ಆರ್‌ಎಸ್‌ಎಸ್ ಕೇವಲ ಒಂದು ಜಾತಿಗೆ ಸೇರಿದ ಸಂಘಟನೆ: ಬಿ.ಕೆ.ಹರಿಪ್ರಸಾದ್
ಬೆಂಗಳೂರು, ನ.06: ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸ್ವಾಗತಿಸಲು ಬೆಂಗಳೂರಿನಲ್ಲಿ ಅದ್ಧೂರಿ ಸರ್ವೋದಯ ಸಮಾವೇಶ ನಡೆಸಲಾಗಿದೆ. ಈ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಅಭಿನಂದಿಸಿದ್ದಾರೆ.
ಸರ್ವೋದಯ ಸಮಾವೇಶದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್, "ಮಲ್ಲಿಕಾರ್ಜುನ ಖರ್ಗೆ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿರುವ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಇಡೀ ರಾಷ್ಟ್ರದಲ್ಲಿನ ಕಾಂಗ್ರೆಸ್ ಪಕ್ಷದ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ. ಕಾಂಗ್ರೆಸ್ ಪಕ್ಷದ ಒಬ್ಬ ನಿಷ್ಠಾವಂತ ನಾಯಕರನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ನಮ್ಮ ಪುಣ್ಯ. ಇದೊಂದು ಪವಿತ್ರವಾದ ಪಕ್ಷವಾಗಿದ್ದು, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿರುವ ಪಕ್ಷವಾಗಿದೆ' ಎಂದಿದ್ದಾರೆ.
'ಮಲ್ಲಿಕಾರ್ಜುನ ಖರ್ಗೆ ಅವರು ಅಧ್ಯಕ್ಷರಾಗುವ ಮುನ್ನ ಬಿಜೆಪಿ ಅವರು ಕಾಂಗ್ರೆಸ್ ನಲ್ಲಿ ಪ್ರಜಾಪ್ರಭುತ್ವ ಇಲ್ಲ ಎಂದು ಆರೋಪ ಮಾಡುತ್ತಿತ್ತು. ಪ್ರಪಂಚದಲ್ಲಿ ಅತ್ಯಂತ ಹಳೆಯ ಹಾಗೂ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷ. ನಾವು ಬಿಜೆಪಿಯವರಂತೆ ಮಿಸ್ ಕಾಲ್ ಕೊಟ್ಟು ಸದಸ್ಯರನ್ನು ನೇಮಕ ಮಾಡಿಲ್ಲ. ಇದುವರೆಗೂ ಪಾರ್ಸಿ, ಮುಸಲ್ಮಾನರು, ಕ್ರೈಸ್ತರು, ಮಹಿಳೆಯರು ಪಕ್ಷದ ಅಧ್ಯಕ್ಷರಾಗಿದ್ದಾರೆ" ಎಂದರು.

ಎಲ್ಲಾ ಜಾತಿ ಧರ್ಮದವರನ್ನು ಅಧ್ಯಕ್ಷರನ್ನಾಗಿ ಮಾಡಿದೆ
"ಬಿಜೆಪಿ ಅವರು ಚುನಾವಣೆ ಮಾಡಿದ್ದೀರಾ..? ನಮ್ಮಲ್ಲಿ ಎಲ್ಲಾ ಜಾತಿ ಧರ್ಮದವರನ್ನು ಅಧ್ಯಕ್ಷರನ್ನಾಗಿ ಮಾಡಿದೆ. ಆದರೆ ಆರ್‌ಎಸ್‌ಎಸ್ ಕೇವಲ ಒಂದು ಜಾತಿಗೆ ಸೇರಿದ ಸಂಘಟನೆ ಆಗಿದೆ. ಹೀಗಾಗಿ ಬಿಜೆಪಿ, ಕಾಕಿ ಚಡ್ಡಿ ಹಾಗೂ ಕರಿ ಟೋಪಿ ಅವರಿಂದ ಆಂತರಿಕ ಪ್ರಜಾಪ್ರಭುತ್ವ ಕಲಿಯುವ ಅಗತ್ಯವಿಲ್ಲ' ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
"ಜೊತೆಗೆ ಮಲ್ಲಿಕಾರ್ಜುನ ಖರ್ಗೆ ಅವರ ಮುಂದೆ ಈ ತ್ರಿವರ್ಣ ಧ್ವಜ ಮರ್ಯಾದೆ ಕಾಪಾಡುವ ಜವಾಬ್ದಾರಿ ಇದೆ. ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆ ರಕ್ಷಿಸುವ ಸವಾಲು ಇದೆ. ಈ ಹೋರಾಟದಲ್ಲಿ ನಾವೆಲ್ಲರೂ ನಿಮ್ಮ ಜತೆಯಾಗಿ ಹೆಜ್ಜೆ ಹಾಕುತ್ತೇವೆ" ಎಂದು ಭರವಸೆ ನೀಡಿದ್ದಾರೆ.

