ಬೆಂಗಳೂರಿನಲ್ಲಿ ಮಧ್ಯಾಹ್ನದ ಮಳೆ, ಛತ್ರಿ ಮರೆತವರ ಚಡಪಡಿಕೆ...
ಬೆಂಗಳೂರು, ಜುಲೈ 19: ಬೆಂಗಳೂರಿನ ಹಲವು ಕಡೆ ಬುಧವಾರ ಮಧ್ಯಾಹ್ನ ಒಳ್ಳೆ ಮಳೆಯಾಗಿದೆ. ಮಧ್ಯಾಹ್ನ ಊಟಕ್ಕೆಂದು ಕಚೇರಿ-ಕಾಲೇಜುಗಳಿಂದ ಆಚೆ ಬಂದವರು ಮಳೆಯಲ್ಲಿ ತೋಯುವಂತಾಯಿತು. ಬಸ್ ಶೆಲ್ಟರ್ ಗಳ ಕೆಳಗೆ ಅಪರೂಪಕ್ಕೆ ಎಂಬಂತೆ ತುಂಬಿತುಳುಕುವ ಹಾಗೆ ಜನ ಕಂಡುಬಂದರು.
ಬೆಳಗಿನ ವಾತಾವರಣ ನೋಡಿ ಮುಂಚೆಯೇ ಮಳೆ ಬರುತ್ತದೆ ಎಂದು ನಿರ್ಧರಿಸಿದವರು ಛತ್ರಿಗಳನ್ನು ಹಿಡಿದು ರಸ್ತೆ ಮೇಲೆ ನಡೆದಾಡುತ್ತಿದ್ದರು. ಒಟ್ಟಿನಲ್ಲಿ ಮಳೆಯೇ ಆಗಲಿಲ್ಲ ಎಂದು ಕನವರಿಸುತ್ತಿದ್ದವರು, ಕಾತರಿಸುತ್ತಿದ್ದವರ ಮೇಲೆ ವರುಣ ಪನ್ನೀರು ಚಿಮುಕಿಸಿದಂತೆ ಆಗಿದೆ.

ಇಂಥ ಮಳೆಯಿಂದ ಚಿಕುನ್ ಗುನ್ಯಾ, ಡೆಂಗ್ಯೂ ಜ್ವರಕ್ಕೆ ಇನ್ನಷ್ಟು ಇಂಬು ಸಿಗುತ್ತದೆ ಎಂಬ ಅಳುಕಿದ್ದವರು ಖಂಡಿತಾ ಎಚ್ಚರ ವಹಿಸಿ. ಜುಲೈ ಹದಿನೇಳರ ನಂತರ ಒಂದಿಷ್ಟು ಮಳೆ ಆಗುತ್ತದೆ ಎಂದು ಹವಾಮಾನ ಇಲಾಖೆಯು ಹೇಳಿತ್ತು. ಅದೀಗ ನಿಜವಾಗುತ್ತಿರುವಂತಿದೆ.
ಮಳೆ -ಚಳಿಗಾಲವನ್ನು ಬಹುವಾಗಿ ಮೆಚ್ಚಿ-ನೆಚ್ಚಿ ಜೀವನ ಸಾಗಿಸುವ ಬೋಂಡಾ-ಬಜ್ಜಿ, ಮಸಾಲೆ ಪುರಿ ಅಂಗಡಿಯವರಂತೂ ಬಹಳ ಖುಷಿಯಾಗಿರುತ್ತಾರೆ. ಮಳೆ ಬಂದರೆ ವ್ಯಾಪಾರ ಡಲ್ ಎನ್ನುವವರು ಶಪಿಸದಿದ್ದರೆ ಆಯಿತು. ಮಧ್ಯಾಹ್ನದ ಮಳೆ ಸಂಜೆ-ರಾತ್ರಿಗೂ 'ಖೋ' ಕೊಟ್ಟು ಹೀಗೇ ಮುಂದುವರಿಯಲಿ.












Click it and Unblock the Notifications