ಬೆಂಗಳೂರಿನ ರಸ್ತೆ ಗುಂಡಿ ಮುಚ್ಚುವ ವಿಚಾರ: ಎಂಜಿನಿಯರ್ ಗಳ ವಿರುದ್ಧ ಹೈಕೋರ್ಟ್ ಮತ್ತೆ ಗರಂ
ಬೆಂಗಳೂರು, ಮಾ.5: ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆಗುಂಡಿಗಳನ್ನು ಮುಚ್ಚುವ ವಿಚಾರ ಸಂಬಂಧ ಹೈಕೋರ್ಟ್ ವಿಭಾಗೀಯ ಪೀಠ ಮತ್ತೆ ಪಾಲಿಕೆ ಎಂಜಿನಿಯರ್ ಗಳ ವಿರುದ್ಧ ಕಿಡಿ ಕಾರಿದೆ.
ರಸ್ತೆ ಗುಂಡಿಗಳಿಂದಾಗಿ ಜನ ಸಾಯುತ್ತಿದ್ದಾರೆ, ಬಿಬಿಎಂಪಿ ಏಕೆ ರಸ್ತೆ ಗುಂಡಿ ಸಮಸ್ಯೆ ಬಗೆಹರಿಸಿಲ್ಲ. ಉದ್ದೇಶಪೂರ್ವಕವಾಗಿ ಬಿಬಿಎಂಪಿ ಇಂಜಿನಿಯರ್ ಗಳು ಹೀಗೆ ಮಾಡುತ್ತಿದ್ದಾರೆ. ಸಾವಿರಾರು ಕೋಟಿ ನೀಡಿದರೂ ರಸ್ತೆ ಸರಿಯಾಗುತ್ತಿಲ್ಲ. ಹಾಗಾಗಿ ಬಿಬಿಎಂಪಿ ಇಂಜಿನಿಯರ್ ಗಳನ್ನೇ ಬದಲಿಸಲು ಸರ್ಕಾರಕ್ಕೆ ಆದೇಶ ನೀಡುತ್ತವೆ ಎಂದು ವಿಭಾಗೀಯ ಪೀಠ ಎಚ್ಚರಿಕೆ ನೀಡಿದೆ.
ಬೆಂಗಳೂರಿನ ರಸ್ತೆ ದುಸ್ಥಿತಿ ಕುರಿತು ಕೋರಮಂಗಲದ ವಿಜಯ್ ಮೆನನ್ ಸಲ್ಲಿಸಿದ್ದ ಪಿಐಎಲ್ ಗಳು ಸಿಜೆ ರಿತುರಾತ್ ಅವಸ್ಥಿ ಅವರಿದ್ದ ವಿಭಾಗೀಯಪೀಠ ಗುರುವಾರ ವಿಚಾರಣೆ ನಡೆಸಿತು.

ಹೊಸ ಟೆಂಡರ್:
ನ್ಯಾಯಾಲಯದ ಆದೇಶದಂತೆ ನ್ಯಾಯಪೀಠದ ಮುಂದೆ ಹಾಜರಾದ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ, ರಸ್ತೆ ಗುಂಡಿಗಳನ್ನು ಮುಚ್ಚುವಾಗ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಹೈಕೋರ್ಟ್ ಆದೇಶ ಪಾಲಿಸಿ ರಸ್ತೆ ಗುಂಡಿ ಮುಚ್ಚುತ್ತೇವೆ.182 ರಸ್ತೆಗಳನ್ನು ಪೈಥಾನ್ ಯಂತ್ರ ಬಳಸಿ ರಿಪೇರಿ ಮಾಡಲಾಗುತ್ತಿದೆ.ಸಂಚಾರ ದಟ್ಟಣೆ ಹೆಚ್ಚಿರುವೆಡೆ ಪೈಥಾನ್ ಬಳಸುತ್ತಿದ್ದೇವೆ ..ಹೊಸ ಟೆಂಡರ್ ಗೆ ಯಾರೂ ಬಿಡ್ ಸಲ್ಲಿಸಿಲ್ಲ. ಆದ್ದರಿಂದ ಪೈಥಾನ್ ಯಂತ್ರಕ್ಕಾಗಿ ಮತ್ತೆ ಟೆಂಡರ್ ಕರೆಯುತ್ತೇವೆ ಎಂದರು.
ಆಗ ನ್ಯಾಯಪೀಠ, ರಸ್ತೆ ಗುಂಡಿ ಮುಚ್ಚಲು ಉತ್ತಮ ತಂತ್ರಜ್ಞಾನ ಬಳಸಿ,ಬರೀ ಕಣ್ಣೊರೆಸುವ ತಂತ್ರ ಇಲ್ಲಿ ನಡೆಯುವುದಿಲ್ಲ. ರಸ್ತೆಗುಂಡಿ ಸಮಸ್ಯೆಗೆ ಪರಿಹಾರ ಬೇಕು.ಪೈಥಾನ್ ಯಂತ್ರ ಬಳಕೆಗೆ ಮಾ.15 ರೊಳಗೆ ವರದಿ ಕ್ರಿಯಾ ಯೋಜನೆ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿತು.
