Bengaluru Metro: ರೈಲ್ವೆ ಮಂಡಳಿಯಿಂದ CBTC ಸಿಗ್ನಲಿಂಗ್‌ಗೆ ಒಪ್ಪಿಗೆ: ನೀಲಿ-ಗುಲಾಬಿ ಲೈನ್ ಕಾರ್ಯಾಚರಣೆಗೆ ಬೂಸ್ಟ್
ಬೆಂಗಳೂರು: ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಗ್ ನ್ಯೂಸ್ ಸಿಕ್ಕಿದೆ. ಆಗಸ್ಟ್‌ನಲ್ಲಿ ಆರಂಭವಾಗಲಿದೆ ಎನ್ನಲಾದ ಗುಲಾಬಿ ಮಾರ್ಗ ಮಾತ್ರವಲ್ಲದೇ ಸಿಲ್ಕ್‌ಬೋರ್ಡ್-ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Bengaluru International Aiprort) ವರೆಗಿನ ನೀಲಿ ಮಾರ್ಗದ ಸಿಗ್ನಲಿಂಗ್ ವ್ಯವಸ್ಥೆಗೆ ರೈಲ್ವೆ ಮಂಡಳಿಯಿಂದ ತಾತ್ವಿಕ ಅನುಮೋದನೆ ದೊರೆತಿದೆ. ಕಾಳೇನ ಅಗ್ರಹಾರ- ತಾವರೆಕೆರೆ (ಎತ್ತರಿಸಿದ ಕಾರಿಡಾರ್) ಗುಲಾಬಿ ಮಾರ್ಗಕ್ಕೆ ಅಂತಿಮ ಅನುಮೋದನೆ ಬಾಕಿ ಇವೆ.
ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ತಿಳಿಸಿರುವಂತೆ ಗುಲಾಬಿ ಮತ್ತು ನೀಲಿ ಮಾರ್ಗಗಳ ಕಮ್ಯುನಿಕೇಷನ್ ಬೇಸ್ಟ್ ಟ್ರೈನ್ ಕಂಟ್ರೋಲ್ (CBTC) ಸಿಗ್ನಲಿಂಗ್ ಮತ್ತು ರೈಲು ನಿಯಂತ್ರಣ ವ್ಯವಸ್ಥೆಗೆ ರೈಲ್ವೆ ಮಂಡಳಿಯಿಂದ ತಾತ್ವಿಕ ಒಪ್ಪಿಗೆ ನೀಡಿದೆ. ಇದರಿಂದ ಈಗಾಗಲೇ ವಾಣಿಜ್ಯ ಕಾರ್ಯಾಚರಣೆಗೆ ಮುಂದಾಗಿರುವ ಗುಲಾಬಿ ಮಾರ್ಗ ಹಾಗೂ ಉದ್ದೇಶಿತ ನೀಲಿ ಮಾರ್ಗ ವಾಣಿಜ್ಯ ಕಾರ್ಯಾಚರಣೆ ಚಿಂತನೆಗೆ ಸಾಕಷ್ಟು ಅನುಕೂಲವಾಗಲಿದೆ.

ಬೆಂಗಳೂರು ಗುಲಾಬಿ ಮಾರ್ಗ (ರೀಚ್-6) ಹಾಗೂ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ವಿಸ್ತರಿಸಿರುವ ಹಂತ-2A ಮತ್ತು ಹಂತ-2B ಒಳಗೊಂಡ ಸಂಪೂರ್ಣ ನೀಲಿ ಮಾರ್ಗದ ಕಮ್ಯುನಿಕೇಷನ್ ಬೇಸ್ಟ್ ಟ್ರೈನ್ ಕಂಟ್ರೋಲ್ (CBTC) ಸಿಗ್ನಲಿಂಗ್ ಮತ್ತು ರೈಲು ನಿಯಂತ್ರಣ ವ್ಯವಸ್ಥೆಗೆ ರೈಲ್ವೆ ಮಂಡಳಿಯು ಪ್ರಾಥಮಿಕ ಒಪ್ಪಿಗೆ ದೊರೆತಿದೆ.
