ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮೋದಿ-ಶಾ ಚಕ್ರವ್ಯೂಹ?
ಮೈಸೂರು: ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ರಣತಂತ್ರ ರೂಪಿಸಿ ಪ್ರಚಾರ ನಡೆಸುತ್ತಿದ್ದಾರೆ. ಈ ನಡುವೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ತೊಡೆತಟ್ಟಿದ್ದು, ಸೋಮಣ್ಣ ಗೆಲುವಿಗೆ ಪ್ಲ್ಯಾನ್ ರೆಡಿಯಾಗಿದೆ. ವರುಣಾ ಕ್ಷೇತ್ರಕ್ಕೆ ಪಿಎಂ ಮೋದಿ, ಅಮಿತ್ ಶಾ ಆಗಮನದ ಮೂಲಕ ಸಿದ್ದರಾಮಯ್ಯ ವಿರುದ್ಧ ಚಕ್ರವ್ಯೂಹ ಸಿದ್ಧವಾದಂತೆ ಕಾಣ್ತಿದೆ.
ಹೌದು, ಚುನಾವಣೆ ಕಾವು ಕ್ಷಣಕ್ಷಣಕ್ಕೂ ಏರುತ್ತಿದೆ. ಹೈವೋಲ್ಟೇಜ್ ಕ್ಷೇತ್ರಗಳ ಮೇಲೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸುತ್ತಿರುವ ವರುಣಾ ಮೇಲೆ ದೇಶದ ಗಮನ ನೆಟ್ಟಿದೆ. ಈ ಹೊತ್ತಲ್ಲೇ ಮೈಸೂರು ಪ್ರಚಾರ ಅಖಾಡಕ್ಕೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಬರುವುದು ಕನ್ಫರ್ಮ್ ಆಗಿದೆ. ಈ ಮೂಲಕ ಚುನಾವಣೆ ಟೆನ್ಷನ್‌ನಲ್ಲಿದ್ದ ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಅದು ಹೇಗೆ ಎಂಬುದನ್ನ ಮುಂದೆ ಓದಿ.

ವರುಣಾ ಕ್ಷೇತ್ರದಲ್ಲಿ ಬಿಜೆಪಿ ಬೇಟೆ!
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಗೆಲುವಿಗೆ ಭರ್ಜರಿ ಪ್ರಚಾರ ನಡೆಸುತ್ತಿರುವ ಸಚಿವ ವಿ. ಸೋಮಣ್ಣಗೆ ದೊಡ್ಡ ಅಸ್ತ್ರ ಸಿಕ್ಕೇಬಿಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿ.ಸೋಮಣ್ಣ ಕ್ಷೇತ್ರದಲ್ಲಿ ಪ್ರಚಾರ ನಡೆಸುವುದು ಕನ್ಫರ್ಮ್ ಆಗಿದೆ. ಈ ಕುರಿತು ಸ್ವತಃ ಸೋಮಣ್ಣ ಮಾಹಿತಿ ನೀಡಿದ್ದಾರೆ. ಈ ಮೂಲಕ ವರುಣಾ ಕ್ಷೇತ್ರದಲ್ಲಿ ಕೈಪಡೆ ಸೋಲಿಗೆ ಭರ್ಜರಿ ಮಾಸ್ಟರ್ ಪ್ಲ್ಯಾನ್ ಸಿದ್ಧವಾದಂತೆ ಕಾಣುತ್ತಿದೆ.
ವರುಣಾದಲ್ಲಿ ಪ್ರಚಾರ ನಡೆಸುವಾಗ, ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಂತೆ ಸೋಮಣ್ಣ ಮತದಾರರ ಬಳಿ ಮನವಿ ಮಾಡಿದ್ದಾರೆ. ಇದೇ ಸಮಯದಲ್ಲಿ ವರುಣಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಚಾರ ಮಾಡುವ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಮೇ 2ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮೇ 4ರಂದು ಪ್ರಧಾನಿ ಮೋದಿ ಆಗಮಿಸುವ ಬಗ್ಗೆ ಸ್ಥಳೀಯ ಮತದಾರರಿಗೆ ಸಚಿವ ಸೋಮಣ್ಣ ಮಾಹಿತಿ ನೀಡಿದ್ದಾರೆ.
ಸಿದ್ದರಾಮಯ್ಯ ಕಟ್ಟಿಹಾಕಲು ತಂತ್ರ?
ಕಾಂಗ್ರೆಸ್ ನಾಯಕರನ್ನು ಅವರದ್ದೇ ಕ್ಷೇತ್ರದಲ್ಲಿ ಕಟ್ಟಿಹಾಕುವ ಮೂಲಕ ಗೆಲುವು ಸುಲಭ ಮಾಡಿಕೊಳ್ಳುವ ತಂತ್ರ ಕೂಡ ಇದರ ಹಿಂದಿದೆ ಎಂಬ ಚರ್ಚೆ ಶುರುವಾಗಿದೆ. ವರುಣಾ ಕ್ಷೇತ್ರದಲ್ಲಿ ವಿ.ಸೋಮಣ್ಣ ಅಭ್ಯರ್ಥಿ ಎಂದು ಘೋಷಣೆಯಾದ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಗಮನ ಕೊಡುವಂತೆ ಮಾಡುವುದು ಕಮಲ ಪಡೆಯ ಪ್ಲ್ಯಾನ್ ಎಂಬ ಚರ್ಚೆ ಜೋರಾಗಿದೆ. ಹಾಗೇ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು ಪ್ರಚಾರಕ್ಕೆ ಬಂದರೆ ಬಿಜೆಪಿ ಗೆಲುವಿನ ಸಾಧ್ಯತೆ ಮತ್ತಷ್ಟು ಹೆಚ್ಚಾಗುವ ಲೆಕ್ಕಾಚಾರ ಇದೆ.