ಮಿಲಿಟರಿಗೆ ಹೊಣೆ:
ಕಳೆದ ವಿಚಾರಣೆ ವೇಳೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆಗುಂಡಿ ಮುಚ್ಚುವ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಜಾಮೀನು ಸಹಿತ ವಾರೆಂಟ್ ಹೊರಡಿಸಿದ್ದ ಹಿನ್ನೆಲೆಯಲ್ಲಿ ಪಾಲಿಕೆಯ ಪ್ರಧಾನ ಎಂಜಿನಿಯರ್ ಕೆ.ಪ್ರಭಾಕರ್ ಖುದ್ದು ಹಾಜರಾಗಿ ಬೇಷರತ್ ಕ್ಷಮೆ ಯಾಚಿಸಿದರು.ಅವರ ಕ್ಷಮೆಯನ್ನು ಒಪ್ಪುವ ಮೊದಲು ನ್ಯಾಯಪೀಠ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತು. ಕೊನೆಯ ನ್ಯಾಯಪೀಠ ಸುದೀರ್ಘ ಬಾಳಿಕೆಯ ರಸ್ತೆಗಳನ್ನು ನಿರ್ಮಿಸದಿದ್ದರೆ ರಸ್ತೆ ನಿರ್ವಹಣೆ ಹೊಣೆಯನ್ನು ಮಿಲಿಟರಿಗೆ ವಹಿಸುವುದಾಗಿ ಎಚ್ಚರಿಕೆ ನೀಡಿತು.

ಎಂಜಿನಿಯರ್‌ಗೆ ಕ್ಲಾಸ್:
ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳಿರುವುದು ಗೊತ್ತಿದೆಯೇ? ನಿಮ್ಮ ಎಂಜಿನಿಯರ್ ಗಳು ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ರಸ್ತೆ ಗುಂಡಿ ಸಮಸ್ಯೆ ಸರಿಪಡಿಸಲು ಏನು ಕ್ರಮ ಕೈಗೊಂಡಿದ್ದೀರಿ? ಜೈಲಿಗೆ ಕಳುಹಿಸದೇ ನಿಮಗೆ ಕರುಣೆ ತೋರಿದ್ದೇವೆ. ಗುಣಮಟ್ಟದ ಕಾಮಗಾರಿಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಕ್ಲಾಸ್ ತೆಗೆದುಕೊಂಡಿತು.
ನ್ಯಾಯಾಲಯದ ಆದೇಶವಿದ್ದರೂ ಏಕೆ ಕಳೆದ ಬಾರಿ ವಿಚಾರಣೆಗೆ ಹಾಜರಾಗಲಿಲ್ಲ, ಸ್ವಲ್ಪ ಕರುಣೆ ತೋರಿ ಜಾಮೀನು ಸಹಿತ ವಾರೆಂಟ್ ಹೊರಡಿಸಿದ್ದೇವು, ಇಲ್ಲವಾದರೆ ನೇರ ಜೈಲಿಗೆ ಹೋಗಬೇಕಾಗಿತ್ತು. ಏಕೆ ನೀವು ಕೋರ್ಟ್ ಆದೇಶಗಳನ್ನು ಪಾಲನೆ ಮಾಡುತ್ತಿಲ್ಲ ಎಂದು ನ್ಯಾಯಪೀಠ ಪ್ರಶ್ನಿಸಿತು.
ಬಿಬಿಎಂಪಿ ಪರ ವಕೀಲರು, ರಸ್ತೆಗಳ ದುರಸ್ತಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಪೈಥಾನ್ ಯಂತ್ರ ಬಳಸಲು ಟೆಂಡರ್ ಕರೆಯಲಾಗಿದೆ. 20 ವರ್ಷ ಬಾಳಿಕೆಯ ರಸ್ತೆಗಳನ್ನು ನಿರ್ಮಿಸಲಾಗುವುದು. ಸ್ಮಾರ್ಟ್ ಸಿಟಿ ಯೋಜನೆಯಡಿಯೂ ಕಾಮಗಾರಿ ನಡೆಯುತ್ತಿದೆ ಎಂದರು.
"ನಿಮ್ಮ ಅಧೀನ ಇಂಜಿನಿಯರ್ ಗಳೇ ಸಮಸ್ಯೆ ಸೃಷ್ಟಿಸಿದ್ದಾರೆ. ದೀರ್ಘಕಾಲ ಬಾಳಿಕೆ ಬರುವಂತೆ ರಸ್ತೆ ದುರಸ್ತಿ ಮಾಡಬೇಕು.ದುರಸ್ತಿಯಾದ ರಸ್ತೆಗಳ ಪರಿಶೀಲನೆ ನಡೆಸುತ್ತೇವೆ. ರಸ್ತೆ ಗುಂಡಿಗಳಿಂದ
ಸಾವು ಸಂಭವಿಸದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ರಸ್ತೆ ನಿರ್ವಹಣೆ ಹೊಣೆಯನ್ನು ಮಿಲಿಟರಿ ಇಂಜಿನಿಯರ್ಗಳಿಗೆ ನೀಡುತ್ತೇವೆ'' ಎಂದು ನ್ಯಾಯಪೀಠ ಎಚ್ಚರಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications