ಮೆಟ್ರೋ ನಿಲ್ದಾಣದ ಬೆಂಗಳೂರು ಸಂತೆಗೆ ಒಂದು ವರ್ಷ
ಬೆಂಗಳೂರು, ಮೇ 8 : ಸ್ವಾಮಿ ವಿವೇಕಾನಂದ ನಮ್ಮ ಮೆಟ್ರೋ ನಿಲ್ದಾಣದ ಬೆಂಗಳೂರು ಸಂತೆ ಒಂದು ವರ್ಷ ಪೂರ್ಣಗೊಳಿಸಿ ಎರಡನೇ ವರ್ಷಕ್ಕೆ ಕಾಲಿಟ್ಟಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಆಯೋಜಿಸಿದ್ದು ಮೇ 25ರಿಂದ ಜೂನ್ 1ರವರೆಗೆ ಕಾರ್ಯಕ್ರಮಗಳು ನಡೆಯಲಿವೆ.
ಬೆಂಗಳೂರಿನಲ್ಲಿ ಮಾತನಾಡಿದ ಬೆಂಗಳೂರು ಸಂತೆಯ ಮುಖ್ಯ ಆಡಳಿತಾಧಿಕಾರಿ ಡಾ.ಕೆ.ಪ್ರಭಾಕರ ರಾವ್, ಮೇ 8ರ ಗುರವಾರ ಬೆಂಗಳೂರು ಸಂತೆ ಒಂದು ವರ್ಷ ಪೂರ್ಣಗೊಳಿಸಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮೇ 25ರಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಒಂದು ವರ್ಷದ ಸಂಭ್ರಮವನ್ನು ಆಚರಿಸಲಾಗುತ್ತದೆ ಎಂದರು.

ಮೇ 25ರಿಂದ ಪ್ರತಿ ದಿನ ಸಂಜೆ 5.30ರಿಂದ 8.30ರವರೆಗೆ ಗಾಯನ ಹಾಗೂ ನೃತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹಿರಿಯ ಗಾಯಕಿ ಡಾ.ಶ್ಯಾಮಲಾ ಜಿ. ಭಾವೆ, ಗಾಯಕ ಶಶಿಧರ ಕೋಟೆ ಸೇರಿದಂತೆ 14 ಕಲಾ ತಂಡಗಳ ಕಲಾವಿದರು ಕಾರ್ಯಕ್ರಮ ನಡೆಸಿಕೊಡಲಿದ್ದು, ಇದಕ್ಕೆ ಯಾವುದೇ ಪ್ರವೇಶ ಶುಲ್ಕ ವಿಧಿಸಿಲ್ಲ ಎಂದು ಹೇಳಿದರು.
ಬೆಂಗಳೂರು ಸಂತೆಯ ಒಂದು ವರ್ಷದ ಕಾರ್ಯಕ್ರಮನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿದೆ. ಪ್ರತಿದಿನ ಹಿಂದೂಸ್ತಾನಿ, ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಜನಪದ ಗೀತೆಗಳ ಗಾಯನ ಮತ್ತು ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕಮದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಎಷ್ಟು ಮಳಿಗೆಗಳಿವೆ : ಬೆಂಗಳೂರು ಸಂತೆಯಲ್ಲಿ ಸದ್ಯ 72 ಮಳಿಗಳಿವೆ. 231 ಸ್ವಸಹಾಯ ಸಂಘಗಳು ಮಳಿಗೆಗಳಲ್ಲಿ ಕರಕುಶಲ, ಸಾಂಪ್ರದಾಯಿಕ, ಕಸೂತಿ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ನಡೆಸಿವೆ ಎಂದು ಪ್ರಭಾಕರ ರಾವ್ ಮಾಹಿತಿ ನೀಡಿದರು. ಸಂತೆಯಲ್ಲಿ ಎರಡು ತಿಂಗಳ ಮಟ್ಟಿಗೆ ಮಳಿಗೆಯನ್ನು ಬಾಡಿಗೆ ಕೊಡಲಾಗುತ್ತದೆ. ನಂತರ ಮಳಿಗೆಯನ್ನು ಮತ್ತೊಬ್ಬರಿಗೆ ನೀಡಲಾಗುತ್ತದೆ ಎಂದರು.
ಪ್ರತಿ ಮಳಿಗೆಗೆ ದಿನಕ್ಕೆ ರೂ.100 ಬಾಡಿಗೆ ಮತ್ತು ವಹಿವಾಟಿನ ಶೇ 5ರಷ್ಟು ಕಮಿಷನ್ ಹಣ ಪಡೆಯಲಾಗುತ್ತಿದೆ. ಒಂದು ವರ್ಷದಲ್ಲಿ ಜನರಿಂದ ಮತ್ತು ಮಾರಾಟಗಾರರಿಂದ ಬೆಂಗಳೂರು ಸಂತೆಗೆ ಉತ್ತಮ ಪತ್ರಿಕ್ರಿಯೆ ದೊರಕಿದ್ದು, ವಾರಾಂತ್ಯದಲ್ಲಿ ಹೆಚ್ಚು ಜನರು ಆಗಮಿಸುತ್ತಾರೆ ಎಂದು ಹೇಳಿದರು. ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ವಿಶೇಷವಾದ ಕರಕುಶಲ ವಸ್ತುಗಳ ಪ್ರದರ್ಶನವನ್ನು ಗುರುವಾರದಿಂದ 20 ದಿನಗಳ ಕಾಲ ಆಯೋಜಿಸಲಾಗಿದೆ ಎಂದು ಹೇಳಿದರು.












Click it and Unblock the Notifications