RSSಗೆ ಅಮೆರಿಕದ ಬಳಿಕ ಪಾಕಿಸ್ತಾನದಿಂದಲೂ ದೇಣಿಗೆ ಪಡೆಯುವ ಉದ್ದೇಶವೇ? ಪ್ರಿಯಾಂಕ್ ಖರ್ಗೆ ಪ್ರಶ್ನೆ
ಬೆಂಗಳೂರು: ಬೆಂಗಳೂರಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಪಥಸಂಚಲನ ಯಶಸ್ವಿಯಾಗಿ ನಡೆದಿದೆ. ಇದರ ಬೆನ್ನಲ್ಲೇ ಆರ್.ಎಸ್ ಎಸ್ ಕುರಿತು ಮತ್ತೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಂಘದ ದೇಣಿಗೆಯ ಉದ್ದೇಶ ಹಾಗೂ ಆರ್.ಅಶೋಕ್ ಅವರು ಹಿಂದು ಹೇಳಿಕೆ ವಿಡಿಯೋ ಪೋಸ್ಟ್ ಮಾಡಿ ಬಿಜೆಪಿಗೆ ಟಾಂಗ್ ನೀಡಿದ್ದಾರೆ.
ಎಕ್ಸ್ ಪೋಸ್ಟ್ ಮಾಡಿರುವ ಪ್ರಿಯಾಂಕ್ ಖರ್ಗೆ ಅವರು, ಪಾಕಿಸ್ತಾನ, ಬಾಂಗ್ಲಾದೇಶಗಳನ್ನು ಬಿಟ್ಟರೆ ಈ ಜಗತ್ತಿನಲ್ಲಿ ಮತ್ತೊಂದು ದೇಶದ ಪರಿಚಯ ಬಿಜೆಪಿಗರಿಗೆ ಇದ್ದಂತಿಲ್ಲ. ವಿಪಕ್ಷ ನಾಯಕ ಆರ್.ಅಶೋಕ್ ಅವರೇ, ನಿಮ್ಮ RSS ಅಮೇರಿಕಾದಿಂದ ದೇಣಿಗೆ ಪಡೆದುಕೊಂಡಿರುವುದನ್ನು ನಿಮಗೆ ತಿಳಿಸಿಲ್ಲ ಎಂದೆನಿಸುತ್ತದೆ!.

ಮೋಹನ್ ಭಾಗವತ್ ಹೇಳಿಕೆ ನೆನಪಿಸಿದ ಖರ್ಗೆ
ಹಾಗೆಯೇ ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧ ಇಟ್ಟುಕೊಳ್ಳಬೇಕು ಎನ್ನುವ ಮೋಹನ್ ಭಾಗವತ್ ಹೇಳಿಕೆಯ ಹಿಂದಿನ ಅರ್ಥ ಪಾಕಿಸ್ತಾನದಿಂದಲೂ ದೇಣಿಗೆ ಪಡೆಯುವ ಉದ್ದೇಶವೇ? ಪಾಕಿಸ್ತಾನದ ಬಗ್ಗೆ ಪ್ರೀತಿ ಹೊಂದಿರುವುದು ನಿಮ್ಮ ಸಂಘದವರೇ ಹೊರತು ಕಾಂಗ್ರೆಸ್ ಅಲ್ಲ ಎಂದು ಬಿಜೆಪಿ ಹಾಗೂ ಸಂಘದ ವಿರುದ್ಧ ಕಿಡಿ ಕಾರಿದ್ದಾರೆ.