ಖರ್ಗೆ ಸಚಿವರಾಗಿ ಅಸಾಧ್ಯವನ್ನು ಸಾಧ್ಯ ಮಾಡಿದ್ದಾರೆ
ಇನ್ನು, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಕೂಡ ಸಮಾವೇಶದಲ್ಲಿ ಮಾತನಾಡಿದ್ದು, "ಇಂದು ನಮ್ಮ ರಾಜ್ಯದ ಹಿರಿಯ ನಾಯಕರು, ಐದು ದಶಕಗಳ ಕಾಲ ಶಾಸಕರಾಗಿ ಸಚಿವರಾಗಿ ಸೇವೆ ಸಲ್ಲಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ಕಾರ್ಮಿಕ ನಾಯಕರಾಗಿದ್ದ ಅವರು, ಕಾರ್ಮಿಕರ ನೋವು ಅರಿತಿದ್ದರು. ಹೀಗಾಗಿ ಕಾರ್ಮಿಕ ಸಚಿವರಾದ ನಂತರ ಅವರು ಕಾರ್ಮಿಕರ ಏಳಿಗೆಗೆ ಶ್ರಮಿಸಿದ್ದಾರೆ. ದೇಶದಲ್ಲಿ ಇಎಸ್‌ಐ ಆಸ್ಪತ್ರೆಯನ್ನು ವೈದ್ಯಕೀಯ ಕಾಲೇಜು ಮಾಡಿದವರು ಖರ್ಗೆ ಅವರು. ಅವರು ಸಚಿವರಾಗಿ ಅಸಾಧ್ಯವನ್ನು ಸಾಧ್ಯ ಮಾಡಿದ್ದಾರೆ" ಎಂದಿದ್ದಾರೆ.

ಖರ್ಗೆ ಅವರ 50 ವರ್ಷಗಳ ಅನುಭವ ಪಕ್ಷಕ್ಕೆ ಅಮೂಲ್ಯ
"ವಾಜಪೆಯಿ ಅವರು ಪ್ರಧಾನಿ ಹಾಗೂ ಆಡ್ವಾಣಿ ಅವರು ಗೃಹ ಸಚಿವರಾಗಿದ್ದಾಗ ಕಲ್ಯಾಣ ಕರ್ನಾಟಕಕ್ಕೆ ಆರ್ಟಿಕಲ್ 371ಜೆ ನೀಡಲು ಸಾಧ್ಯವಿಲ್ಲ ಎಂದರು. ಆದರೆ ಖರ್ಗೆ ಅವರು ಹೋರಾಟ ಬಿಡದೆ, ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಇದನ್ನು ಸಾಧ್ಯ ಮಾಡಿದರು. ಖರ್ಗೆ ಅವರಲ್ಲಿ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ತತ್ವಗಳನ್ನು ನೋಡಿದ್ದು, ರಾಜ್ಯ ಮಾತ್ರವಲ್ಲ ದೇಶದ ಎಲ್ಲ ಭಾಗದ ಜನ ಅವರಿಗೆ ಗೌರವ ನೀಡುತ್ತಾರೆ" ಎಂದಿದ್ದಾರೆ.
"ಅವರ 50 ವರ್ಷಗಳ ಅನುಭವ ಪಕ್ಷಕ್ಕೆ ಅಮೂಲ್ಯವಾಗಿದೆ. ಅವರಲ್ಲಿರುವ ಕಾಳಜಿ, ಬದ್ಧತೆ ಹಾಗೂ ಸ್ಪಷ್ಟತೆ ಪಕ್ಷಕ್ಕೆ ಹೊಸ ಶಕ್ತಿ ಸಿಗಲಿದೆ. ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತೊಗೆದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಬೇಕು. ನಮ್ಮ ನಾಯಕರ ನೇತೃತ್ವದಲ್ಲಿ 2024ರಲ್ಲಿ ದೇಶದಲ್ಲಿ ಮತ್ತೆ ಯುಪಿಎ ಸರ್ಕಾರ ಅಧಿಕಾರಕ್ಕೆ ಬರಬೇಕು" ಎಂದು ಆಶಿಸಿದ್ದಾರೆ.

ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ: ಖರ್ಗೆ ವಿಶ್ವಾಸ
ಕಾರ್ಯಕ್ರಮದಲ್ಲಿ ಮಾತನಾಡಿರುವ ಮಲ್ಲಿಕಾರ್ಜುನ ಖರ್ಗೆ ತಾವು ನಡೆದು ಬಂದ ಹಾದಿಯನ್ನು ನೆನಪಿಸಿಕೊಂಡಿದ್ದಾರೆ. "1969ರಲ್ಲಿ ನಾನು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷನಾದೆ. ನಂತರ ಜಿಲ್ಲಾ ಉಪಾಧ್ಯಕ್ಷನಾಗಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷ, ಅಧ್ಯಕ್ಷನಾಗಿಯೂ ಕರ್ತವ್ಯ ನಿರ್ವಹಿಸಿದೆ. ಸೋನಿಯಾ ಗಾಂಧಿ ಅವರು ನನ್ನನ್ನು ಸಿಡಬ್ಲ್ಯೂಸಿ ಸದಸ್ಯನಾಗಿ ಮಾಡಿದರು. ಈಗ ಪಕ್ಷ ಎಐಸಿಸಿ ಅಧ್ಯಕ್ಷ ಸ್ಥಾನ ನೀಡಿದೆ" ಎಂದಿದ್ದಾರೆ.
"ನನಗೆ ನಿಜವಾಗಿ ಗೌರವ ಸಲ್ಲುವುದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗ ಮಾತ್ರ. ಹೀಗಾಗಿ ವೇದಿಕೆ ಮೇಲೆ ಇರುವ ನಾಯಕರು ತಮ್ಮ ಸಣ್ಣ ಪುಟ್ಟ ವ್ಯತ್ಯಾಸ ಮರೆತು ಒಟ್ಟಾಗಿ ಕೆಲಸ ಮಾಡಬೇಕು. ಈ ಸರ್ಕಾರ 40% ಕಮಿಷನ್ ಸರ್ಕಾರ ಕಿತ್ತೊಗೆಯಲು ನಮ್ಮ ಸರ್ಕಾರ ಬರಬೇಕು. ಅದಕ್ಕಾಗಿ ನಾವೆಲ್ಲ ಒಟ್ಟಾಗಿ ಕೆಲಸ ಮಾಡಬೇಕು. ಅನೇಕ ಕಾರ್ಯಕ್ರಮಗಳು ಕಾಂಗ್ರೆಸ್ ಸರ್ಕಾರ ಸಿದ್ದರಾಮಯ್ಯ ನೇತೃತ್ವದಲ್ಲಿ ನೀಡಿದ್ದೀರಿ. ಈಗ ಮತ್ತೆ ಅದೇ ಕೆಲಸ ಮಾಡಬೇಕು" ಎಂದು ಹೇಳಿದ್ದಾರೆ.











Click it and Unblock the Notifications