ಜಾತಿ ಲೆಕ್ಕಾಚಾರ ಹೇಳುವುದೇನು?
ವರುಣಾ ಕ್ಷೇತ್ರದಲ್ಲಿ ಗೆದ್ದೇ ಗೆಲ್ಲಬೇಕು ಎಂಬ ಹಠ ಬಿಜೆಪಿ ನಾಯಕರದ್ದು. ಹೀಗಾಗಿಯೇ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಈಗ ಜಾತಿ ಲೆಕ್ಕಾಚಾರ ಕೂಡ ಶುರುವಾಗಿದೆ. ಹಾಗಾದರೆ ವರುಣಾ ಕ್ಷೇತ್ರದಲ್ಲಿನ ಜಾತಿವಾರು ಮತದಾರರನ್ನು ನೋಡುವುದಾದರೆ ಇಲ್ಲಿ 55 ಸಾವಿರ ಲಿಂಗಾಯತ ಮತದಾರರಿದ್ದು ಇವರದ್ಧೇ ನಿರ್ಣಾಯಕ ಪಾತ್ರ ಎನ್ನಬಹುದು. ಲಿಂಗಾಯತ ಮತದಾರರನ್ನ ಬಿಟ್ಟರೆ, ಕುರುಬ ಸಮುದಾಯದ ಮತದಾರರು 35 ಸಾವಿರದಷ್ಟು ಇದ್ದಾರೆ.
ಇನ್ನುಳಿದವರ ಪಾತ್ರ ಬಹುಮುಖ್ಯ!
ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಗೆಲುವಿಗೆ ಚುನಾವಣಾ ಲೆಕ್ಕಾಚಾರ ಶುರುವಾಗುವುದೇ ಇಲ್ಲಿ. ಲಿಂಗಾಯತ ಹಾಗೂ ಕುರುಬ ಸಮುದಾಯದ ಮತಗಳನ್ನು ಹೊರತುಪಡಿಸಿ, ಪರಿಶಿಷ್ಟ ಜಾತಿ ಸಮುದಾಯದ 43 ಸಾವಿರ ಮತದಾರರು ಸೇರಿದಂತೆ ಪರಿಶಿಷ್ಟ ಪಂಗಡದ 23 ಸಾವಿರ ಮತಗಳು ಇಲ್ಲಿವೆ. ಇನ್ನುಳಿದಂತೆ ಒಕ್ಕಲಿಗರು 12 ಸಾವಿರ ಹಾಗೂ ಇತರ ಹಿಂದುಳಿದ ವರ್ಗಗಳ ಸಮುದಾಯದ 12 ಸಾವಿರ ಮತಗಳು ವರುಣಾ ಕ್ಷೇತ್ರದಲ್ಲಿ ಇರುವುದು ಗಮನಾರ್ಹ.
ಒಟ್ನಲ್ಲಿ ಮತದಾನಕ್ಕೆ ಕೌಂಟ್‌ಡೌನ್ ಶುರುವಾದ ಬೆನ್ನಲ್ಲೇ ಅಸ್ತ್ರ ಮತ್ತು ಪ್ರತ್ಯಸ್ತ್ರ ಜೋರಾಗಿದೆ. ರಾಜಕೀಯ ಪಕ್ಷಗಳ ಆರೋಪ, ಪ್ರತ್ಯಾರೋಪಕ್ಕೆ ಕರ್ನಾಟಕದ ಮತದಾರ ಪ್ರಭು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾನೆ ಎಂಬುದನ್ನ ಕಾದು ನೋಡಬೇಕು. ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಅಂದೇ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ವಿ. ಸೋಮಣ್ಣ ಅವರ ರಾಜಕೀಯ ಭವಿಷ್ಯವೂ ನಿರ್ಧಾರವಾಗಲಿದೆ.












Click it and Unblock the Notifications