ರಾಜಕಾಲುವೆ ಒತ್ತುವರಿ ತೆರವು: 4 ವಾರದಲ್ಲಿ ಕ್ರಿಯಾ ಯೋಜನೆ ಸಲ್ಲಿಸಿ
ಬೆಂಗಳೂರು, ಆಗಸ್ಟ್ 02: ನ್ಯಾಯಾಲಯದ ನಿರ್ದೇಶನದಂತೆ ಕೆರೆ, ರಾಜಕಾಲುವೆಗಳ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕ್ರಮವನ್ನು ಕರ್ನಾಟಕ ಹೈಕೋರ್ಟ್ ಮತ್ತೆ ತರಾಟೆಗೆ ತೆಗೆದುಕೊಂಡಿದೆ.
ಅಲ್ಲದೇ, ನಗರಾಭಿವೃದ್ಧಿ ಇಲಾಖೆ, ಬಿಬಿಎಂಪಿ, ಬೆಂಗಳೂರು ಜಲಮಂಡಳಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಎಲ್ಲ ಪ್ರಾಧಿಕಾರಗಳು ಸಮಾಲೋಚನೆ ನಡೆಸಿ ನಾಲ್ಕು ವಾರಗಳಲ್ಲಿ ಕ್ರಿಯಾ ಯೋಜನೆ ಸಲ್ಲಿಸುವಂತೆ ನಿರ್ದೇಶನ ನೀಡಿದೆ.

ಸಿಟಿಜನ್ ಆಕ್ಷನ್ ಫೋರಂ ಸೇರಿದಂತೆ ಹಲವು ಸಂಘಟನೆಗಳು ಕೆರೆ ಹಾಗೂ ರಾಜಕಾಲುವೆ ಒತ್ತುವರಿ ತೆರವಿನ ಕುರಿತು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಳೆ ಮತ್ತು ನ್ಯಾ. ಎಂ. ಜಿ. ಎಸ್. ಕಮಲ್ ಅವರಿದ್ದ ವಿಭಾಗೀಯ ಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದವು.
ಕಳೆದ ಜು.22ರಂದು ನಗರದಲ್ಲಿ ರಾಜಕಾಲುವೆ ಒತ್ತುವರಿ ತೆರವು ಸಂಬಂಧ ಸಮಗ್ರ ಕ್ರಿಯಾ ಯೋಜನೆ ಸಲ್ಲಿಸಲು ನೀಡಿದ್ದ ನಿರ್ದೇಶನ ಪಾಲಿಸದ ಬಿಬಿಎಂಪಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಕಾರ್ಯವೈಖರಿಯನ್ನು ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು.
ಆಗ ಪಾಲಿಕೆ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ಪಾಲಿಕೆ ಒಟ್ಟು 2,951 ಒತ್ತುವರಿ ಗುರುತಿಸಿದ್ದು, ಈವರೆಗೆ (18 ಜು. 2023ರವರೆಗೆ) 2,183 ತೆರವುಗೊಳಿಸಲಾಗಿದೆ. ಇನ್ನೂ 768 ತೆರವುಗೊಳಿಸಲು ಬಾಕಿ ಇದೆ ಎಂದು ಹೇಳಿತ್ತು.
ಖಾರವಾಗಿ ಪ್ರಶ್ನೆ ಮಾಡಿದ ಕೋರ್ಟ್; ನ್ಯಾಯಾಲಯದ ನಿರ್ದೇಶನದಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ನಗರಾಭಿವೃದ್ಧಿ ಇಲಾಖೆ ಉಪ ಕಾರ್ಯದರ್ಶಿ ವಿಚಾರಣೆ ವೇಳೆ ಖುದ್ದು ಹಾಜರಾಗಿದ್ದರು. ಅವರಿಗೆ ನ್ಯಾಯಾಲಯ ಬೆಕ್ಕಿಗೆ ಗಂಟೆ ಕಟ್ಟುವವರಾರಯರು? ಎಂದು ಖಾರವಾಗಿ ಪ್ರಶ್ನಿಸಿದೆ.
ಬಿಬಿಎಂಪಿ ಪರ ವಕೀಲರು, ಪಾಲಿಕೆ ಮುಖ್ಯ ಆಯುಕ್ತರ ಪರವಾಗಿ ನೀಡಿದ ವರದಿ ಆಧರಿಸಿ ಬಿಬಿಎಂಪಿ ಒತ್ತುವರಿಗಳ ತೆರವಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಮಾಣಪತ್ರ ಸಲ್ಲಿಸಿದರು. ಅದನ್ನು ಪರಿಶೀಲಿಸಿದ ನ್ಯಾಯಪೀಠ, ಒತ್ತುವರಿ ತೆರವಿಗೆ ಕ್ರಮ ಕೈಗೊಂಡ ವರದಿ ತೃಪ್ತಿಕರವಾಗಿಲ್ಲಎಂದು ಅಸಮಾಧಾನ ವ್ಯಕ್ತಪಡಿಸಿತು.