ತಿಂಗಳ ಶ್ರಮಕ್ಕೆ ಫತಿಫಲ
ಈ ಅನುಮೋದನೆಯು ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ (7.5 ಕಿ.ಮೀ.) ಗುಲಾಬಿ ಮಾರ್ಗದ ಕಾರ್ಯಾರಂಭದ ನಿಟ್ಟಿನಲ್ಲಿ ಪ್ರಮುಖ ಮೈಲಿಗಲ್ಲಾಗಿದೆ. ಅನುಮೋದನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಬಿಎಂಆರ್‌ಸಿಎಲ್ ಕಳೆದ ಒಂದು ತಿಂಗಳಿನಿಂದ ರೈಲ್ವೆ ಮಂಡಳಿ ಹಾಗೂ ಆರ್‌ಡಿಎಸ್‌ಒ (RDSO) ಜೊತೆ ನಿರಂತರವಾಗಿ ಸಮನ್ವಯ ಸಾಧಿಸಿ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.
ಗುಲಾಬಿ ಮಾರ್ಗದ ಕಾರ್ಯಾರಂಭಕ್ಕೆ ಇನ್ನುಳಿದ ತಾಂತ್ರಿಕ ಮತ್ತು ಶಾಸನಬದ್ಧ ಪ್ರಕ್ರಿಯೆಗಳಾದ ಆರ್‌ಡಿಎಸ್‌ಒದಿಂದ ಮಧ್ಯಂತರ ವೇಗ ಪ್ರಮಾಣೀಕರಣ, ಸಿಸಿಆರ್‌ಎಸ್ (CCRS) ಮೂಲಕ ರೈಲುಗಳ ಶಾಸನಬದ್ಧ ಪರಿಶೀಲನೆ, ಪ್ರಾಯೋಗಿಕ ಸಂಚಾರ (Trial Runs) ನಡೆಯಬೇಕಿದೆ. ಬಳಿಕವೇ ಅಂತಿಮ ಶಾಸನಬದ್ಧ ಪರಿಶೀಲನೆ ಹಾಗೂ ಪ್ರಯಾಣಿಕರ ಸೇವೆ ಆರಂಭಿಸಲು ಅಗತ್ಯವಿರುವ ಅನುಮತಿ ದೊರೆಯಲಿದೆ. ಬಿಎಂ ಆರ್ ಸಿ ಎಲ್ ಅಧಿಕಾರಿಗಳು ಇದಕ್ಕೆಲ್ಲ ಸಜ್ಜಾಗಿದ್ದು, ಶೀಘ್ರವೇ ಎಲ್ಲ ಅಂತಿಮ ಕಾರ್ಯ ಪೂರ್ಣಗೊಳಿಸಲಿದ್ದಾರೆ.
ಆದಷ್ಟು ಶೀಘ್ರವೇ ಗುಲಾಬಿ ಮಾರ್ಗದ ಬಾಕಿ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ, ಗುಲಾಬಿ ಮಾರ್ಗದಲ್ಲಿ ಪ್ರಯಾಣಿಕರ ಸೇವೆಯನ್ನು ಆರಂಭಿಸಲು ಅಧಿಕಾರಿಗಳು ಸಜ್ಜಾಗಿದ್ದಾರೆ. ಆರ್‌ಡಿಎಸ್‌ಒ, ಸಿಸಿಆರ್‌ಎಸ್ ಹಾಗೂ ಸಂಬಂಧಪಟ್ಟ ಇತರ ಸಂಸ್ಥೆಗಳೊಂದಿಗೆ ನಿಕಟ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಲಾಗಿದೆ.
