ಪೊಲೀಸರಿಂದ ಬಲರಾಮನ ಬಂಟ ರೌಡಿ ಮುಲಾಮ ಬಂಧನ
ಬೆಂಗಳೂರು, ಮೇ 09 : ಕುಖ್ಯಾತ ರೌಡಿ ಬಲರಾಮನ ಸಹಚರ ಮುಲಾಮ ಅಲಿಯಾಸ್ ಲೋಕೇಶನನ್ನು ಗೂಂಡಾ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ. 18ನೇ ವಯಸ್ಸಿಗೆ ಅಪರಾಧ ಜಗತ್ತಿಗೆ ಕಾಲಿಟ್ಟಿದ್ದ ಮುಲಾಮನ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರ ಆದೇಶದ ಅನ್ವಯ ರೌಡಿ ಮುಲಾಮನನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ರಾಜರಾಜೇಶ್ವರಿ ನಗರದಲ್ಲಿ ಕೋಟ್ಯಾಂತರ ರೂ. ಬೆಲೆ ಬಾಳುವ ಬಹುಮಹಡಿಯ ಬಂಗಲೆ ಕಟ್ಟಿಕೊಂಡು ಅಲ್ಲಿ ಮುಲಾಮ ವಾಸಿಸುತ್ತಿದ್ದ. [ಕುಖ್ಯಾತ ರೌಡಿ ಅಮೀರ್ ಖಾನ್ ಬಂಧನ]

19 ಪ್ರಕರಣಗಳಿವೆ : 18ನೇ ವಯಸ್ಸಿಗೆ ಅಪರಾಧ ಚಟುವಟಿಕೆಗಳಲ್ಲಿ ಮುಲಾಮ ಪಾಲ್ಗೊಂಡಿದ್ದ. 1985ರಲ್ಲಿ ರಾರಾಜಿನಗರ ಪೊಲೀಸ್ ಠಾಣೆಯಲ್ಲಿ ಈತನ ಹೆಸರಿನಲ್ಲಿ ರೌಡಿಪಟ್ಟಿ ತೆರಯಲಾಗಿತ್ತು. ರಾಜಗೋಪಾಲನಗರ, ಕಾಮಾಕ್ಷಿಪಾಳ್ಯ, ರಾಜಾರಾಜೇಶ್ವರಿನಗರ ಪೊಲೀಸ್ ಠಾಣೆ ರೌಡಿ ಶೀಟರ್ ಪಟ್ಟಿಯಲ್ಲಿ ಈತನ ಹೆಸರಿದೆ. [ಪೊಲೀಸರಿಗೆ ಸಿಕ್ಕಿಬಿದ್ದ ಸ್ಟಾಟ್ ನಾಗ]
ಮುಲಾಮನ ಪರಿಚಯ : ಮುಲಾಮ 7ನೇ ತರಗತಿ ತನಕ ವ್ಯಾಸಂಗ ಮಾಡಿದ್ದು ಓದನ್ನು ಅರ್ಧಕ್ಕೆ ಬಿಟ್ಟ ಈತ ವೆಲ್ಡರ್ ಕೆಲಸ ಮಾಡಿಕೊಂಡಿದ್ದ. ಸಹಚರರೊಂದಿಗೆ ಸೇರಿಕೊಂಡು ಕೊಲೆ, ಕೊಲೆಯತ್ನ, ದೊಂಬಿ, ಹೊಡೆದಾಟ, ಅಪಹರಣ ಮುಂತಾದ ಪ್ರಕರಣದಲ್ಲಿ ಭಾಗಿಯಾಗಿದ್ದ.
ಮೊದಲು ಕುಖ್ಯಾತ ರೌಡಿ ಬಲರಾಮನ ಸಹಚರನಾಗಿದ್ದ ಈತ, ಬಲರಾಮನ ಮರಣದ ನಂತರ ತನ್ನದೇ ಗುಂಪು ಕಟ್ಟಿಕೊಂಡಿದ್ದ. ಮುಲಾಮನ ವಿರುದ್ಧ 3 ಕೊಲೆ, 3 ಕೊಲೆ ಯತ್ನ, 5 ದರೋಡೆ, 4 ಅಪಹರಣ ಸೇರಿದಂತೆ 19 ಪ್ರಕರಣಗಳು ನಗರದ ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.
ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಕೈ ಹಾಕಿದ್ದ ಈತ ಅಪಾರ ಹಣಗಳಿಸಿದ್ದ. ರಾಜರಾಜೇಶ್ವರಿ ನಗರದಲ್ಲಿ ಬಹುಮಹಡಿಯ ಭವ್ಯ ಬಂಗಲೆ ಕಟ್ಟಿಕೊಂಡು ಅಲ್ಲಿ ವಾಸಿಸುತ್ತಿದ್ದ.












Click it and Unblock the Notifications