ಮೌರ್ಯ ಹೋಟೆಲ್ ಮುಂದೆ ಟೀ ಹಂಚಿದ ಆರ್.ಅಶೋಕ್
ಬೆಂಗಳೂರು, ಜ.25 : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಟೀ ಮಾರಲಿಕ್ಕೆ ಲಾಯಕ್ಕು ಎಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ ವಿರುದ್ಧ ಕರ್ನಾಟಕ ಬಿಜೆಪಿ ಪ್ರತಿಭಟನೆ ಆರಂಭಿಸಿದೆ.
ಬೆಂಗಳೂರಿನ ಮೌರ್ಯ ಹೋಟೆಲ್ ಬಳಿ ಶುಕ್ರವಾರ ಉಚಿತವಾಗಿ ಜನರಿಗೆ ಟೀ ಹಂಚುವ ಮೂಲಕ ಬಿಜೆಪಿ ನಾಯಕರು ಮಣಿಶಂಕರ್ ಅಯ್ಯರ್ ವಿರುದ್ಧ ಪ್ರತಿಭಟನೆ ನಡೆಸಿದರು. ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. [ಟೀ ಮಾರೋರು, ದೇಶ ಮಾರೋರು ಯಾರು ಬೇಕು]

ಪ್ರತಿಭಟನೆಯಲ್ಲಿ ಮಾತನಾಡಿದ ಆರ್.ಅಶೋಕ್, ಬಡವರ ಜೀವನೋಪಾರ ವೃತ್ತಿಯನ್ನು ಹೀಯಾಳಿಸುವ ಹೇಳಿಕೆ ನೀಡಿರುವ ಮಣಿಶಂಕರ್ ಅಯ್ಯರ್ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು. ಇಂತಹ ಹೇಳಿಕೆ ನೀಡುವ ನಾಯಕರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಅವರು ಒತ್ತಾಯಿಸಿದರು.
ಮಣಿ ಶಂಕರ್ ಅಯ್ಯರ್ ಚಹಾಮಾರುವ ಜನರನ್ನು ತಮ್ಮ ಹೇಳಿಕೆ ಮೂಲಕ ಅವಹೇಳನ ಮಾಡಿದ್ದಾರೆ. ಪ್ರತಿಯೊಂದು ವೃತ್ತಿಗೂ ಅದರದ್ದೇ ಆದ ಘನತೆ ಇದೆ. ಮೋದಿ ಚಹಾಮಾರಿ ವಿದ್ಯಾಭ್ಯಾಸ ಮಾಡಿ ನಂತರ ಗುಜರಾತ್ ಮುಖ್ಯಮಂತ್ರಿ ಪಟ್ಟಕ್ಕೆ ಏರಿದ್ದಾರೆ.
ಚಹಾಮಾರುವವರು ದೇಶ ಆಳಲಾರರು ಎಂದು ಹೇಳುವ ಮೂಲಕ ಕಾಂಗ್ರೆಸ್ ಚಹಾಮಾರುವವರ ವೃತ್ತಿಯನ್ನು ಹೀಯಾಳಿಸಿದೆ. ಇಷ್ಟುದಿನ ಜಾತಿಯ ಮೂಲಕ ಸಮಾಜ ಒಡೆಯುತ್ತಿದ್ದ ಕಾಂಗ್ರೆಸ್ ಪಕ್ಷ, ಈಗ ಕಸುಬಿನ ಆಧಾರದ ಮೇಲ ಸಮಾಜ ಒಡೆಯಲು ಯತ್ನಿಸುತ್ತಿದೆ ಎಂದು ಅಶೋಕ್ ಆರೋಪಿಸಿದರು.
ಶಾಸಕ ಮುನಿರಾಜು, ವಿಧಾನಪರಿಷತ್ ಸದಸ್ಯ ಅಶ್ವತ್ಥ ನಾರಾಯಣ, ಬಿಜೆಪಿ ನಗರ ಘಟಕದ ಅಧ್ಯಕ್ಷ ಸುಬ್ಬಣ್ಣ ಸೇರಿದಂತೆ ಹಲವಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಇಂತಹ ಪ್ರತಿಭಟನೆ ಮಾಡಲು ಬಿಜೆಪಿ ನಿರ್ಧರಿಸಿದೆ.











Click it and Unblock the Notifications