ ನೀರು ಸರಬರಾಜು) ಸೇವೆಗೆ ದೀರ್ಘಾವಧಿ ನೀರು ಪೂರೈಕೆ ಒಪ್ಪಂದ ವ್ಯವಸ್ಥೆ ರೂಪಿಸುವಂತೆ ಬೆಂಗಳೂರು ಜಲಮಂಡಳಿ ಅಧ್ಯಕ್ಷೆ ಡಾ. ಎನ್. ಮಂಜುಳ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಮಂಗಳವಾರ ಬೆಂಗಳೂರು ಅಪಾರ್ಟ್‌ಮೆಂಟ್ಸ್ ಫೆಡರೇಶನ್ (BAF) ಪ್ರತಿನಿಧಿಗಳ ಜೊತೆಗಿನ ಸಭೆಯಲ್ಲಿ ನೀರು ಪೂರೈಕೆ, ಸಂಸ್ಕರಿತ ನೀರಿನ ಮರುಬಳಕೆ ಹಾಗೂ ಅಪಾರ್ಟ್‌ಮೆಂಟ್‌ಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಸಮಗ್ರವಾಗಿ ಚರ್ಚಿಸಿದರು.
ಸಭೆಯಲ್ಲಿ ಬೆಂಗಳೂರು ನಗರದ ಪೂರ್ವ ಭಾಗದಲ್ಲಿ ಖಾಸಗಿ ನೀರಿನ ಟ್ಯಾಂಕರ್‌ಗಳು ನೀರಿನ ದರವನ್ನು ಏರಿಕೆ ಮಾಡುತ್ತಿರುವುದಲ್ಲದೆ, ಅಪಾರ್ಟ್‌ಮೆಂಟ್‌ಗಳಿಂದ ದೀರ್ಘಾವಧಿಯ ಒಪ್ಪಂದಗಳಿಗೆ ಒತ್ತಡ ಹೇರುತ್ತಿರುವ ಬಗ್ಗೆ ಬೆಂಗಳೂರು ಅಪಾರ್ಟ್‌ಮೆಂಟ್ಸ್ ಫೆಡರೇಶನ್ ಪ್ರತಿನಿಧಿಗಳು ಅಧ್ಯಕ್ಷರ ಗಮನಕ್ಕೆ ತಂದರು.
ಪ್ರಸ್ತುತ ಜಲಮಂಡಳಿಯ 'ಸಂಚಾರಿ ಕಾವೇರಿ' ಸೇವೆಯಡಿ ಬೃಹತ್ ನೀರು ಬಳಕೆದಾರರು ಪ್ರತಿದಿನ ಪ್ರತ್ಯೇಕವಾಗಿ ನೀರು ಬುಕ್ ಮಾಡಬೇಕಾಗಿರುವುದರಿಂದ, ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಅನಾನುಕೂಲ ಉಂಟಾಗುತ್ತಿದೆ ಎಂದು ಅವರು ವಿವರಿಸಿದರು.
ನೀರು ಪೂರೈಕೆ ಕರಡು ಒಪ್ಪಂದಕ್ಕೆ ಸೂಚನೆ
ಈ ಹಿನ್ನೆಲೆಯಲ್ಲಿ, ಅಪಾರ್ಟ್‌ಮೆಂಟ್‌ಗಳಿಗೆ ಜಲಮಂಡಳಿಯಿಂದ ದೀರ್ಘಾವಧಿ ನೀರು ಪೂರೈಕೆ ಒಪ್ಪಂದದ ವ್ಯವಸ್ಥೆ ಕಲ್ಪಿಸುವ ಕುರಿತು ಅಗತ್ಯ ಕರಡು ಒಪ್ಪಂದ (MoU) ಸಿದ್ಧಪಡಿಸುವಂತೆ ಅಧ್ಯಕ್ಷೆ ಡಾ. ಎನ್. ಮಂಜುಳಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇದರಿಂದ ಅಪಾರ್ಟ್‌ಮೆಂಟ್‌ಗಳಿಗೆ ನಿರಂತರ ಹಾಗೂ ವಿಶ್ವಾಸಾರ್ಹ ರೀತಿಯಲ್ಲಿ ಶುದ್ಧ ಕುಡಿಯುವ ನೀರನ್ನು ಪೂರೈಸಲು ಸಾಧ್ಯವಾಗುವುದರ ಜೊತೆಗೆ ಖಾಸಗಿ ಟ್ಯಾಂಕರ್‌ಗಳ ಮೇಲಿನ ಅವಲಂಬನೆಯೂ ಕಡಿಮೆ ಆಗಲಿದೆ ಎಂದು ತಿಳಿಸಿದರು.
ಸಂಸ್ಕರಿತ ನೀರಿನ ಮರುಬಳಕೆಗೆ ಹೊಸ ಯೋಜನೆ
ಅಪಾರ್ಟ್‌ಮೆಂಟ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಕೇಂದ್ರೀಕೃತ ಒಳಚರಂಡಿ ಸಂಸ್ಕರಣಾ ಘಟಕಗಳ ಮೂಲಕ ಉತ್ಪಾದನೆ ಆಗುತ್ತಿರುವ ಸಂಸ್ಕರಿತ ನೀರನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸುವ ಕುರಿತು ಕೂಡ ಚರ್ಚೆ ನಡೆಯಿತು.
ಈ ವೇಳೆ ಅಧ್ಯಕ್ಷೆ ಡಾ. ಎನ್. ಮಂಜುಳಾ ಅವರು, ಅಪಾರ್ಟ್‌ಮೆಂಟ್‌ಗಳಲ್ಲಿ ಉತ್ಪಾದನೆಯಾಗುವ ಸಂಸ್ಕರಿತ ನೀರನ್ನು ಸಮೀಪದಲ್ಲಿರುವ ಕೈಗಾರಿಕೆಗಳು, ಶಿಕ್ಷಣ ಸಂಸ್ಥೆಗಳು, ದೊಡ್ಡ ವಾಣಿಜ್ಯ ಸಂಕೀರ್ಣಗಳು ಹಾಗೂ ಇತರೆ ಬೃಹತ್ ನೀರು ಬಳಕೆದಾರರಿಗೆ ಪೂರೈಸುವ ಸಾಧ್ಯತೆಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸುವಂತೆ ಮುಖ್ಯ ಎಂಜಿನಿಯರ್‍ಗಳಿಗೆ ತಿಳಿಸಿದರು.
ಈ ಕುರಿತು ಪ್ರದೇಶವಾರು ಬೃಹತ್ ನೀರು ಬಳಕೆದಾರರನ್ನು ಗುರುತಿಸಿ, ಅಪಾರ್ಟ್‌ಮೆಂಟ್‌ಗಳ ಎಸ್‌ಟಿಪಿಗಳೊಂದಿಗೆ ಸಂಪರ್ಕ ಕಲ್ಪಿಸುವ ಕಾರ್ಯಯೋಜನೆ ಸಿದ್ಧಪಡಿಸುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಈ ಕ್ರಮದಿಂದ ಶುದ್ಧ ಕುಡಿಯುವ ನೀರಿನ ಮೇಲಿನ ಒತ್ತಡ ಕಡಿಮೆಯಾಗುವುದರ ಜೊತೆಗೆ ಸಂಸ್ಕರಿತ ನೀರಿನ ಮರುಬಳಕೆಗೂ ಉತ್ತೇಜನ ಸಿಗಲಿದೆ ಎಂದು ಹೇಳಿದರು.


Click it and Unblock the Notifications