ಪ್ರಮಾಣಪಪತ್ರದಲ್ಲಿ, ಕೆರೆ ಹಾಗೂ ರಾಜಕಾಲುವೆ ಒತ್ತುವರಿಗೆ ಸಂಬಂಧಿಸಿದಂತೆ ನಾಗರಿಕರ ಕುಂದು ಕೊರತೆಗಳನ್ನು ಪರಿಹರಿಸಲು ಶ್ರೇಯಸ್ ಆ್ಯಪ್ ಅಭಿವೃದ್ಧಿಪಡಿಸಿರುವ ಬಗ್ಗೆ ಮತ್ತು ಅದನ್ನು ಆಧರಿಸಿ ಕ್ರಮ ಕೈಗೊಳ್ಳುತ್ತಿರುವ ಬಗ್ಗೆ ತಿಳಿಸಲಾಗಿದೆ.
ಮುಲಾಜಿಲ್ಲದೆ ಕ್ರಮ ಜರುಗಿಸಿ: ಪ್ರಮಾಣ ಪತ್ರದಲ್ಲಿ ಕೆಲವು ಅಂಶಗಳನ್ನು ಪರಿಶೀಲಿಸಿದ ನ್ಯಾಯಾಲಯ, "ಈಗ ಒತ್ತುವರಿದಾರರ ವಿರುದ್ಧ ಸಾಕಷ್ಟು ದಾಖಲೆಗಳು ಹಾಗೂ ಮಾಹಿತಿ ಇದೆ. ಈಗ ಬೇಕಾಗಿರುವುದು ಒತ್ತುವರಿದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದು ಮಾತ್ರ. ಅದನ್ನು ಮುಲಾಜಿಲ್ಲದೆ ಕೈಗೊಳ್ಳಿ" ಎಂದು ಖಡಕ್ ಆಗಿ ಆದೇಶಿಸಿತು.
ಅಲ್ಲದೇ, ಒತ್ತುವರಿಯ ದೂರುಗಳಿದ್ದರೂ ನಿರ್ಲಕ್ಷಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ವಿಭಾಗೀಯ ಪೀಠ ತಾಕೀತು ಮಾಡಿ ಎಂಪ್ರಿ ಮತ್ತು ನೀರಿ ಸಂಸ್ಥೆಗಳು ವರದಿ ಸಲ್ಲಿಸಿವೆ. ಅದರಂತೆ ಒತ್ತುವರಿ ತಡೆಗೆಂದೇ ಕೆರೆ ಸಂರಕ್ಷಣಾ ಕಾಯಿದೆ ಮತ್ತು ಬಿಬಿಎಂಪಿ ಕಾಯಿದೆಯಡಿ ಪ್ರತ್ಯೇಕ ಅಧಿಕಾರಿ ನೇಮಿಸಬೇಕು ಎಂದು ಆದೇಶ ನೀಡಿತು.
ಒತ್ತುವರಿ ಮಾಡಿದವರ ವಿರುದ್ಧ ಭೂ ಕಬಳಿಕೆ ತಡೆ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಬೇಕು. ಇದೀಗ ಬೆಕ್ಕಿಗೆ ಗಂಟೆ ಕಟ್ಟುವವರು ಯಾರೆಂಬ ಪ್ರಶ್ನೆ ಎದ್ದಿದೆ. ಅಧಿಕಾರಿಗಳು ಒಬ್ಬರ ಮೇಲೆ ಒಬ್ಬರು ಹೇಳದೆ ಗಂಟೆಯನ್ನು ಕಟ್ಟಬೇಕು, ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದ ನ್ಯಾಯಾಲಯ ಎಲ್ಲ ಪ್ರಾಧಿಕಾರಗಳೂ ಸೇರಿ 4 ವಾರಗಳಲ್ಲಿ ಕ್ರಿಯಾ ಯೋಜನೆ ಸಲ್ಲಿಸಬೇಕು ಎಂದು ಸೂಚನೆ ನೀಡಿ ವಿಚಾರಣೆಯನ್ನು ಸೆ. 4ಕ್ಕೆ ಮುಂದೂಡಿತು.












Click it and Unblock the Notifications