ರಾಜಕೀಯ ಮೆರವಣಿಗೆಗೆ ನಿರ್ಬಂಧ; ಕಾಂಗ್ರೆಸ್‌ನ ಪಾದಯಾತ್ರೆಗೆ ಹಿನ್ನಡೆ?
ಬೆಂಗಳೂರು, ಜನವರಿ 4: ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಕಳೆದ ಒಂದು ವಾರದಿಂದ ಬಹಳ ವೇಗವಾಗಿ ಹರಡುತ್ತಿವೆ. ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸೇರಿದಂತೆ ಎಲ್ಲರ ಅಭಿಪ್ರಾಯ ಪಡೆದು ನೈಟ್ ಕರ್ಫ್ಯೂ ಎರಡು ವಾರ ಮುಂದುವರಿಕೆ, ವಾರಾಂತ್ಯದ ಲಾಕ್‌ಡೌನ್ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಕರ್ನಾಟಕ ರಾಜ್ಯಾದ್ಯಂತ 6ನೇ ತಾರೀಖಿನಿಂದ ಜಾರಿಯಾಗುವಂತೆ ವೀಕೆಂಡ್ ಕರ್ಫ್ಯೂ ಇರಲಿದೆ. ಶುಕ್ರವಾರ ರಾತ್ರಿ 10ರಿಂದ ಸೋಮವಾರ ಬೆಳಿಗ್ಗೆ 5ರವರೆಗೆ ವೀಕೆಂಟ್ ಕರ್ಫ್ಯೂ ಇರುತ್ತದೆ. ಕಳೆದ 6 ತಿಂಗಳಿನಿಂದ ಕೊವಿಡ್ ನಿಯಂತ್ರಣದಲ್ಲಿತ್ತು. ಆದರೆ ಈಗ ಹೆಚ್ಚಾಗುತ್ತಿದ್ದು, ಪಾಸಿಟಿವಿಟಿ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಕ್ರಮ ಅನಿವಾರ್ಯವಾಗಿತ್ತು.
ಮೇಕೆದಾಟು ಪಾದಯಾತ್ರೆಗೆ ಕಂಟಕ
ಇನ್ನು ರಾಜಕೀಯ ಮೆರವಣಿಗೆ, ಸಮಾವೇಶಗಳಿಗೆ ಸರ್ಕಾರ ನಿರ್ಬಂಧ ಹೇರಿದ್ದು, ಇದರಿಂದ ಕಾಂಗ್ರೆಸ್‌ನ ಮೇಕೆದಾಟು ಪಾದಯಾತ್ರೆಗೆ ಕಂಟಕ ಎದುರಾಗಿದೆ. ಇದೇ ಜನವರಿ 9ರಂದು ಮೇಕೆದಾಟುವಿನಿಂದ ಬೆಂಗಳೂರುವರೆಗೂ ಕಾಂಗ್ರೆಸ್ ಪಕ್ಷದಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.

ಮೇಕೆದಾಟು ಅಣೆಕಟ್ಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ನಡೆಸಲು ಉದ್ದೇಶಿಸಿರುವ ಪಾದಯಾತ್ರೆ ಮೇಲೆ ಕೊರೊನಾ ಸೋಂಕಿನ ಕರಿನೆರಳು ಬೀಳಲಿದೆಯಾ ಎಂಬ ಆತಂಕಕ್ಕೆ ತೆರೆ ಎಳೆಯಲಾಗಿದೆ.
ರಾಜ್ಯದಲ್ಲಿ ಸ್ಫೋಟವಾಗುತ್ತಿರುವ ಕೊರೊನಾ ಪ್ರಕರಣಗಳನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಪ್ರಕರಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು, ಇದೇ ವೇಳೆ ಪಾದಯಾತ್ರೆ ನಡೆಸಿದರೆ ಕೊರೊನಾ ಹರಡಲು ರಹದಾರಿ ಮಾಡಿಕೊಟ್ಟಂತಾಗುವುದಿಲ್ಲವೆ? ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ನಾಯಕರು ಮಾತ್ರ ನಾವು ಕೋವಿಡ್ ನಿಯಮ ಪಾಲಿಸಿ ಪಾದಯಾತ್ರೆ ಮಾಡಿಯೇ ಮಾಡುವುದಾಗಿ ಹೇಳುತ್ತಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಕಠಿಣ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಕಾಂಗ್ರೆಸ್ ಸರ್ಕಾರದ ನಿಯಮಗಳನ್ನು ಪಾಲಿಸುತ್ತದೆಯೋ ಅಥವಾ ಕೋವಿಡ್ ನಿಯಮ ಗಾಳಿಗೆ ತೂರಿ ಪಾದಯಾತ್ರೆ ಮಾಡಿಯೇ ತೀರುತ್ತದೆಯೇ ಎಂದು ಕಾದು ನೋಡಬೇಕಿದೆ.
ಇದೇ ವೇಳೆ ದೇವಸ್ಥಾನಗಳಿಗೆ 50 ಮಂದಿಗಷ್ಟೇ ಅವಕಾಶ ನೀಡಲಾಗಿದ್ದು, ಯಾವುದೇ ಸಭೆ, ಸಮಾರಂಭಗಳು ನಡೆಯುವಂತಿಲ್ಲ. ಮೆಟ್ರೋ, ಬಸ್‌ಗಳಿಗೂ ನಿರ್ಬಂಧ ವಿಧಿಸಲಾಗಿದ್ದು, ಸೀಟು ಇರುವಷ್ಟೇ ಪ್ರಯಣಿಕರಿಗೆ ಅವಕಾಶ ನೀಡಲು ಮುಂದಾಗಿದೆ. ಬಿಎಂಟಿಸಿ, ಮೆಟ್ರೋಗಳಲ್ಲಿ ನಿಂತು ಪ್ರಯಾಣಿಸುವಂತಿಲ್ಲ ಎಂದು ಸರ್ಕಾರ ತಿಳಿಸಿದೆ.












Click it and Unblock the Notifications