Breaking: ಪ್ರವೀಣ್ ಕೊಲೆ: ಗೃಹ ಸಚಿವರ ಮನೆಗೆ ಎಬಿವಿಪಿ ಮುತ್ತಿಗೆ ಯತ್ನ
ಬೆಂಗಳೂರು ಜುಲೈ 30: ಹಿಂದು ಕಾರ್ಯಕರ್ತರ ಸರಣಿ ಹತ್ಯೆಗಳ ವಿರುದ್ಧ ಸಿಡಿದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯರು ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಶನಿವಾರ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಬೆಂಗಳೂರಿನ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ಪೈಕಿ ಹಲವರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.
ಶನಿವಾರ ಬೆಳಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಮನೆಯ ಮುಂದೆ ಬಂದ ಎಬಿವಿಪಿ ಸದಸ್ಯರು, ನಿವಾಸದ ಗೇಟ್ ತೆಗೆದು ಮುತ್ತಿಗೆ ಯತ್ನಿಸಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ತಡೆದಿದ್ದಾರೆ. ಪೊಲೀಸರು ಮತ್ತು ಎಬಿವಿಪಿ ಸದಸ್ಯರ ಮಧ್ಯೆ ವಾಗ್ವಾದ, ನೂಕಾಟ, ತೀವ್ರ ಗಲಾಟೆಗಳು ನಡೆದಿವೆ. ಗೃಹ ಸಚಿವರ ಮನೆ ಮುಂದೆ ಹೈಡ್ರಾಮವೇ ನಡೆದಿದೆ.
ಮನೆ ಮುತ್ತಿಗೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ಕಾಲು ಹಿಡಿದು ಎಳೆದೊಯ್ದ ದೃಶ್ಯಗಳು ಸೆರೆಯಾಗಿವೆ. ಆಕ್ರೋಶಗೊಂಡು ತಳ್ಳಾಟ ನಡೆಸಿದ ಹಲವರನ್ನು ವಶಕ್ಕೆ ಪಡೆಯುವ ಮೂಲಕ ಪ್ರತಿಭಟನೆ ತೀವ್ರತೆ ಕಡಿಮೆಗೊಳಿಸಲು ಪೊಲೀಸರು ಹರಸಾಹಪಡುತ್ತಿದ್ದಾರೆ.

ಈ ಹಿಂದೆ ಹಿಂದೂ ಕಾರ್ಯಕರ್ತರಾದ ಶಿವಮೊಗ್ಗದ ಹರ್ಷ ಕೊಲೆ ನಡೆದಿತ್ತು. ಇದೀಗ ಪ್ರವೀಣ್ ನೆಟ್ಟಾರು ಹತ್ಯೆಗೀಡಾಗಿದ್ದಾರೆ. ಹಿಂದುಗಳ ಸರಣಿ ಹತ್ಯೆ ನಡೆದರೂ ಸರ್ಕಾರ ಕೇವಲ ಕಠಿಣ ಕ್ರಮದ ಭರವಸೆ ನೀಡುತ್ತಿರುವುದರಿಂದ ಎಬಿವಿಪಿ ಸಂಘಟನೆಗಳ ಸೇರಿದಂತೆ ಸಾರ್ವಜನಿಕರ ಆಕ್ರೋಶ ಭುಗಿಲೆದ್ದಿದೆ. ಪರಿಣಾಮ ಗೃಹ ಸಚಿವರ ಮನೆಗೆ ಮುತ್ತಿಗೆಯ ಘಟನೆ ನಡೆದಿದೆ.

ಹಿಂದುಗಳ ಸರಣಿ ಹತ್ಯೆ ಪ್ರಕಣದಲ್ಲಿ ಸೊಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಮತ್ತು ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆ ಇರುವ ಅನುಮಾನ ವ್ಯಕ್ತವಾಗಿದೆ. ಸಂಘಟನೆಗಳ ವಿರುದ್ಧ ಏನು ಕ್ರಮಕೈಗೊಳ್ಳಲಾಗಿದೆ? ಎಂದು ಅವರು ಪ್ರಶ್ನಿಸಿದ್ದಾರೆ. ಕೂಡಲೇ ಆ ಎರಡು ಸಂಘಟನೆಗಳನ್ನು ನಿಷೇಧಿಸಿ. ಕಠಿಣ ನಿರ್ಧಾರ ಕೈಗೊಳ್ಳುವಲ್ಲಿ ಮೀನಾ ಮೇಷ ಎಣಿಸುವುದನ್ನು ಬಿಡಿ ಎಂದು ಪ್ರತಿಭಟನಾಕಾರರು ನಾಮಫಲಕ ಹಿಡಿದು, ಘೋಷಣೆ ಕೂಗಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಗೃಹ ಸಚಿವರ ಮನೆ ಬಾಗಿಲು ತೆರೆಯಲು ಯತ್ನ
ಬೆಂಗಳೂರಿನ ಜಯಮಹಲ್ ರಸ್ತೆ ಬಳಿ ಇರುವ ಆರಗ ಜ್ಞಾನೇಂದ್ರ ಅವರ ಮನೆ ಮುಂದಿನ ಗೇಟ್ ಹಾರಿ ನುಗ್ಗಿ ಬಂದ ಎಬಿವಿಪಿ ಕಾರ್ಯಕರ್ತರು, ಸಚಿವ ನಿವಾಸದ ಮನೆ ಬಾಗಿಲು ತೆರೆಯಲು ಮುಂದಾಗಿದ್ದಾರೆ. ಈ ವೇಳೆ ತಡೆದ ಪೊಲೀಸರೊಂದಿಗೆ ನೂಕು ನುಗ್ಗಲು ಉಂಟಾಗಿದೆ.ಪ್ರತಿಭಟನಾಕಾರರು ಹೂಕುಂಡಗಳನ್ನು ಒಡೆದು ಆಕ್ರೋಶಗೊಂಡ ವ್ಯಕ್ತಪಡಿಸಿದ್ದಾರೆ. ಕೆಲವರು ಸ್ಥಳದ್ಲಲೇ ಕೂತು ಪ್ರತಿಭಟನೆಗೆ ಮುಂದಾದರು. ಈ ವೇಳೆ ಸುಮಾರು 40ಮಂದಿ ಎಬಿವಿಪಿ ಸದಸ್ಯರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.












Click it and Unblock the Notifications