ಅಶೋಕ್ ಅವರು ಸಂಘದವರ ಹೇಳಿಕೆಗಳನ್ನಾದರೂ ಗಮನಿಸುವ ಪ್ರಯತ್ನ ಮಾಡಿದ್ದಿದ್ದರೆ, ಇಷ್ಟು ದಡ್ಡತನ ಪ್ರದರ್ಶಿಸುವ ಪ್ರಮೇಯ ಬರುತ್ತಿರಲಿಲ್ಲ. ವಿರೋಧ ಪಕ್ಷದ ನಾಯಕರಿಗೆ ಶಾಖೆಗೆ ಹೋಗಿ ಅವರು ಕೊಟ್ಟ ಕೋಲು ಅಲ್ಲಾಡಿಸಿ ಬರುವುದು ಬಿಟ್ಟರೆ ತಮ್ಮ ಯಜಮಾನರ ಬಗ್ಗೆ ಕನಿಷ್ಠ ತಿಳುವಳಿಕೆ ಪಡೆದುಕೊಂಡಿಲ್ಲ. ಆರ್.ಎಸ್.ಎಸ್. ಸದಸ್ಯರು ಇವರಿಗೆ ತಿಳುವಳಿಕೆಯನ್ನು ಕೊಟ್ಟೂ ಇಲ್ಲ. ಅಶೋಕ್ ಅವರಿಗೆ ದೇಶದ ಇತಿಹಾಸವೂ ಗೊತ್ತಿಲ್ಲ, ಮುಖ್ಯವಾಗಿ ತಮ್ಮ ಆರ್ ಎಸ್ ಎಸ್ ಕುರಿತ ಇತಿಹಾಸವೂ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕಾನೂನು, ಸಂವಿಧಾನಗಳ ಬಗ್ಗೆ ಈಗಲಾದರೂ RSSಗೆ ಅರಿವು ಮೂಡಿದೆ ಅಲ್ಲವೇ, ಅಶೋಕಣ್ಣ?
ಅಂದಹಾಗೆ, ನಿಮ್ಮ ಗಮನಕ್ಕೆ ಇರಲಿ. ದೇಶದ ಅತ್ಯಂತ ಸಿರಿವಂತ ರಾಜಕೀಯ ಪಕ್ಷ ನಿಮ್ಮದೇ, ಚುನಾವಣಾ ಬಾಂಡ್ ಅಕ್ರಮಗಳ ಬಗೆಗಿನ ಪ್ರಶ್ನೆಗಳಿಗೆ ನಿಮ್ಮ ಉತ್ತರಗಳು ಇನ್ನೂ ಬಾಕಿ ಇವೆ. ಉತ್ತರಿಸುವ ಶೌರ್ಯ ನಿಮ್ಮಲಿದೆಯೇ? ಎಂದು ಪ್ರಶ್ನಿಸಿದರು.
ಬಿಜೆಪಿ ಪಕ್ಷದಲ್ಲಿ ನಾಯಕರೆನಿಸಿಕೊಳ್ಳಬೇಕು ಎಂದರೆ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಕಾರಬೇಕು, ಪಾಕಿಸ್ತಾನದ ಜಪ ಮಾಡಬೇಕು ಎಂದಿದ್ದ ಅಶೋಕ್ ಅವರು ಈಗ ತಾವೂ ಒಬ್ಬ ನಾಯಕ ಎನಿಸಿಕೊಳ್ಳಲು ಹೊರಟಿದ್ದಾರೆಯೇ? ಅಥವಾ 'ವಿಪಕ್ಷ ನಾಯಕ'ನ ಸ್ಥಾನ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆಯೇ? ಎಂದು ಟಾಂಗ್ ನೀಡಿದ್ದಾರೆ.
ಆರ್.ಅಶೋಕ್ ಹೇಳಿದ್ದೇನು?
ಖಾಸಗಿ ವಾಹಿನಿಯೊಂದರ ಜೊತೆಗೆ ಸಂದರ್ಶನದಲ್ಲಿ ಮಾತನಾಡುವಾಗ ಆರ್.ಅಶೋಕ್ ಅವರು, ಹಿಂದೂ ನಾಯಕರು, ಹಿಂದೂತ್ವ ಬಗ್ಗೆ ಮಾತನಾಡುವಾಗ ಮುಸ್ಲಿಮರನ್ನು ತೆಗಳೇಬೇಕು. ಅಂದಾಗ ಫೈರ್ ನಾಯಕ ಅಂತಾ ಕರೆಸಿಕೊಳ್ಳತಾರೆ. ಅಂತಹ ಪರಿಸ್ಥಿತಿ ಇದೆ. ಯಾರ ಅವರೆಂದು ಹೆಸರು ಹೇಳುವುದಿಲ್ಲ' ಎಂದು ಹೇಳಿರುವ ವಿಡಿಯೋ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದಾರೆ.


Click it and Unblock the Notifications