ನೀಲಿ ಮಾರ್ಗಕ್ಕೆ ಹೆಚ್ಚಿನ ಸಹಾಯ
ಕಾರ್ಯಾಚರಣೆಗಾಗಿ ಅಂತಿಮ ಹಂತದಲ್ಲಿ ಕೆಲಸಗಳು, ಪ್ರಕ್ರಿಯೆಗಳು ನೀಲಿ ಮಾರ್ಗದಲ್ಲಿ ನಡೆಯುತ್ತಿವೆ. ಸೆಂಟ್ರಲ್ ಸಿಲ್ಕ್ ಬೋರ್ಡ್- ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಕೆಇಎ) ವರೆಗಿನ ನೀಲಿ ಮಾರ್ಗಕ್ಕೂ ಅನ್ವಯವಾಗುವಂತೆ ಒಪ್ಪಿಗೆ ದೊರೆತಿರುವುದು ಬಾಕಿ ಕೆಲಸಗಳು ವಿಳಂಬವಿಲ್ಲದೇ ಸಾಗುವುದಕ್ಕೆ ದಾರಿ ಮಾಡಿಕೊಟ್ಟಂತಾಗಿದೆ. ಗುಲಾಬಿ ಮಾರ್ಗಕ್ಕೆ ಸಿಗ್ನಲಿಂಗ್ ಅನುಮೋದನೆಯು ಬಾಕಿ ಇದ್ದ ಪ್ರಮುಖ ಹಂತವಾಗಿದ್ದರೆ, ನೀಲಿ ಮಾರ್ಗದ ಉದ್ದೇಶಿತ ಕಾರ್ಯಾರಂಭಕ್ಕೂ ಸಾಕಷ್ಟು ಮುಂಚಿತವಾಗಿಯೇ ಈ ಅನುಮೋದನೆ ದೊರೆತಿರುವುದು ಸಾಕಷ್ಟು ವೇಗ, ಬಲ ಸಿಕ್ಕಂತಾಗಿದೆ. ಅಗತ್ಯ ಪರೀಕ್ಷೆ ಹಾಗೂ ಸುರಕ್ಷತಾ ಪ್ರಮಾಣೀಕರಣ ಪ್ರಕ್ರಿಯೆಗಳನ್ನು ಸಕಾಲದಲ್ಲಿ ಕೈಗೊಳ್ಳಲು ಅನುಕೂಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ನೀಲಿ ಮೆಟ್ರೋ ಮಾರ್ಗದಲ್ಲಿ ಡ್ರೈವರ್‍ಲೆಸ್ ರೈಲುಗಳು ಆಗಮಿಸಿದ್ದು, ಟ್ರಾಕ್ ಪೂರ್ಣಗೊಳಿಸುವ ಕೆಲಸ ನಡೆಯುತ್ತಿದೆ. ಅಕ್ಟೋಬರ್ ಹೊತ್ತಿಗೆ ಸಿಲ್ಕ್‌ಬೋರ್ಡ್-ಕೆ.ಆರ್. ಪುರಂ (2A) ಲೈನ್ ಪ್ರಾಯೋಗಿಕ ಸಂಚಾರ ಆರಂಭಿಸುವಂತೆ ಸೂಚನೆ ಇದೆ. ಮೊದಲ ಹಂತದಲ್ಲಿ ನೀಲಿ ಮಾರ್ಗ 2027 ಡಿಸೆಂಬರ್‍ಗೆ ತೆರೆಯಲಿದೆ. ಇದೇ ವೇಳೆ ಬಾಕಿ ಉಳಿದ ಗುಲಾಬಿ ಮಾರ್ಗ ತಾವರೆಕರೆ-ನಾಗವಾರ ಭೂಗತ ಮಾರ್ಗವು (13.5ಕಿ.ಮೀ) ಎಲ್ಲ ಪ್ರಕ್ರಿಯೆ ಮುಗಿಸಿ ವಾಣಿಜ್ಯ ಸಂಚಾರ ಆರಂಭಿಸುವ ಸಾಧ್ಯತೆ ಇದೆ.


Click it and Unblock the Notifications
